ADVERTISEMENT

ಛಲದಂಕಮಲ್ಲ.. ಸ್ವಾಭಿಮಾನಿ.. ಭೀಮಣ್ಣ ಖಂಡ್ರೆ ಲೋಕನಾಯಕರಾದ ಪರಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 18:51 IST
Last Updated 16 ಜನವರಿ 2026, 18:51 IST
<div class="paragraphs"><p>ಇಂದಿರಾ ಗಾಂಧಿಯವರೊಂದಿಗೆ</p></div>

ಇಂದಿರಾ ಗಾಂಧಿಯವರೊಂದಿಗೆ

   

ಲೋಕನಾಯಕ ಡಾ. ಭೀಮಣ್ಣ ಖಂಡ್ರೆಯವರು ಮೂಲತಃ ನ್ಯಾಯನಿಷ್ಠುರಿಗಳು. ಅನ್ಯಾಯಕ್ಕೆ ಎಂದೂ ತಲೆಬಾಗಿದವರಲ್ಲ. ಹಿಡಿದ ಛಲ ಬಿಡದ ಛಲದಂಕಮಲ್ಲರು. ತತ್ವನಿಷ್ಠೆಯ ವಿಷಯ ಬಂದಾಗ ಎಂತಹ ಒತ್ತಡಕ್ಕೂ ಮಣಿಯದೇ ಹೋರಾಡುವಂತಹ ಸ್ವಾಭಿಮಾನಿಗಳು. ಎಲ್ಲರ ಮನ ತಟ್ಟುವಂತಹ ಆಕರ್ಷಕ ವ್ಯಕ್ತಿತ್ವ, ಎಲ್ಲರನ್ನೂ ಪ್ರೀತಿಸುವಂತಹ ಹೃದಯ ವೈಶಾಲ್ಯ ಅವರದು. ರಾಜಕೀಯ, ಸಾರ್ವಜನಿಕ, ಶೈಕ್ಷಣಿಕ, ಸಾಂಸ್ಕೃತಿಕ ಲೋಕಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಸೇವಾ ಧುರಂಧರರು ಹೌದು.

ಪಾರ್ವತಿಬಾಯಿ ಹಾಗೂ ಶಿವಲಿಂಗಪ್ಪ ಖಂಡ್ರೆಯವರ ಮಗನಾಗಿ ಜನಿಸಿದ ಇವರ ಮೇಲೆ ಕುಟುಂಬದವರ ಪ್ರೀತಿ ವಿಶ್ವಾಸ, ಕಾಳಜಿಗಳೆಲ್ಲ ಹೆಪ್ಪುಗಟ್ಟಿದ್ದವು. ಸ್ವಭಾವತಃ ಚುರುಕುತನದಿಂದಾಗಿ ಎಲ್ಲರ ಮನ ಗೆದ್ದಿದ್ದರು. ತಾಯಿಯ ತವರುಮನೆ ಗೋರ್ಟಾ ಪರಿಸರದ ಅನನ್ಯತೆ; ಭಾಲ್ಕಿ ಹಿರೇಮಠದಿಂದ ಕನ್ನಡ ಶಿಕ್ಷಣ, ಶರಣತ್ವದ ದೀಕ್ಷೆ ಪಡೆದರು.

