ADVERTISEMENT

ಬೀದರ್‌ನಲ್ಲಿ ಎಳ್ಳು ಅಮಾವಾಸ್ಯೆ ಸಂಭ್ರಮ: ವರ್ಷಾಂತ್ಯದ ಕೃಷಿಕರ ದೊಡ್ಡ ಹಬ್ಬ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 19 ಡಿಸೆಂಬರ್ 2025, 4:35 IST
Last Updated 19 ಡಿಸೆಂಬರ್ 2025, 4:35 IST
ಬೀದರ್‌ನ ಬಸವೇಶ್ವರ ರಸ್ತೆಯುದ್ದಕ್ಕೂ ಹಾಕಿರುವ ತರಕಾರಿ ಮಳಿಗೆಗಳ ಎದುರು ಗುರುವಾರ ಜನ ತರಕಾರಿ, ಕಾಳು ಖರೀದಿಸಿದರು
–ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಬೀದರ್‌ನ ಬಸವೇಶ್ವರ ರಸ್ತೆಯುದ್ದಕ್ಕೂ ಹಾಕಿರುವ ತರಕಾರಿ ಮಳಿಗೆಗಳ ಎದುರು ಗುರುವಾರ ಜನ ತರಕಾರಿ, ಕಾಳು ಖರೀದಿಸಿದರು –ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ   

ಬೀದರ್‌: ರಸ್ತೆಯುದ್ದಕ್ಕೂ ಟೆಂಟ್‌ಗಳು, ಅದರಲ್ಲಿ ಕಾಯಿಪಲ್ಯ, ವಿವಿಧ ಬಗೆಯ ಕಾಳು, ಖಡಕ್‌ ರೊಟ್ಟಿ, ತರಹೇವಾರಿ ಹಣ್ಣುಗಳು, ಖರೀದಿಗೆ ಜನವೋ ಜನ...

ಎಳ್ಳು ಅಮಾವಾಸ್ಯೆಯ ಮುನ್ನ ದಿನವಾದ ಗುರುವಾರ ಸಂಜೆ ನಗರದ ಪ್ರಮುಖ ರಸ್ತೆಯುದ್ದಕ್ಕೂ ಕಂಡು ಬಂದ ದೃಶ್ಯಗಳಿವು.

ಗುರುವಾರ ಬೆಳಕು ಹರಿಯುತ್ತಿದ್ದಂತೆ ಆರಂಭಗೊಂಡ ಖರೀದಿ ರಾತ್ರಿ ವರೆಗೂ ನಡೆದೇ ಇತ್ತು. ಬೆಳಿಗ್ಗೆ ತಾಜಾ ತರಕಾರಿ, ಹಣ್ಣು, ಕಾಳು ಸಿಗುತ್ತದೆ ಎಂದು ಕೆಲವರು ಬೆಳಿಗ್ಗೆಯೇ ಖರೀದಿಸಿದರೆ, ಮತ್ತೆ ಕೆಲವರು ದೈನಂದಿನ ಕೆಲಸ ಮುಗಿಸಿಕೊಂಡು ಖರೀದಿಸಿದರು. ಸಂಜೆ ವೇಳೆ ಹೆಚ್ಚಿನ ಜನ ಖರೀದಿಗೆ ಬಂದದ್ದರಿಂದ ಪ್ರಮುಖ ರಸ್ತೆಗಳ ಉದ್ದಕ್ಕೂ ಜನಜಾತ್ರೆ ಕಂಡು ಬಂತು.

ADVERTISEMENT

ಎಳ್ಳು ಅಮಾವಾಸ್ಯೆ ಕೃಷಿಕರ ದೊಡ್ಡ ಹಬ್ಬಗಳಲ್ಲಿ ಒಂದು. ಈ ವರ್ಷದ ರೈತರ ಕೊನೆಯ ದೊಡ್ಡ ಹಬ್ಬವೂ ಹೌದು. ಇದನ್ನು ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲದೇ ಪ್ರತಿಯೊಬ್ಬರೂ ಆಚರಿಸುವುದು ವಿಶೇಷ. ಈ ದಿನ ಪ್ರತಿಯೊಬ್ಬರೂ ಹೊಲಗಳಿಗೆ ತೆರಳಿ ಆಹಾರ ಸವಿಯುತ್ತಾರೆ. ಹೊಲ ಇಲ್ಲದವರಿಗೆ ಇದ್ದವರು ಆಹ್ವಾನಿಸುತ್ತಾರೆ. ಒಂದುವೇಳೆ ಗ್ರಾಮಗಳಿಗೆ ಹೋಗಲಿಕ್ಕೆ ಆಗದವರು ಮನೆಯಲ್ಲಿಯೇ ‘ಭಜ್ಜಿ’ ಮಾಡಿ ಸವಿಯುವ ವಾಡಿಕೆ. ಅಷ್ಟರಮಟ್ಟಿಗೆ ಈ ಹಬ್ಬಕ್ಕೆ ಮಹತ್ವ.

ಪ್ರತಿಯೊಬ್ಬರೂ ‘ಭಜ್ಜಿ’ ಮಾಡುವುದರಿಂದ ಸಹಜವಾಗಿಯೇ ಕಾಯಿಪಲ್ಯ, ಕಾಳು, ಖಡಕ್‌ ರೊಟ್ಟಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದನ್ನು ಮನಗಂಡೇ ವ್ಯಾಪಾರಿಗಳು ಗುರುವಾರ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಮಾಲು ತರಿಸಿಕೊಂಡಿದ್ದರು. ಸರಕು ಸಾಗಣೆ ವಾಹನಗಳಲ್ಲಿ ಹೆಚ್ಚಿನ ಮೂಟೆಗಳನ್ನು ತರಿಸಿಕೊಂಡು, ರಸ್ತೆಯುದ್ದಕ್ಕೂ ಕುಂಪೆಗಳನ್ನು ಹಾಕಿ ಮಾರಾಟ ಮಾಡಿದರು. ಹಣ ಗಳಿಕೆಯ ಉತ್ತಮ ಸಂದರ್ಭ.

