ಬೀದರ್: ಪ್ರವಾಸಿ ತಾಣಗಳ ವೀಕ್ಷಣೆಗೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯು ‘ಬೀದರ್ ದರ್ಶನ’ ಹೆಸರಿನಲ್ಲಿ ಹವಾನಿಯಂತ್ರಿತ ಬಸ್ ಸೇವೆ ಆರಂಭಿಸಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮವು ಒದಗಿಸಿರುವ ಬಸ್ ಸೇವೆಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ನಗರದ ಬಹಮನಿ ಕೋಟೆ ಎದುರು ಶನಿವಾರ ಹಸಿರು ನಿಶಾನೆ ತೋರಿದರು. ಆನಂತರ ಕೆಲ ದೂರ ಅದರಲ್ಲೇ ಸಂಚರಿಸಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ದಿನದಲ್ಲಿ ಪ್ರವಾಸಿ ತಾಣಗಳ ವೀಕ್ಷಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ವಯಸ್ಕರು ಮತ್ತು ಮಕ್ಕಳಿಗೆ ಬೇರೆ ರೀತಿಯ ಶುಲ್ಕ ಇದೆ. ಹೊರಗಿನಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಈ ಸೇವೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸದ್ಯ ಒಂದು ದಿನದ ಪ್ಯಾಕೇಜ್ ಟೂರ್ ಆರಂಭಿಸಲಾಗಿದೆ. ಬರುವ ದಿನಗಳಲ್ಲಿ ಬಸವಕಲ್ಯಾಣ ಒಳಗೊಂಡಂತೆ ಇತರೆ ಪ್ರವಾಸಿ ತಾಣಗಳ ವೀಕ್ಷಣೆಗೆ ಎರಡು ದಿನಗಳ ಪ್ಯಾಕೇಜ್ ಟೂರ್ ಆರಂಭಿಸುವ ಚಿಂತನೆ ಇದೆ. ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎನ್ನುವುದನ್ನು ನೋಡಿಕೊಂಡು ಮುಂದುವರಿಯಲಾಗುವುದು ಎಂದು ಹೇಳಿದರು.
ಬೀದರ್ ಕೋಟೆಯ ವೀಕ್ಷಣೆಗೆ ಬರುವವರಿಗೆ ಬ್ಯಾಟರಿಚಾಲಿತ ವಾಹನಗಳ ಸೌಕರ್ಯ ಕಲ್ಪಿಸುವ ಕೆಲಸ ಶೀಘ್ರದಲ್ಲೇ ಮಾಡಲಾಗುವುದು ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಬೀದರ್ ವಲಯದ ಅಧಿಕಾರಿ ಅನಿರುದ್ಧ ದೇಸಾಯಿ, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ವ್ಯವಸ್ಥಾಪಕ ಶಿವಕುಮಾರ, ಪ್ರವಾಸೋದ್ಯಮ ಇಲಾಖೆಯ ಪ್ರವೀಣ್, ಉದ್ಯಮಿ ಮನಪ್ರೀತ್ ಸಿಂಗ್ ಮತ್ತಿತರರು ಇದ್ದರು.
ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರತ್ಯೇಕವಾಗಿ ಬಸ್ ಸೌಕರ್ಯ ಕಲ್ಪಿಸಬೇಕೆನ್ನುವುದು ದೀರ್ಘಕಾಲೀನ ಬೇಡಿಕೆಯಿತ್ತು. ಅದನ್ನು ಈಗ ಈಡೇರಿಸಲಾಗಿದೆ.ಶಿಲ್ಪಾ ಶರ್ಮಾ ಜಿಲ್ಲಾಧಿಕಾರಿ
ಶುಲ್ಕವೆಷ್ಟು? ಬುಕಿಂಗ್ ಹೇಗೆ?:
ಬೀದರ್ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಒಂದು ದಿನದಲ್ಲಿ ಹವಾನಿಯಂತ್ರಿತ ಬಸ್‌ನಲ್ಲಿ ವೀಕ್ಷಣೆಗೆ ವಯಸ್ಕರಿಗೆ ತಲಾ ₹685 ಹಾಗೂ ಮಕ್ಕಳಿಗೆ ತಲಾ ₹400 ನಿಗದಿಪಡಿಸಲಾಗಿದೆ. ಕನಿಷ್ಠ 15 ಪ್ರಯಾಣಿಕರು ಇದ್ದರಷ್ಟೇ ಬಸ್ ಬಿಡಲಾಗುತ್ತದೆ. https://kstdc.co/ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಟಿಕೆಟ್ ಬುಕ್ ಮಾಡಬಹುದು ಅಥವಾ ಮೊಬೈಲ್ ಸಂಖ್ಯೆ: 9845629001 ಕರೆ ಮಾಡಿಯೂ ಟಿಕೆಟ್ ಕಾಯ್ದಿರಿಸಬಹುದು.
ಯಾವ್ಯಾವ ಪ್ರವಾಸಿ ತಾಣಗಳಿಗೆ ಭೇಟಿ:
ಪ್ರತಿದಿನ ಬೆಳಿಗ್ಗೆ 6.30ಕ್ಕೆ ಬೀದರ್‌ನ ಬರೀದ್ ಷಾಹಿ ಉದ್ಯಾನದಿಂದ ‘ಬೀದರ್ ದರ್ಶನ’ ಹೆಸರಿನ ಬಸ್ ಸಂಚಾರ ಆರಂಭಿಸುತ್ತದೆ. ಬ್ಲ್ಯಾಕ್ ಬಕ್ ಸಫಾರಿ ನರಸಿಂಹ ಝರಣಿ ದೇವಸ್ಥಾನ ಅಷ್ಟೂರಿನ ಗುಂಬಜ್‌ಗಳು ಚೌಖಂಡಿ ಬೀದರ್ ಕೋಟೆ ಗುರುದ್ವಾರ ಬರೀದ್ ಷಾಹಿ ಉದ್ಯಾನ ಹಾಗೂ ಪಾಪನಾಶ ದೇವಸ್ಥಾನವನ್ನು ತೋರಿಸಲಾಗುತ್ತದೆ. ಸಂಜೆ 6ಕ್ಕೆ ಪ್ರವಾಸ ಕೊನೆಗೊಳ್ಳುತ್ತದೆ. ಬೆಳಗಿನ ಉಪಾಹಾರಕ್ಕೆ ಹೊನ್ನಿಕೇರಿ ಸಮೀಪದ ಜಂಗಲ್ ಲಾಡ್ಜ್ ರೆಸಾರ್ಟ್‌ನಲ್ಲಿ ನಿಲುಗಡೆ ಮಾಡಿದರೆ ಮಧ್ಯಾಹ್ನದ ಊಟಕ್ಕೆ ಗುರುದ್ವಾರದಲ್ಲಿ ಬಸ್ ನಿಲ್ಲಿಸಲಾಗುತ್ತದೆ. ಇದಕ್ಕೆ ಪ್ರತ್ಯೇಕವಾಗಿ ಶುಲ್ಕ ಪಾವತಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.