ADVERTISEMENT

ಉರ್ದು, ಪಾರಸಿ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ಕಲಿಯುವುದರ ಮೂಲಕ ಪ್ರಾಥಮಿಕ ಶಿಕ್ಷಣವನ್ನು ಭಾಲ್ಕಿಯಲ್ಲಿ ಮುಗಿಸಿದರು. ಮುಚಳಂಬದ ನಾಗಭೂಷಣ ಶಿವಯೋಗಿಗಳಿಂದ ಇವರಿಗೆ ಯೋಗಾಭ್ಯಾಸದ ಶಿಕ್ಷಣ, ಕನ್ನಡದ ಸ್ವಾಮಿ ಚನ್ನಬಸವ ಪಟ್ಟದ್ದೇವರಿಂದ ಬಸವತತ್ವ ದೀಕ್ಷೆ ಲಭಿಸಿತು. ಯೋಗ ಶಿಕ್ಷಣ ಮತ್ತು ಬಸವತತ್ವ ದೀಕ್ಷೆ ಇವರ ಮೇಲೆ ಗಾಢವಾದ ಪರಿಣಾಮ ಬೀರಿದವು. ನಿಜಾಮ ಸರ್ಕಾರದ ಬೀದರಿನ ಪ್ರೌಢ ಶಾಲೆಯನ್ನು ಸೇರಿ ಮುನ್ಷಿ-ಫಾಜಲ್ ಪರೀಕ್ಷೆಯಲ್ಲಿ ಇಡೀ ಹೈದರಾಬಾದ್ ಪ್ರಾಂತ್ಯದಲ್ಲಿಯೇ ಪ್ರಥಮ ಸ್ಥಾನಪಡೆದು ಉತ್ತೀರ್ಣರಾದರು. ಮುಂದೆ ಹೈದರಾಬಾದಿನ ಉಸ್ಮಾನಿಯಾ ಕಾಲೇಜಿನಿಂದ ವಕಾಲತ್ ಅಧ್ಯಯನ ಮುಗಿಸಿದರು.

ಕರ್ನಾಟಕ ಏಕೀಕರಣದ ರೂವಾರಿ :

ಚನ್ನಬಸವ ಪಟ್ಟದ್ದೇವರು, ಜಯದೇವಿತಾಯಿ ಲಿಗಾಡೆ, ಪ್ರಭುರಾವ ಕಂಬಳಿವಾಲೆ ಮಾರ್ಗದರ್ಶನದಲ್ಲಿ ಭೀಮಣ್ಣ ಖಂಡ್ರೆಯವರು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. 1954ರಲ್ಲಿ ಭಾಲ್ಕಿ ತಾಲೂಕಿನ ಕುರುಬಖೇಳಗಿ ಗ್ರಾಮದಲ್ಲಿ ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕರ್ನಾಟಕ ಏಕೀಕರಣಕ್ಕೆ ಹೋರಾಡುವ ದೀಕ್ಷೆ ಸ್ವೀಕರಿಸಿದ್ದರು. ಅವರಲ್ಲಿದ್ದ ಅಂತಃಶಕ್ತಿಗೆ ಸೊಲ್ಲಾಪುರದ ಜಯದೇವಿತಾಯಿ ಲಿಗಾಡೆ ಮತ್ತು ಚನ್ನಬಸವ ಪಟ್ಟದ್ದೇವರು ಪ್ರೇರಣೆಯಾಗಿದ್ದರು.

ಕೇಂದ್ರ ಸರ್ಕಾರವು 1953ರಲ್ಲಿ ಫಜಲ್ ಅಲಿಯವರ ಅಧ್ಯಕ್ಷತೆಯಲ್ಲಿ ಹೃದಯನಾಥ ಕುಂಜ್ರು, ಕೆ.ಎಂ. ಪಣಿಕ್ಕರ್ ಸದಸ್ಯರಾಗಿದ್ದ ರಾಜ್ಯ ಪುನರ್ವಿಂಗಡಣಾ ಆಯೋಗ(ಎಸ್.ಆರ್.ಸಿ.)ವು ಸರ್ವೇಕ್ಷಣ ಕಾರ್ಯಕ್ಕೆ ಬೀದರಿಗೆ ಬಂದಾಗ ಸಮರ್ಥ ರೀತಿಯಲ್ಲಿ ವಾದ ಮಂಡಿಸಿದ ಶ್ರೇಯಸ್ಸು ಖಂಡ್ರೆಯವರಿಗೆ ಸಲ್ಲುತ್ತದೆ.

