ಕುಟುಂಬ ಸದಸ್ಯರೊಂದಿಗೆ ಭೀಮಣ್ಣ ಖಂಡ್ರೆ
- ಪ್ರಜಾವಾಣಿ ಚಿತ್ರ
ಬಸವಕಲ್ಯಾಣ: ಭೀಮಣ್ಣ ಖಂಡ್ರೆ ಸಂಸಾರಿ ಆಗಿದ್ದರೂ ಸನ್ಯಾಸಿಯಂತೆಯೇ ಇದ್ದರು ಎನ್ನಬಹುದು. ಅವರು ಎಲ್ಲಿಯೇ ಮಾತನಾಡಿದರೂ ಬಸವಾದಿ ಶರಣರು, ಭಾಲ್ಕಿ ಚನ್ನಬಸವ ಪಟ್ಟದ್ದೇವರ ಕುರಿತಾಗಿ ಜೊತೆಯಲ್ಲಿಯೇ ಸ್ವಾಮಿ ವಿವೇಕಾನಂದರ ಕಠೋರ ಜೀವನದ ಅಂಶಗಳನ್ನು ಹೇಳುತ್ತಿದ್ದುದ್ದುಂಟು. ಅದರಂತೆ ಜೀವನದಲ್ಲೂ ಅತ್ಯಂತ ಕಠಿಣ ನಿಯಮಗಳನ್ನು ಪಾಲಿಸುತ್ತಿದ್ದರು. ಹಣ್ಣಿನ ರಸ ನಿಯಮಿತವಾಗಿ ಸೇವಿಸುವುದನ್ನು ರೂಢಿಸಿಕೊಂಡಿದ್ದರು.
ಈ ಎಲ್ಲ ಕಾರಣಗಳಿಂದ ಅವರು ಶತಾಯುಷಿ ಆದರೆನ್ನಬಹುದು. `ಶ್ರೀ ನಾಗಭೂಷಣ ಶಿವಯೋಗಿಗಳು ಮತ್ತು ಯೋಗ ಚಿಕಿತ್ಸೆ' (ಲೇ: ಅಶೋಕ ಕಾಮಶೆಟ್ಟಿ) ಪುಸ್ತಕದಲ್ಲಿ ಅವರು ಮುನ್ನುಡಿ ಬರೆದಿದ್ದು, ಅದರಲ್ಲಿ ತಮ್ಮ ಸುದೀರ್ಘ ಆರೋಗ್ಯದ ಗುಟ್ಟು ಅವರು ಬಿಚ್ಚಿಟ್ಟಿದ್ದಾರೆ. ಮುಚಳಂಬದ ನಾಗಭೂಷಣ ಶಿವಯೋಗಿಗಳಿಂದ ಒಂದು ತಿಂಗಳ ಪರ್ಯಂತ ಚಿಕಿತ್ಸೆ ಪಡೆದಿದ್ದು, ಈ ಅವಧಿಯಲ್ಲಿ ಅವರಿಂದ ಧೌತಿ, ನವಲಿ, ಬಸ್ತಿ ಮುಂತಾದ ಯೋಗ ಕ್ರೀಯೆಗಳನ್ನು ಕಲಿತಿದ್ದೇನೆ. ಅವರ ಕೃಪೆಯಿಂದ ಜೀವನ ವಿಧಾನದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿಕೊಂಡಿದ್ದರಿಂದಲೇ ನಾನು ಎಂಬತ್ತೇಳರ ವಯಸ್ಸಿನಲ್ಲೂ (ಪುಸ್ತಕ ಪ್ರಕಟಣೆ ವರ್ಷ-2008) ಹೆಚ್ಚಿನ ಯಾವುದೇ ತೊಂದರೆಗಳಿಲ್ಲದೆ ಸಾಮಾನ್ಯ ಜೀವನ ನಡೆಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣದೊಂದಿಗೆ ಅವರ ನಂಟು ಬಹಳಷ್ಟಿತ್ತು. ಇಲ್ಲಿನ ಯಾವುದೇ ಕಾರ್ಯ ಮತ್ತು ಕಾರ್ಯಕ್ರಮದಲ್ಲಿ ಅವರು ತಪ್ಪದೇ ಹಾಜರಿರುತ್ತಿದ್ದರು. ಭಾಲ್ಕಿಯಿಂದ ಬಸವಕಲ್ಯಾಣಕ್ಕೆ ಬರುವಾಗ ಮುಚಳಂಬಕ್ಕೂ ಭೇಟಿ ನೀಡುತ್ತಿದ್ದರು. ನಾಗಭೂಷಣ ಶಿವಯೋಗಿಗಳು ಲಿಂಗೈಕ್ಯವಾದ ನಂತರ ಗ್ರಾಮದಲ್ಲಿನ ಅವರ ಸಮಾಧಿ ಸ್ಥಳದಲ್ಲಿ ಭವ್ಯ ಮಂದಿರ ಸಹ ಇವರ ನೇತೃತ್ವದಲ್ಲೇ ಕಟ್ಟಲಾಗಿದೆ. ಭೀಮಣ್ಣ ಖಂಡ್ರೆಯವರು ಬಸವಕಲ್ಯಾಣಕ್ಕೆ ಹೋಗುತ್ತಿದ್ದಾರೆ ಎಂದರೆ ತಮ್ಮೂರಿಗೆ ಅವರು ಬರುವುದು ನಿಶ್ಚಿತ ಎಂದು ಮುಚಳಂಬದ ಜನರು ಸಹ ಅವರ ಸ್ವಾಗತಕ್ಕಾಗಿ ಹಾರತುರಾಯಿ ತೆಗೆದುಕೊಂಡು ರಸ್ತೆಗೆ ನಿಲ್ಲುತ್ತಿದ್ದರು. ಅಲ್ಲಿನ ಶಿವಯೋಗಿಗಳ ಗದ್ದುಗೆಯ ದರ್ಶನ ಪಡೆದೇ ಅವರು ಕಲ್ಯಾಣಕ್ಕೆ ಪ್ರಯಾಣಿಸುತ್ತಿದ್ದುದ್ದುಂಟು.
ಭಾಲ್ಕಿಯ ಚನ್ನಬಸವ ಪಟ್ಟದ್ದೇವರು ನನ್ನ ಕುಲಗುರುವಾದರೆ ಮುಚಳಂಬದ ನಾಗಭೂಷಣ ಶಿವಯೋಗಿಗಳು ನನ್ನ ಆಧ್ಯಾತ್ಮ ಗುರುಗಳು. ನಾಗಭೂಷಣ ಶಿವಯೋಗಿಗಳ ಜೊತೆಗಿನ ಮೂವತ್ತೈದು ವರ್ಷಗಳ ಒಡನಾಟ ನನ್ನ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಜೀವನದ ಮೇಲೆ ಮರೆಯಲಾಗದ ಛಾಪು ಮೂಡಿಸಿದೆ. ಚನ್ನಬಸವ ಪಟ್ಟದ್ದೇವರು ಮತ್ತು ನಾಗಭೂಷಣ ಶಿವಯೋಗಿಗಳು ನನ್ನ ಎರಡು ಕಣ್ಣುಗಳಿದ್ದಂತೆ ಎಂದೂ ಅವರು ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ.
