ಭಾಲ್ಕಿ: ಪುರುಷರು ಮತ್ತು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸರಿ ಸಮಾನರಾಗಿ ನಡೆದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಪ್ರಾಚಾರ್ಯ ಲಕ್ಷ್ಮಣ ಕಾಂಬಳೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಹೆಣ್ಣು ಸಮಾಜದ ಕಣ್ಣು. ಹೆಣ್ಣೊಂದು ಕಲಿತರೆ ಶಾಲೆ ತೆರೆದಂತೆ ಎಂಬ ಹೇಳಿಕೆಗಳು ಹೆಣ್ಣಿನ ಮಹತ್ವದ ಕುರಿತು ಮಾಹಿತಿ ನೀಡುತ್ತವೆ’ ಎಂದರು.
ಡಾ. ಜೈಶ್ರೀ ಪಿ. ಮಾತನಾಡಿ, ‘ಮಹಿಳೆಯರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ಮಹಿಳೆಯರು ತಮಗೆ ದೊರೆಯುತ್ತಿರುವ ಅವಕಾಶಗಳಿಗಾಗಿ ಅಂಬೇಡ್ಕರ್ ಅವರಿಗೆ ಸದಾ ಚಿರಋಣಿಯಾಗಿರಬೇಕು’ ಎಂದು ಹೇಳಿದರು.
ಮಹಿಳಾ ಅಭಿವೃದ್ಧಿ ಕೋಶದ ಸಂಯೋಜಕ ರಘುನಂದನ ಮಾತನಾಡಿದರು.
ಎಲ್ಲ ಮಹಿಳಾ ಸಿಬ್ಬಂದಿ ವರ್ಗದವರಿಗೆ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಮುಖರಾದ ಬಸವರಾಜೇಶ್ವರಿ ನಾಗಮ್ಮ ಬಂಗರಗಿ, ವಿಜಯಲಕ್ಷ್ಮಿ, ಸ್ವಪ್ನ, ತುಪ್ಪದ ವೀರಣ್ಣ, ಹೇಮಾವತಿ ಪಾಟೀಲ, ರವಿ ಮೇಟಿ, ಸಹನಾ, ಸಿಂಧು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.