ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಶುಕ್ರವಾರವೂ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ಕೊಟ್ಟು ಪರಿಸ್ಥಿತಿಯ ಅವಲೋಕನ ನಡೆಸಿ, ಬೆಳೆ ಹಾನಿಯಿಂದ ನೊಂದಿರುವ ರೈತರಿಗೆ ಸಾಂತ್ವನ ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಭಾಲ್ಕಿ ತಾಲ್ಲೂಕಿನ ಕಾರಂಜಾ ಜಲಾಶಯಕ್ಕೆ ಹೊಂದಿಕೊಂಡಿರುವ ಕಟ್ಟಿತೂಗಾಂವ್, ಹಾಲಹಳ್ಳಿ, ಬ್ಯಾಲಹಳ್ಳಿ ಗ್ರಾಮಗಳ ಹೊಲಗಳಿಗೆ ಭೇಟಿ ಕೊಟ್ಟು ರೈತರ ಸಮಸ್ಯೆ ಆಲಿಸಿದರು. ಶೀಘ್ರ ಪರಿಹಾರ ನೀಡುವ ಆಶ್ವಾಸನೆ ನೀಡಿದರು.
ಕಾರಂಜಾ ಅಣೆಕಟ್ಟೆಗೂ ಭೇಟಿ ಕೊಟ್ಟು, ಎಂಜಿನಿಯರ್‌ಗಳಿಂದ ಒಳಹರಿವು ಹಾಗೂ ಹೊರಹರಿವಿನ ಮಾಹಿತಿ ಪಡೆದುಕೊಂಡರು. ಆನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ಸತತ ಸುರಿದ ಮಳೆ, ಪ್ರವಾಹದಿಂದ ಆಗಿರುವ ಹಾನಿ ಕುರಿತು ಮುಖ್ಯಮಂತ್ರಿಯವರಿಗೆ ದೂರವಾಣಿ ಕರೆ ಮಾಡಿ ವಿವರಿಸಿದ್ದೇನೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಂದಿಸಿದ್ದಾರೆ. ‘ಸರ್ಕಾರ ರೈತರ ಜೊತೆಗಿದೆ. ಮಳೆಯಿಂದ ಎಲ್ಲೆಲ್ಲಿ ಹಾನಿಯಾಗಿದೆಯೋ ಅದರ ಪುನರ್ ನಿರ್ಮಾಣ ಹಾಗೂ ಬೆಳೆ ಹಾನಿಯಾದವರಿಗೆ ಅಗತ್ಯ ಪರಿಹಾರ, ಅನುದಾನ ನೀಡುವ ಆಶ್ವಾಸನೆ ನೀಡಿದ್ದಾರೆ’ ಎಂದು ತಿಳಿಸಿದರು.
ನಾಲ್ಕೈದು ದಿನಗಳಿಂದ ಸತತ ಸುರಿದ ಮಳೆಗೆ ಪ್ರಾಥಮಿಕ ಮಾಹಿತಿ ಪ್ರಕಾರ ಜಿಲ್ಲೆಯಾದ್ಯಂತ ಒಂದು ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಯಾಗಿದೆ. 4.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಪ್ರವಾಹದಿಂದ ಜಿಲ್ಲೆಯ ಹಲವೆಡೆ ರಸ್ತೆ, ಸೇತುವೆಗಳು ಹಾಳಾಗಿವೆ. ಎಲ್ಲೆಲ್ಲಿ ತಗ್ಗು ಪ್ರದೇಶಗಳಲ್ಲಿ ಸೇತುವೆಗಳಿವೆಯೋ ಅವುಗಳ ಎತ್ತರ ಹೆಚ್ಚಿಸಲು ಪ್ರಸ್ತಾವ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದರು.
ನದಿ ದಂಡೆಗೆ ಇರುವ ಹೊಲಗಳ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಜಿಲ್ಲೆಯಲ್ಲಿ ಔರಾದ್, ಕಮಲನಗರ ಹಾಗೂ ಭಾಲ್ಕಿಯಲ್ಲಿ ಹೆಚ್ಚಿನ ಹಾನಿಯಾಗಿದೆ. ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ದಿನದಿಂದಲೂ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ನಾನು ಕೂಡ ಜಿಲ್ಲೆಯಲ್ಲಿಯೇ ಠಿಕಾಣಿ ಹೂಡಿ, ಅನೇಕ ಕಡೆಗಳಿಗೆ ಸಂಚರಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ಈಗಾಗಲೇ ಹೆಸರು, ತೊಗರಿ ಸಂಪೂರ್ಣ ಹಾಳಾಗಿದೆ. ಸೋಯಾ ಅವರೆ ಭಾಗಶಃ ಹಾಳಾದರೆ, ಕಬ್ಬಿನ ಗದ್ದೆಗಳಲ್ಲಿ ನೀರು ನುಗ್ಗಿರುವುದರಿಂದ ಅದು ಕೂಡ ಹಾಳಾಗುತ್ತಿದೆ ಎಂದರು.
