ADVERTISEMENT

ಹಾರಕೂಡದಲ್ಲಿ ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಡಾ.ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 12:40 IST
Last Updated 11 ಡಿಸೆಂಬರ್ 2021, 12:40 IST
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಮಹೇಶ ಜೋಶಿ ಅವರನ್ನು ಚನ್ನವೀರ ಶಿವಾಚಾರ್ಯರು ಸನ್ಮಾನಿಸಿದರು
ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಡಾ.ಮಹೇಶ ಜೋಶಿ ಅವರನ್ನು ಚನ್ನವೀರ ಶಿವಾಚಾರ್ಯರು ಸನ್ಮಾನಿಸಿದರು   

ಬಸವಕಲ್ಯಾಣ: ‘ಹಾರಕೂಡ ಹಿರೇಮಠದಲ್ಲಿ ಮಾರ್ಚ್ ತಿಂಗಳ ಒಳಗೆ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದ್ದಾರೆ.

ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಶನಿವಾರ ಆಯೋಜಿಸಿದ ಸಮಾರಂಭದಲ್ಲಿಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಹಾರಕೂಡ ಮಠವು ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗದೆ ಎಲ್ಲ ವರ್ಗಗಳ ಭಕ್ತರನ್ನು ಹೊಂದಿದೆ. ಕಲೆ, ಸಂಸ್ಕೃತಿ, ಸಾಹಿತಿಗಳನ್ನು ಪೋಷಿಸುವ ಕೇಂದ್ರವಾಗಿದೆ. ಹೀಗಾಗಿ, ಇಲ್ಲಿಗೆ ಮೊದಲ ಬಾರಿ ಭೇಟಿ ನೀಡಿದ್ದೇನೆ. ಪೀಠಾಧಿಪತಿ ಚನ್ನವೀರ ಶಿವಾಚಾರ್ಯರ ಆಶಯದಂತೆ ಜಿಲ್ಲಾ ಸಮ್ಮೇಳನ ನಡೆಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಪರಿಷತ್ತಿನಿಂದ ಕೋಟಿ ಸದಸ್ಯತ್ವ ನೋಂದಣಿ ಹಾಗೂ ಇತರೆ ಯೋಜನೆಗಳನ್ನು ಹಾಕಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ಯವಾಗಿದೆ’ ಎಂದರು.

ADVERTISEMENT

‘ವೈದ್ಯಕೀಯ ಶಿಕ್ಷಣವನ್ನು ಕನ್ನಡದಲ್ಲೇ ದೊರಕಿಸುವುದಕ್ಕೆ ಪ್ರಯತ್ನ ನಡೆಯುತ್ತಿದೆ. ಈಚೆಗೆ ಬರೆದಂತೆಯೇ ಓದುವ, ಮಾತನಾಡಿದಂತೆಯೇ ಬರೆಯುವ ಭಾಷೆಗಳ ಬಗ್ಗೆ ವಿಶ್ವಮಟ್ಟದ ಸಮೀಕ್ಷೆ ನಡೆದಿದೆ. ಈ ಸಾಲಿಗೆ ಕನ್ನಡ, ಸಂಸ್ಕೃತ ಮತ್ತು ಫ್ರೆಂಚ್‌ ಭಾಷೆಗಳು ಮಾತ್ರ ಸೇರ್ಪಡೆಯಾಗಿವೆ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ ಚನ್ನವೀರ ಶಿವಾಚಾರ್ಯರು ಮಾತನಾಡಿ, ‘ಸಂತ ಶಿಶುನಾಳ ಶರೀಫ್ ಅವರು ಸರ್ವ ಸಮಾನತೆ ಬೋಧಿಸಿದ್ದರು. ಅವರ ಗುರು ಗೋವಿಂದ ಭಟ್ ಅವರ ಮೊಮ್ಮಗನಾದ ಡಾ.ಮಹೇಶ ಜೋಶಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅವರು ಉತ್ತಮ ಕಾರ್ಯಗಳನ್ನು ಕೈಗೊಳ್ಳುತ್ತಾರೆ ಎಂಬ ಭರವಸೆಯಿದೆ. ಹಾರಕೂಡ ಸಂಸ್ಥಾನ ಕೂಡ ತತ್ವಪದಕಾರರು, ಚಿಂತಕರು, ಅನುಭಾವಿಗಳಿಗೆ ಪ್ರೋತ್ಸಾಹಿಸಿ, ಪೋಷಿಸುವ ಮಠವಾಗಿದೆ ಎಂದು ಹೇಳಿದರು.

ಕಸಾಪ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಬಾಬುರಾವ್ ದಾನಿ. ಓಂಪ್ರಕಾಶ ದಡ್ಡೆ, ಶಿವಶಂಕರ ಟೋಕರೆ, ರಮೇಶ ಬಿರಾದಾರ, ಶಿವರಾಜ ಹಂಡಗಿ, ರಾಜಕುಮಾರ ಶಿರಗಾಪುರ, ಮೇಘರಾಜ ನಾಗರಾಳೆ, ಮಲ್ಲಿನಾಥ ಹಿರೇಮಠ ಇದ್ದರು.

ನವಲಿಂಗಕುಮಾರ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.