ಮೆಂತೆಪಲ್ಯ, ಪಾಲಕ್‌, ಹುಳಿಚಿಕ್ಕಿ, ಹಸಿ ಹುಣಸೆ, ಈರುಳ್ಳಿ ಸೊಪ್ಪು, ಕೊತ್ತಂಬರಿ, ಕರಿಬೇವು, ಬೆಳ್ಳುಳ್ಳಿ, ಅವರೆಬೀಜ, ತೊಗರಿ ಬೀಜ, ವಟಾಣಿ, ನೆಂಕಿ ಕಾಳು ಖರೀದಿಸಿದರು. ಕಡಲೆ ಹಿಟ್ಟಿನೊಂದಿಗೆ ಇಷ್ಟೆಲ್ಲ ಪದಾರ್ಥಗಳಿಂದ ‘ಭಜ್ಜಿ’ ತಯಾರಿಸಲಾಗುತ್ತದೆ. ಇದೊಂದು ವಿಶೇಷ ಖಾದ್ಯವಾಗಿದ್ದು, ಚಳಿಗಾಲಕ್ಕೆ ಹೇಳಿ ಮಾಡಿಸಿದಂತಿರುವ ಕಾರಣ ಇದಕ್ಕೆ ಹೆಚ್ಚಿನ ಮಹತ್ವ ಇದೆ. ಇದಿಲ್ಲದೇ ಹಬ್ಬ ಅಪೂರ್ಣ.

ಹಬ್ಬದ ಆಚರಣೆ ಹೇಗಿರುತ್ತೆ?

ಎಳ್ಳು ಅಮಾವಾಸ್ಯೆಯನ್ನು ಭೂಮಿ ತಾಯಿಗೆ ಸೀಮಂತ ಮಾಡುವ ರೀತಿಯಲ್ಲಿ ಆಚರಿಸುವುದು ವಿಶಿಷ್ಟ. ಭೂಮಿ ನೀರು ಹಾಗೂ ನೀರೇಯನ್ನು ಸಮೀಕರಿಸಿ ಆರಾಧಿಸುವ ವಿಶೇಷ ಆಚರಣೆಯ ಭಾಗ. ಸೀಮಂತದಲ್ಲಿ ಸಮೃದ್ಧಿಯ ಸಂಕೇತವಾಗಿರುವ ಹಣ್ಣು ಹಂಪಲ ಹಾಗೂ ಆಹಾರವನ್ನು ನೀಡುವಂತೆ ಎಳ್ಳು ಅಮಾವಾಸ್ಯೆಗೆ ಭೂತಾಯಿಗೆ ಹೊಲದಲ್ಲಿ ಪೂಜಿಸಲಾಗುತ್ತದೆ. ಕಬ್ಬು ಬಿಳಿ ಜೋಳದ ದಂಟು ಕಡಲೆ ಕುಸುಬಿ ಅಗಸಿ ಹಾಗೂ ಗೋಧಿಯ ತೆನೆಗಳಿಂದ ಹೊಲದಲ್ಲಿ ಕೊಂಪೆ ಮಾಡಿ ಹೆಣ್ಣು ದೇವತೆಗಳ ಪ್ರತಿರೂಪವಾಗಿ ಐದು ಮಣ್ಣಿನ ಹೆಂಟೆ ಅಥವಾ ಕಲ್ಲುಗಳನ್ನಿಟ್ಟು ಪೂಜಿಸಿ ಗೋಧಿ ಹಿಟ್ಟಿನ ಹಣತೆಯಿಂದ ದೀಪ ಬೆಳಗಿಸುತ್ತಾರೆ. ವಿವಿಧ ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿದ ದ್ರವರೂಪದ ಆಹಾರವನ್ನು ನೀರಿನ ತಂಬಿಗೆಯಲ್ಲಿ ತುಂಬಿಕೊಂಡು ಕೊಂಪೆಯ ಸುತ್ತ ಚರಗ ಚೆಲ್ಲುತ್ತಾರೆ. ಬಳಿಕ ಎಲ್ಲರೂ ದೇವರಿಗೆ ನಮಸ್ಕರಿಸಿ ಸಾಮೂಹಿಕವಾಗಿ ಭೋಜನ ಸವಿಯುತ್ತಾರೆ. ಬಳಿಕ ಸಂಜೆವರೆಗೂ ಆಟವಾಡಿ ಸಂಭ್ರಮಿಸುತ್ತಾರೆ.

ಏನೇನು ಖಾದ್ಯ ತಯಾರಿ?

ಹಸಿರು ಪಲ್ಯ ವಿವಿಧ ಬಗೆಯ ಕಾಳುಗಳಿಂದ ‘ಭಜ್ಜಿ’ ತಯಾರಿಸುತ್ತಾರೆ. ಅಂಬಲಿ ಜೋಳದ ಅನ್ನ ಸಜ್ಜೆ ರೊಟ್ಟಿ ಬಿಳಿಜೋಳದ ರೊಟ್ಟಿ ಶೇಂಗಾ ಹೋಳಿಗೆ ಕನೋಲಿ ಅಕ್ಕಿ ಹುಗ್ಗಿ ಗೋಧಿ ಹುಗ್ಗಿ ಕರ್ಜಿಕಾಯಿ ಈ ಹಬ್ಬಕ್ಕೆ ತಯಾರಿಸುವ ವಿಶೇಷ ಖಾದ್ಯಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.