8ರಿಂದ 10 ಹತ್ತುಗಳಲ್ಲಿ ಜಿಲ್ಲೆಯಾದ್ಯಂತ ಹಾನಿಯ ಸಮೀಕ್ಷೆ ಕೈಗೊಂಡು ಪರಿಹಾರ ಪೋರ್ಟಲ್‌ನಲ್ಲಿ ಎಲ್ಲ ವಿವರ ಅಪ್‌ಲೋಡ್ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾರಂಜಾ ಹಿನ್ನೀರಿನಲ್ಲಿ ಪ್ರವಾಹ ಬಂದಾಗ ಜಮೀನು ಮುಳುಗಡೆಯಾಗಿ ಸಮಸ್ಯೆಯಾಗುತ್ತಿದೆ. ಭೂಸ್ವಾಧೀನ ಮಾಡಿ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಬೇಕೆಂದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕಾರಂಜಾ ಸಂತ್ರಸ್ತರ ಸಮಸ್ಯೆ ಇತ್ಯರ್ಥ ಸಂಬಂಧ ಈಗಾಗಲೇ ತಜ್ಞರ ಸಮಿತಿ ರಚಿಸಲಾಗಿದೆ. ಈ ಸಂಬಂಧ ಕಲಬುರಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಜತೆಗೂ ಮಾತನಾಡಿರುವೆ. ಬೇಗ ವರದಿ ಕೊಡಲು ತಿಳಿಸಿದ್ದೇನೆ ಎಂದು ಹೇಳಿದರು.
ಪೌರಾಡಳಿತ ಸಚಿವ ರಹೀಂ ಖಾನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಕಾರಂಜಾ ಜಲಾಶಯದ ಎಇಇ ವಿಘ್ನೇಶ್ವರ, ಅನಿಲ್ ಕುಮಾರ್, ಹುಮನಾಬಾದ್ ಇಒ ದೀಪಿಕಾ ನಾಯ್ಕರ ಮತ್ತಿತರರು ಹಾಜರಿದ್ದರು.
ಆಗಸ್ಟ್ 26ರಂದು ಜಿಲ್ಲೆಯಾದ್ಯಂತ ಆರಂಭಗೊಂಡಿದ್ದ ಮಳೆ ಶುಕ್ರವಾರ ಮಧ್ಯಾಹ್ನದ ನಂತರ ಬಿಡುವು ಕೊಟ್ಟಿತು.
ಆ.26ರಂದು ಬೆಳಿಗ್ಗೆ ಆರಂಭಗೊಂಡಿದ್ದ ಮಳೆ ಹಗಲು–ರಾತ್ರಿಯೆನ್ನದೆ ಎಡೆಬಿಡದೆ ಸುರಿಯಿತು. ಜಲಾಶಯಗಳು ಭರ್ತಿಯಾಗಿದ್ದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಜಿಲ್ಲೆಯಾದ್ಯಂತ ಹಲವೆಡೆ ಸೇತುವೆಗಳು ಕೊಚ್ಚಿ ಹೋಗಿ ರಸ್ತೆ ಸಂಪರ್ಕ ಕಡಿತಗೊಂಡಿತು. ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಯಿತು.
ಶುಕ್ರವಾರ ಸಹ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಈ ಕಾರಣಕ್ಕಾಗಿಯೇ ಜಿಲ್ಲೆಯಾದ್ಯಂತ ಶುಕ್ರವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಧ್ಯಾಹ್ನದ ವರೆಗೆ ಸುರಿದ ಮಳೆ ಆನಂತರ ಬಿಡುವು ಕೊಟ್ಟು ಬಿಸಿಲು ಕಾಣಿಸಿಕೊಂಡಿತು. ಮೂರ್ನಾಲ್ಕು ದಿನಗಳಿಂದ ಮನೆಯಿಂದ ಹೊರಬರದವರು ಸಂಜೆ ಹೊರಬಂದರು. ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಕಾಣಿಸಿಕೊಂಡಿತು. ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗಳನ್ನು ನೋಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.