
ಭಾಲ್ಕಿ: ಪಟ್ಟಣ ಸೇರಿ ಗ್ರಾಮೀಣ ಭಾಗದ ಎಲ್ಲ ಅಂಗಡಿ ಮುಗ್ಗಟ್ಟು, ಸರ್ಕಾರಿ ಕಚೇರಿ, ಶಾಲಾ-ಕಾಲೇಜು ನಾಮಫಲಕ ಕಡ್ಡಾಯವಾಗಿ ಕನ್ನಡಗೊಳಿಸಬೇಕು ಎಂದು ‘ನಮ್ಮ ಕರ್ನಾಟಕ ಸೇನೆ’ಯ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ ನೇತೃತ್ವದಲ್ಲಿ ಪದಾಧಿಕಾರಿಗಳು ಸೋಮವಾರ ಮನವಿ ಪತ್ರ ಸಲ್ಲಿಸಿದರು.
‘ತಾಲ್ಲೂಕಿನ ಎಲ್ಲ ಕಡೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ನಮ್ಮ ಕರ್ನಾಟಕ ಸೇನೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೂ ಕೂಡ ತಾಲ್ಲೂಕು ಆಡಳಿತದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಲ್ಲೆಡೆ ಅನ್ಯ ಭಾಷೆಗಳ ನಾಮಫಲಕ ರಾರಾಜಿಸುತ್ತಿವೆ. ಸರ್ಕಾರ ಈಗಾಗಲೇ ಕನ್ನಡ ನಾಮಫಲಕ ಕಡ್ಡಾಯಗೊಳಿಸಿದೆ. ಆದರೂ ಕೂಡ ಪಟ್ಟಣದ ಬಹುತೇಕ ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳ ಮೇಲೆ ಅನ್ಯ ಭಾಷೆ ಇರುವುದು ಕಂಡು ಬರುತ್ತಿವೆ. ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಆಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಸುತ್ತೋಲೆ ಹೊರಡಿಸಿ ಎಲ್ಲ ಕಡೆಗಳಲ್ಲಿ ಕನ್ನಡ ನಾಮಫಲಕ ಅಳವಡಿಸುವ ಕೆಲಸ ಆಗಬೇಕು ವಿಳಂಬವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ. ಪ್ರಮುಖರಾದ ಲೋಕೇಶ ಪಾಟೀಲ, ಭದ್ರಯ್ಯ ಸ್ವಾಮಿ, ಬಸವರಾಜ ಕಾರಬಾರಿ, ಸಂಗಮೇಶ ಮಾರ್ಗೆ, ವೀರಭದ್ರ ಸ್ವಾಮಿ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.