ADVERTISEMENT

ಭಾಲ್ಕಿ: 29 ಮಕ್ಕಳು ಶಾಲೆಯಿಂದ ಹೊರಗೆ; ವರದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 5:55 IST
Last Updated 14 ಡಿಸೆಂಬರ್ 2025, 5:55 IST
ಭಾಲ್ಕಿ ತಾಲ್ಲೂಕಿನ ಆಳಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸಿದರು
ಭಾಲ್ಕಿ ತಾಲ್ಲೂಕಿನ ಆಳಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸಿದರು   

ಭಾಲ್ಕಿ: ತಾಲ್ಲೂಕಿನ ವಿವಿಧ ಶಾಲೆಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಭೇಟಿ ನೀಡಿ ಪರಿಶೀಲಿಸಿದರು.

ಆಳಂದಿ, ಡೋಣಗಾಪೂರ ಗ್ರಾಮದ ಸರ್ಕಾರಿ ಶಾಲೆಗಳಿಗೆ ಅವರು ಶನಿವಾರ ಭೇಟಿ ನೀಡಿ ಮಕ್ಕಳ ದಾಖಲಾತಿ, ಹಾಜರಾತಿ, ಬಿಸಿಯೂಟ, ಕುಡಿಯುವ ನೀರು, ಶಾಲಾ ಆವರಣ ಸ್ವಚ್ಛತೆ ಸೇರಿ ಮತ್ತಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಮೊದಲಿಗೆ ಆಳಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಮಕ್ಕಳ ಹಾಜರಾತಿ ಮತ್ತು ದಾಖಲಾತಿ ಪುಸ್ತಕ ಪರಿಶೀಲಿಸಿದರು. ಈ ವೇಳೆ ಶಾಲೆಯಲ್ಲಿ ಒಟ್ಟು 48 ವಿದ್ಯಾರ್ಥಿಗಳು ದಾಖಲಾತಿ ಇದ್ದರೆ ತರಗತಿಯಲ್ಲಿ ಕೇವಲ 19 ಮಕ್ಕಳು ಇದ್ದದ್ದು ಕಂಡು ಉಳಿದ 29 ಮಕ್ಕಳು ಏಕೆ ಶಾಲೆಯಿಂದ ಹೊರಗುಳಿದ್ದಾರೆ ಎಂದು ಪ್ರಶ್ನಿಸಿದರು.

ADVERTISEMENT

ದಾಖಲಾತಿ ಪ್ರಕಾರ ಮಕ್ಕಳನ್ನು ಹಾಜರಾತಿಯಲ್ಲಿ ತೋರಿಸಲಾಗುತ್ತಿದೆ. ಆದರೆ ತರಗತಿಯಲ್ಲಿ ಪ್ರಸ್ತುತ 18-20ಮಕ್ಕಳು ಮಾತ್ರ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಉಳಿದ 29 ಮಕ್ಕಳು ಒಂದೇ ದಿನ ಶಾಲೆಯಿಂದ ಹೊರಗೆ ಉಳಿಯಲು ಹೇಗೆ ಸಾಧ್ಯ, ಗೈರಾದ ಮಕ್ಕಳು ಬೇರೆಡೆ ಶಿಕ್ಷಣ ಪಡೆಯುತ್ತಿದ್ದಾರೆಯೇ? ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು ಪೂರ್ಣ ಪ್ರಮಾಣದಲ್ಲಿ ಹೇಗೆ ಬಳಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಮೇಲ್ನೋಟಕ್ಕೆ ಸರ್ಕಾರದ ಸೌಲಭ್ಯಗಳನ್ನು ಶಾಲೆಯಿಂದ ಹೊರಗುಳಿದ ಮಕ್ಕಳ ಹೆಸರಿನಲ್ಲಿ ಬಳಕೆ ಮಾಡಿಕೊಂಡಂತೆ ಕಾಣುತ್ತಿದೆ. ಎರಡ್ಮೂರು ದಿನಗಳಲ್ಲಿ ಸಮಗ್ರ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಿ ಎಂದು ಸಿಆರ್‌ಪಿಗೆ ಸೂಚನೆ ನೀಡಿದರು.

ಡೋಣಗಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡು ಬಂತು. ಎಲ್ಲ ಅಂಗನವಾಡಿ, ಶಾಲೆಗಳಿಗೆ ಜಲಜೀವನ ಮಿಷನ್ ಯೋಜನೆಯಡಿ ನಲ್ಲಿ ಸಂಪರ್ಕ ಕಲ್ಪಿಸಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ಶಾಲೆಯಲ್ಲಿ ಏಕೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಕುಡಿಯಲು ಮತ್ತು ಶೌಚ ಬಳಕೆ ನೀರು ಇಲ್ಲದಿದ್ದರೇ ಮಕ್ಕಳ ಕಲಿಕೆ ಹೇಗೆ ಪ್ರಗತಿ ಹೊಂದಲು ಸಾಧ್ಯ ಮುಂದಿನ ಮೂರು ದಿನಗೊಳಗೆ ವ್ಯವಸ್ಥೆ ಸರಿಪಡಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ಡೋಣಗಾಪೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಭೇಟಿ ನೀಡಿ ಶೌಚಾಲಯದ ಸ್ಥಿತಿಗತಿ ಪರಿಶೀಲಿಸಿದರು
ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದರ ಜತೆ ಅಗತ್ಯ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೇ ಆಯೋಗ ಮಧ್ಯ ಪ್ರವೇಶಿಸಿ ಸಂಬಂಧಿತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ
ಶಶಿಧರ ಕೋಸಂಬೆ ಅಧ್ಯಕ್ಷ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.