
ಬೀದರ್: ಮಹಾನಗರ ಪಾಲಿಕೆಯಿಂದ ಪುಕ್ಕಟ್ಟೆಯಾಗಿ ನಿವೇಶನ ಕೊಡುತ್ತಾರೆ ಎಂಬ ಪುಕಾರು ಹಬ್ಬಿ ಅನೇಕರು ನಗರದ ಗೋರನಳ್ಳಿ ಸಮೀಪದ ಜಮೀನುಗಳಿಗೆ ದೌಡಾಯಿಸಿ, ಜಮಾಯಿಸಿದ ಪ್ರಸಂಗ ನಡೆದಿದೆ.
ಗೋರನಳ್ಳಿ ಸಮೀಪ ಖಾಲಿ ಇರುವ ಜಾಗದಲ್ಲಿ ಉಚಿತವಾಗಿ ನಿವೇಶನಗಳನ್ನು ಕೊಡುತ್ತಾರೆ. ಯಾರು ಮೊದಲು ಬರುತ್ತಾರೋ ಅವರಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂಬ ವಿಷಯ ಹರಡಿದೆ. ಇದನ್ನರಿತ ಜನ ದೈನಂದಿನ ಕೆಲಸ ಬಿಟ್ಟು, ಗೋರನಳ್ಳಿಗೆ ದೌಡಾಯಿಸಿದ್ದಾರೆ.
ಇಷ್ಟೇ ಅಲ್ಲ, ಯಾವ ಭಾಗದಲ್ಲಿ ಯಾರು ಮೊದಲು ಬರುತ್ತಾರೋ ಅಂತಹವರಿಗೆ ಅದೇ ಸ್ಥಳ ಹಂಚಿಕೆ ಮಾಡಲಾಗುತ್ತದೆ ಎಂಬ ವಿಷಯ ಅರಿತು ಮಕ್ಕಳೊಂದಿಗೆ ಮಹಿಳೆಯರು, ಪುರುಷರು ಸ್ಥಳಕ್ಕೆ ಹೋಗಿ, ಕಲ್ಲುಗಳನ್ನು ಜೋಡಿಸಿಟ್ಟು, ಅವರೇ ಖುದ್ದು ಸ್ಥಳ ಗುರುತಿಸಿಕೊಂಡಿದ್ದಾರೆ. ಅಲ್ಲಲ್ಲಿ ಗುಂಪು ಗುಂಪಾಗಿ ಕುಳಿತುಕೊಂಡಿದ್ದಾರೆ.
‘ಸರ್ಕಾರ ಗೋರನಳ್ಳಿಯಲ್ಲಿ ಫ್ರೀ ಸೈಟ್ ಕೊಡುತ್ತಿದೆ ಎಂಬ ವಿಷಯ ಗೊತ್ತಾಯಿತು. ಆದಕಾರಣ ಇಲ್ಲಿಗೆ ಬಂದಿರುವೆ. ನನಗೆ ಇಷ್ಟವಾದ ಜಾಗದ ಸುತ್ತಲೂ ಕಲ್ಲು ಜೋಡಿಸಿರುವೆ. ಅಧಿಕಾರಿಗಳ ಬರುವಿಕೆಗೆ ಕಾಯುತ್ತಿರುವೆ’ ಎಂದು ರಾಧಮ್ಮ ಎಂಬ ಮಹಿಳೆ ‘ಪ್ರಜಾವಾಣಿ’ಗೆ ತಿಳಿಸಿದರು. ಇದೇ ರೀತಿ ನಗರದ ವಿವಿಧ ಭಾಗದ ಜನ ಅಲ್ಲಿ ಸೇರಿದ್ದರು.
ಈ ವಿಷಯ ಮಹಾನಗರ ಪಾಲಿಕೆಯ ಗಮನಕ್ಕೆ ಬರುತ್ತಿದ್ದಂತೆ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ, ಅಲ್ಲಿ ಸೇರಿದ್ದ ಜನರನ್ನು ಕಳಿಸಿದ್ದಾರೆ. ಯಾರಿಗೂ ನಿವೇಶನ ಕೊಡುತ್ತಿಲ್ಲ ಎಂದು ವಿಷಯ ಮನದಟ್ಟಾದ ನಂತರ ಸಪ್ಪೆ ಮೊರೆ ಹಾಕಿ ಅಲ್ಲಿಂದ ನಿರ್ಗಮಿಸಿದ್ದಾರೆ.
ಈ ಸಂಬಂಧ ಪಾಲಿಕೆಯ ಆಯುಕ್ತ ಮುಕುಲ್ ಜೈನ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.