ADVERTISEMENT

‘ವರ್ಷದಲ್ಲಿ ಕ್ರೀಡಾಂಗಣ ಕಾಮಗಾರಿ ಪೂರ್ಣ’: ಸಚಿವ ಈಶ್ವರ ಖಂಡ್ರೆ

ಭಾಲ್ಕಿ: ₹ 14.75 ಕೋಟಿ ಅನುದಾನದಲ್ಲಿ ಕ್ರೀಡಾಂಗಣ ಕಾಮಗಾರಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 6:27 IST
Last Updated 20 ಜುಲೈ 2025, 6:27 IST
ಭಾಲ್ಕಿಯ ಹೊರವಲಯದಲ್ಲಿ ನಿರ್ಮಾಣವಾಗಲಿರುವ ಕ್ರೀಡಾಂಗಣದ ನೀಲ ನಕ್ಷೆಯನ್ನು ಸಚಿವ ಈಶ್ವರ ಖಂಡ್ರೆ ವೀಕ್ಷಿಸಿದರು
ಭಾಲ್ಕಿಯ ಹೊರವಲಯದಲ್ಲಿ ನಿರ್ಮಾಣವಾಗಲಿರುವ ಕ್ರೀಡಾಂಗಣದ ನೀಲ ನಕ್ಷೆಯನ್ನು ಸಚಿವ ಈಶ್ವರ ಖಂಡ್ರೆ ವೀಕ್ಷಿಸಿದರು   

ಭಾಲ್ಕಿ: ‘ರಾಷ್ಟ್ರಮಟ್ಟದ ಕ್ರೀಡೆಗಳನ್ನು ನಡೆಸಲು ಅಗತ್ಯವಿರುವ ಸಕಲ ಸೌಲಭ್ಯಗಳನ್ನು ಒಳಗೊಂಡಿರುವ ಕ್ರೀಡಾಂಗಣದ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಪಟ್ಟಣದ ಹೊರವಲಯದ ಅಂಬೇಸಾಂಗವಿ ಕ್ರಾಸ್ ರಸ್ತೆಯ ಟೆಕಣಿ ಸಮೀಪದಲ್ಲಿ ಶನಿವಾರ ಆಯೋಜಿಸಿದ್ದ ₹ 14.75 ಕೋಟಿ ಅನುದಾನದ ಕ್ರೀಡಾಂಗಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆಗಬೇಕು ಎನ್ನುವುದು ಬಹು ದಿನಗಳ ಕನಸಾಗಿತ್ತು. ಆದರೆ ಸೂಕ್ತ ಜಮೀನು ಸಿಗದಿರುವ ಹಿನ್ನೆಲೆಯಲ್ಲಿ ವಿಳಂಬವಾಯಿತು. ಇದೀಗ ಪಟ್ಟಣದ ಟೆಕಣಿ ಸಮೀಪದ ಅರಣ್ಯ ಭೂಮಿಯನ್ನು ನಿಯಮಾನುಸಾರ ಹಸ್ತಾಂತರಿಸಿ ಸುಮಾರು 18 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಈ ಕ್ರೀಡಾಂಗಣ ಜಿಲ್ಲೆಗೆ ಮಾದರಿ ಆಗಲಿದೆ’ ಎಂದು ತಿಳಿಸಿದರು.

ADVERTISEMENT

‘ಮುಂದಿನ ಒಂದು ವರ್ಷದಲ್ಲಿ ಕ್ರೀಡಾಂಗಣ ಕಾಮಗಾರಿ ಪುರ್ಣಗೊಳಿಸಿ ಸಿಎಂ ಮತ್ತು ಡಿಸಿಎಂ ಅವರನ್ನು ಕರೆಸಿ ಲೋಕಾರ್ಪಣೆ ಮಾಡಲಾಗುವುದು’ ಎಂದರು.

ಬೀದರ್ ಜಿಲ್ಲೆಯಲ್ಲಿ ಮುಂದಿನ ಎರಡು ವರ್ಷದೊಳಗೆ ಒಂದು ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದು ಸಚಿವ ಖಂಡ್ರೆ ತಿಳಿಸಿದರು.

ಜಿಲ್ಲೆಯಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಆಶಯದೊಂದಿಗೆ ಈಗಾಗಲೇ ಕಳೆದ ಎರಡು ವರ್ಷಗಳಿಂದ 40 ಲಕ್ಷ ಸಸಿ ನೆಡಲಾಗಿದೆ. ನೆಟ್ಟಿರುವ ಸಸಿಗಳನ್ನು ಪಾಲನೆ ಪೋಷಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಮನೆಗೊಂದು ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ಪ್ರಮುಖರಾದ ಬಸವರಾಜ ವಂಕೆ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಅರಣ್ಯಾಧಿಕಾರಿ ಆಶಿಶ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಉದ್ಯಮಿ ಗುರುನಾಥ ಕೊಳ್ಳೂರ, ಪ್ರಥಮ ದರ್ಜೆ ಗುತ್ತಿಗೆದಾರ ಸಚಿನ್ ಕೊಳ್ಳೂರ, ಪಿಯು ಉಪನಿರ್ದೇಶಕ ಚಂದ್ರಕಾಂತ ಶಾಹಬಾದಕರ್, ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರೆ ಸೇರಿದಂತೆ ಇತರರು ಇದ್ದರು.

ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.

ಭಾಲ್ಕಿಯ ಹೊರವಲಯದಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಚಾಲನೆ ನೀಡಿದರು
ಅತ್ಯಾಧುನಿಕ ಸೌಲಭ್ಯಗಳ ಕ್ರೀಡಾಂಗಣ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ವೃತ್ತಿಪರ ಬೆಳವಣಿಗೆಗೆ ಸಹಕಾರಿಯಾಗಲಿದೆ
ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ

ಕ್ರೀಡಾಂಗಣದಲ್ಲಿರುವ ಸೌಲಭ್ಯಗಳು:

‘ನೂತನ ಆಧುನಿಕ ಸೌಲಭ್ಯಗಳಿರುವ ಈ ಕ್ರೀಡಾಂಗಣದಲ್ಲಿ ಕಬಡ್ಡಿ ಕೋರ್ಟ್ ಬ್ಯಾಡ್ಮಿಂಟನ್ ಬ್ಯಾಸ್ಕೆಟ್‌ಬಾಲ್‌ ಕೋರ್ಟ್ ಕ್ರಿಕೆಟ್ ಮೈದಾನ ಸ್ವಿಮಿಂಗ್ ಪೂಲ್ ಸೇರಿದಂತೆ ಇತರ ಕ್ರೀಡೆಗಳ ಸಿದ್ಧತೆ ತರಬೇತಿ ಸ್ಪರ್ಧೆಗೆ ಅಗತ್ಯ ಸೌಲಭ್ಯಗಳು ಇರಲಿವೆ’ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.