ADVERTISEMENT

ಬೀದರ್‌: ಹದಗೆಟ್ಟ ರಸ್ತೆ; ಸಂಚಾರ ಬಲು ಹೈರಾಣ

ಖತಗಾಂವ ಕ್ರಾಸ್‍ದಿಂದ ಮುರ್ಕಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ದುಃಸ್ಥಿತಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 8:06 IST
Last Updated 29 ಜನವರಿ 2026, 8:06 IST
ಕಮಲನಗರ ತಾಲ್ಲೂಕಿನ ಖತಗಾಂವ ಕ್ರಾಸ್‌ನಿಂದ ಮುರ್ಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹದಗೆಟ್ಟಿದೆ
ಕಮಲನಗರ ತಾಲ್ಲೂಕಿನ ಖತಗಾಂವ ಕ್ರಾಸ್‌ನಿಂದ ಮುರ್ಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಹದಗೆಟ್ಟಿದೆ   

ಕಮಲನಗರ: ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು, ಈ ರಸ್ತೆಯಲ್ಲಿ ಒಂದು ಸಲ ಸಂಚರಿಸಿದರೆ ನರಕಯಾತನೆ ಅನುಭವ.‌

ಇದು ತಾಲ್ಲೂಕಿನ ಖತಗಾಂವ ಕ್ರಾಸ್‍ದಿಂದ ಮುರ್ಕಿ ಗ್ರಾಮಕ್ಕೆ ಸಂಪರ್ಕ ಕಲಿಸುವ ರಸ್ತೆ ದುಃಸ್ಥಿತಿ. ರಸ್ತೆಯುದ್ದಕ್ಕೂ ಎದ್ದಿರುವ ಜಲ್ಲಿ ಕಲ್ಲುಗಳು ಪ್ರಯಾಣಿಕರ ಸುಗಮ ಸಂಚಾರಕ್ಕೆ ಕಂಟಕವಾಗಿವೆ. ಈ ರಸ್ತೆಯಲ್ಲಿ ನಿತ್ಯ ಓಡಾಡುವ ಜನರು ರಸ್ತೆಯ ದುಃಸ್ಥಿತಿ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ.

ಖತಗಾಂವ ಕ್ರಾಸ್‍ನಿಂದ ಮುರ್ಕಿವರೆಗಿನ ಸುಮಾರು 8 ಕಿ.ಮೀ. ಉದ್ದದ ಈ ರಸ್ತೆ ಸುಮಾರು ಎರಡು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದು, ಈಗ ಡಾಂಬರು ರಸ್ತೆ ಹಾಳಾಗಿ ಬೃಹತ್ ಗಾತ್ರದ ಗುಂಡಿಗಳು ಬಾಯ್ತೆರೆದುಕೊಂಡು ಅಪಾಯಕ್ಕೆ ಆಹ್ವಾನಿಸುತ್ತಿವೆ.

ADVERTISEMENT

ಈ ರಸ್ತೆಯನ್ನು ಅವಲಂಬಿಸಿರುವ ದಾಬಕಾ, ಮುರ್ಕಿ, ಚಿಕ್ಲಿ, ಹಕ್ಯಾಳ, ಖತಗಾಂವ ಹಾಗೂ ಸುತ್ತ-ಮುತ್ತಲಿನ ಹಳ್ಳಿಗಳ ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಕಮಲನಗರ ತಾಲ್ಲೂಕು ಕೇಂದ್ರಕ್ಕೆ ತೆರಳಲು, ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೋಗಿ ಬರಲು ಪರದಾಡುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಸ್ತೆಯ ತಗ್ಗು-ಗುಂಡಿಗಳನ್ನು ಕಳೆದ ವರ್ಷ ಎರಡು ಬಾರಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಆದರೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದರಿಂದ ಮತ್ತೆ ರಸ್ತೆಯಲ್ಲಿ ತಗ್ಗುಗಳು ನಿರ್ಮಾಣಗೊಂಡಿವೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

ಕೂಡಲೇ ರಸ್ತೆ ದುರುಸ್ತಿ ಅಥವಾ ಹೊಸ ರಸ್ತೆ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ರಸ್ತೆಗಿಳಿದು ಹೋರಾಟ ಮಾಡುವುದಾಗಿ ಖತಗಾಂವ, ಹಕ್ಯಾಳ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಖತಗಾಂವ ಕ್ರಾಸ್‍ದಿಂದ ಮುರ್ಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಎರಡೂ ಬದಿಯ ಗಿಡ ಗಂಟೆಗಳು ರಸ್ತೆಯ ಮೇಲೆ ವಾಲಿಕೊಂಡಿವೆ
ಖತಗಾಂವ ಕ್ರಾಸ್‌ನಿಂದ ಮುರ್ಕಿವರೆಗಿನ ಹದಗೆಟ್ಟ ರಸ್ತೆಯ ಮೇಲೆ ನಿತ್ಯ ಸಂಚರಿಸುವ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ವಾಹನ ಚಲಾಯಿಸಬೇಕಾಗಿದೆ
ಪ್ರಮೋದ ಧರಣೆ ಖತಗಾಂವ ಗ್ರಾಮಸ್ಥ
ಹದಗೆಟ್ಟ ರಸ್ತೆ ಕುರಿತಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು
ಪ್ರೇಮಸಾಗರ ಹಮೀಲಪೂರೆ ಲೋಕೋಪಯೋಗಿ ಇಲಾಖೆ ಎಇಇ

ಜಾಲಿ ಕಂಟಿ ತೆರವುಗೊಳಿಸಲು ಆಗ್ರಹ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತ ಗಿಡ-ಗಂಟಿ ಪೊದೆಗಳಿಂದ ಸಂಚಾರಕ್ಕೆ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯ ಬದಿಯ ಮರಗಳ ಬಹುತೇಕ ಕೊಂಬೆಗಳು ರಸ್ತೆಗೆ ವಾಲಿಕೊಂಡಿವೆ. ಬಸ್ ಲಾರಿಯಂಥ ವಾಹನಗಳಂತೂ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಅಲ್ಲದೇ ಗ್ರಾಮದ ರೈತರು ಟ್ರ್ಯಾಕ್ಟರ್ ಮೂಲಕ ಕಬ್ಬು ಮೇವು ಹೊಟ್ಟು ಮುಂತಾದವುಗಳನ್ನು ಬೇರೆಡೆಗೆ ಸಾಗಿಸುವುದು ಕಷ್ಟಕರವಾಗಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಇತ್ತ ಗಮನ ಹರಿಸಿ ಅಪಾಯಕಾರಿ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.