ಮುಂಬೈ ಕರ್ನಾಟಕದಲ್ಲಿ ಏಕೀಕರಣಕ್ಕಾಗಿ ಹೋರಾಟ ಮಾಡುತ್ತಿದ್ದ ಹಳ್ಳಿಕೇರಿ ಗುದ್ಲೆಪ್ಪ, ಎಸ್.ಆರ್. ಕಂಠಿಯವರು ಸಹ ಫಜಲ್ ಅಲಿ ಕಮಿಷನ್ ಎದುರಿಗೆ ಸಮರ್ಥವಾಗಿ ವಾದ ಮಂಡಿಸಲು ಬೀದರಿಗೆ ಆಗಮಿಸಿದ್ದರು. ಆಗ ಅವರಿಗೆ ಬೀದರ್‌ ಜಿಲ್ಲೆಯನ್ನು ಹೈದರಾಬಾದ್‌ ರಾಜ್ಯದಿಂದ ಕರ್ನಾಟಕಕ್ಕೆ ಸೇರಿಸಲು ಒತ್ತಾಯಿಸಿ, ನೂರಾರು ಜನರ ಸಹಿ ಸಂಗ್ರಹಿಸಿ ಮನವಿ ಪತ್ರಗಳನ್ನು ಸಲ್ಲಿಸಿದ್ದರು.

ಆರ್.ವಿ. ಬಿಡಪ್, ಪ್ರಭುರಾವ ಕಂಬಳಿವಾಲೆ, ಭಾಲ್ಕಿ ಶ್ರೀಗಳು, ಭೀಮಣ್ಣ ಖಂಡ್ರೆಯವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಭಾಲ್ಕಿಯಲ್ಲಿ ‘ರೈಲು ರೋಕೋ’ ಆಂದೋಲನ ನಡೆಸಿದರು. ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರುವಲ್ಲಿ ಇದು ಸಹಾಯಕವಾಯಿತು.

ಕೊನೆಯಿಲ್ಲದ ಮಾತು:

ದೇಶಿಯ ಆಹಾರ ಪದ್ಧತಿಯನ್ನು ರೂಢಿಸಿಕೊಂಡಿದ್ದ ಖಂಡ್ರೆಯವರು ನೂರರಲ್ಲೂ ಇಪ್ಪತ್ತರ ವಯಸ್ಸಿನವರಂತೆ ಚುರುಕಾಗಿದ್ದರು. ಮಿತ ಆಹಾರ ಸೇವನೆ ಅವರ ಬದುಕಿನ ಪರಮ ರಹಸ್ಯವಾಗಿದೆ. ಚಲನಶೀಲತೆ, ಜೀವಕಾರುಣ್ಯ ಅವರ ಜೀವನ ಸಿದ್ಧಾಂತವಾಗಿದೆ. ಖಂಡ್ರೆಜಿಯವರು ಯಾವುದೇ ರೀತಿಯ ದುಶ್ಚಟಗಳ ದಾಸರಲ್ಲ. ಉಡುಗೆ ತೊಡುಗೆಯಲ್ಲೂ ಎಂದೂ ವೈಭವವನ್ನು ಪ್ರದರ್ಶಸಿದವರಲ್ಲ. ನೇರ ನುಡಿಯ ನಿರ್ಬಿಢೆಯ ವ್ಯಕ್ತಿ-ಶಕ್ತಿಯಾಗಿರುವ ಅವರು ತುಂಬಾ ಸರಳ ಜೀವಿಗಳು. ಅಷ್ಟೇ ಸಂಕೀರ್ಣ ಸ್ವಭಾವದ ಜನಾನುರಾಗಿಗಳು. ಮಾನವೀಯ ಅನುಕಂಪವನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡವರು. ದೀನ ದಲಿತರ ರಕ್ಷಣೆಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿರುವರು. ಸಂವಿಧಾನದ ಆಶಯದಂತೆ ಜಾತ್ಯತೀತ ರಾಷ್ಟ್ರ ವಿಶ್ವಕುಟುಂಬದ ಕನಸು ಕಂಡ ಅವರು ಜಾತಿ ಮತ ಭೇದರಹಿತ ಸಮಾಜವನ್ನು ಕಟ್ಟಲು ಶ್ರಮಿಸಿದರು. ಗುಣವಂತ ರಾಜಕಾರಣಿ, ಶಿಕ್ಷಣ ಸಿಂಧು, ರೈತ ಬಂಧು, ಲೋಕನಾಯಕ ಎನಿಸಿಕೊಂಡರು.

(ಲೇಖಕರು: ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಸಾಹಿತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.