ಗೋರಟಾದ ಸಂಗೀತ ರುದ್ರಸಂಘ ಮತ್ತು ಮಠಪತಿ ಮನೆತನದೊಂದಿಗೂ ಅವರು ಅವಿನಾಭಾವ ಸಂಬಂಧ ಹೊಂದಿದ್ದರು. ಇವರಿಂದ ಭಾಲ್ಕಿಯ ಮನೆಯಲ್ಲಿ ಅನೇಕ ಸಲ ಸಂಗೀತ ರುದ್ರಪೂಜೆ ಸಹ ಏರ್ಪಡಿಸಿದ್ದರು. ಇದೇ ಗ್ರಾಮದ ಸುರೇಶ ಸ್ವಾಮೀಜಿ ಅವರೊಂದಿಗೆ ಹೆಡಸಿ ಗುಡ್ಡದಲ್ಲಿ ಇದ್ದಾಗ ಅಲ್ಲಿಗೆ ಬಂದಿದ್ದ ನಾಗಭೂಷಣ ಶಿವಯೋಗಿ ಅವರ ಪರಿಚಯ ಆಗಿತ್ತು. ಖಂಡ್ರೆ ಅವರಿಗೆ ಕಾಡುತ್ತಿದ್ದ ಒಳಜ್ವರ ಕ್ಷಯರೋಗಕ್ಕೆ ಕಾರಣ ಆಗಬಹುದೇನೋ ಎಂಬ ಆತಂಕದಿಂದ ಅವರು ಆ ಗುಡ್ಡದಲ್ಲಿ ಎರಡು ತಿಂಗಳು ಆಯುರ್ವೇದ ಚಿಕಿತ್ಸೆ ಪಡೆದಿದ್ದರು. ಪ್ರತಿದಿನ ನಾಗಭೂಷಣ ಶಿವಯೋಗಿ ಅವರೊಂದಿಗೆ ಜಪ, ತಪ. ಧ್ಯಾನ, ಯೋಗ ಕ್ರೀಯೆಯಲ್ಲಿ ಪಾಲ್ಗೊಂಡು ಅವರ ಶಿಷ್ಯರಾಗಿಯೇ ಮಾರ್ಪಟ್ಟರು.
`ಬಸವಕಲ್ಯಾಣದಲ್ಲಿ ಲಿಂ.ಚನ್ನಬಸವ ಪಟ್ಟದ್ದೇವರ ನೇತೃತ್ವದಲ್ಲಿ ಅನುಭವ ಮಂಟಪ ನಿರ್ಮಾಣ ಆಗುವುದಕ್ಕೂ ಮೊದಲು ಖಂಡ್ರೆಯವರು ಮುಚಳಂಬಕ್ಕೆ ಅನೇಕ ಸಲ ಬಂದು ವಾಸ್ತವ್ಯ ಮಾಡಿದ್ದರು. ಅವರು ಬೆಳಿಗ್ಗೆ ಮತ್ತು ಸಂಜೆ ತಪ್ಪದೇ ಯೋಗಾಸನ ಮಾಡುತ್ತಿದ್ದುದನ್ನು ನಾವು ನೋಡಿದ್ದೇವೆ. ಅವರೊಂದಿಗೆ ಬಾವಿಯಲ್ಲಿ ಈಜಾಡಿದ್ದೇವೆ' ಎಂದು ಗ್ರಾಮದ ನಿವೃತ್ತ ಶಿಕ್ಷಕ ಕೆ.ಕಾಶಪ್ಪ ನೆನಪಿಸಿಕೊಳ್ಳುತ್ತಾರೆ. `ಭೀಮಣ್ಣ ಖಂಡ್ರೆ ಅವರು ನಾಗಭೂಷಣ ಅಪ್ಪರವರೊಂದಿಗೆ ವಿವಿಧ ಕಾರ್ಯಗಳಲ್ಲಿ ಪಾಲ್ಗೊಂಡಿರುವುದನ್ನು ಕಂಡಿದ್ದೇನೆ. ಶಿವಯೋಗಿಗಳ ಗುಡಿ ಅವರೇ ನಿರ್ಮಿಸಿದ್ದಾರೆ' ಎಂದು ಬಸವಕಲ್ಯಾಣದ ಪ್ರಭುಶೆಟ್ಟೆಪ್ಪ ಪಾಟೀಲ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.