ADVERTISEMENT

ಬೀದರ್‌ | ಮುಂದುವರಿದ ಮಳೆ: ಹಲವೆಡೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 12:34 IST
Last Updated 27 ಸೆಪ್ಟೆಂಬರ್ 2025, 12:34 IST
   

ಬೀದರ್‌: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ‌ ಮಳೆ ಹಾಗೂ ಮಹಾರಾಷ್ಟ್ರದ ಧನೆಗಾಂವ್ ಜಲಾಶದಿಂದ ಹೆಚ್ಚು ನೀರು ಹರಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಜಿಲ್ಲೆಯ ಕಮಲನಗರ, ಔರಾದ್, ಭಾಲ್ಕಿ, ಹುಲಸೂರ ಹಾಗೂ ಬೀದರ್ ತಾಲ್ಲೂಕಿನ ಹಲವೆಡೆ ಸಂಪರ್ಕ ಕಡಿತಗೊಂಡಿದೆ. ನದಿ ಸುತ್ತಮುತ್ತಲಿನ ಜಮೀನುಗಳು ಜಲಾವೃತಗೊಂಡಿವೆ.

ಪ್ರವಾಹದಿಂದ ಭಾಲ್ಕಿ ತಾಲ್ಲೂಕಿನ ಇಂಚೂರ್‌ ಸೇತುವೆ ಮುಳುಗಡೆಯಾಗಿದ್ದು, ಮಹಾರಾಷ್ಟ್ರದೊಂದಿಗಿನ ಸಂಪರ್ಕ ಕಡಿದು ಹೋಗಿದೆ. ಭಾಲ್ಕಿ-ಹುಲಸೂರ ಸಂಚಾರ ಸ್ಥಗಿತಗೊಂಡಿದೆ. ಕಮಲನಗರ - ಬಾಲೂರ (ಕೆ) ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಕಮಲನಗರ–ಔರಾದ್, ಕಮಲನಗರ–ಸೋನಾಳ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ನಿಂತು ಹೋಗಿದೆ. ಹುಲಸೂರ ತಾಲ್ಲೂಕಿನ ಮಿರಖಲ್‌ ಗ್ರಾಮದ ಕೆರೆ ಒಡೆದು ನೀರು ಹರಿದು ಹೋಗುತ್ತಿದೆ. ಮೂರು ಮನೆಗಳಿಗೆ ಹಾನಿ ಉಂಟಾಗಿದೆ.

ADVERTISEMENT

ಬಸವಕಲ್ಯಾಣದ ಧನ್ನೂರ, ಖೇರ್ಡಾ ಸೇತುವೆ ಮೇಲಿಂದ ನೀರು ಹರಿಯುತ್ತಿದೆ. ತ್ರಿಪುರಾಂತ ಕೆರೆಗೆ ಕೋಡಿ ಬಿದ್ದು, ಅಪಾರ ನೀರು ಹರಿಯುತ್ತಿರುವುದರಿಂದ ಖಾನಾಪೂರ ರಸ್ತೆಯಲ್ಲಿ ಸಂಚಾರ ಬಂದ್‌ ಮಾಡಲಾಗಿದೆ. ಬೀದರ್‌ ತಾಲ್ಲೂಕಿನ ಚಿಮಕೋಡ್‌–ಚಿಲ್ಲರ್ಗಿ ನಡುವೆ ಸಿಲಿಂಡರ್‌ ಸಾಗಿಸುತ್ತಿದ್ದ ವಾಹನವನ್ನು ಸ್ಥಳೀಯರು ಪಾರು ಮಾಡಿದ್ದಾರೆ. ಬೀದರ್‌ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರವೂ ಉತ್ತಮ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.