ADVERTISEMENT

ಬೀದರ್‌ | ಮುಂದುವರೆದ ಮಳೆ: ಸಂಪರ್ಕ ಕಡಿತ; ಜಮೀನುಗಳೆಲ್ಲ ಜಲಾವೃತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:04 IST
Last Updated 28 ಸೆಪ್ಟೆಂಬರ್ 2025, 6:04 IST
ಬೀದರ್‌ ತಾಲ್ಲೂಕಿನ ಚಿಮಕೋಡ್‌–ಚಿಲ್ಲರ್ಗಿ ರಸ್ತೆಯಲ್ಲಿ ಶನಿವಾರ ಪ್ರವಾಹದಲ್ಲಿ ಹರಿದು ಹೋಗುತ್ತಿದ್ದ ಸಿಲಿಂಡರ್‌ ಸಾಗಣೆ ವಾಹನವನ್ನು ಸ್ಥಳೀಯರು ಪಾರು ಮಾಡಿದರು
ಬೀದರ್‌ ತಾಲ್ಲೂಕಿನ ಚಿಮಕೋಡ್‌–ಚಿಲ್ಲರ್ಗಿ ರಸ್ತೆಯಲ್ಲಿ ಶನಿವಾರ ಪ್ರವಾಹದಲ್ಲಿ ಹರಿದು ಹೋಗುತ್ತಿದ್ದ ಸಿಲಿಂಡರ್‌ ಸಾಗಣೆ ವಾಹನವನ್ನು ಸ್ಥಳೀಯರು ಪಾರು ಮಾಡಿದರು   

ಬೀದರ್‌: ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ಸತತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಸತತ ಮಳೆ ಹಾಗೂ ಮಹಾರಾಷ್ಟ್ರದ ಧನೆಗಾಂವ್‌ ಸೇರಿದಂತೆ ಇತರೆ ಜಲಾಶಯಗಳಿಂದ ಹೆಚ್ಚಿನ ನೀರು ನದಿಗೆ ಹರಿಸುತ್ತಿರುವ ಕಾರಣ ಮಾಂಜ್ರಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಕಾರಂಜಾ ಜಲಾಶಯ ಕೂಡ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ಮಾಂಜ್ರಾ ಉಕ್ಕೇರಿ ಹರಿಯುತ್ತಿದೆ. ಕಣ್ಣು ಹಾಯಿಸಿದ ಕಡೆಗಳಲೆಲ್ಲಾ ನೀರೇ ನೀರು ಕಾಣಿಸುತ್ತಿದೆ.

ಮಾಂಜ್ರಾ ನದಿ ಪಾತ್ರದುದ್ದಕ್ಕೂ ಇರುವ ಜಮೀನುಗಳೆಲ್ಲ ಸಂಪೂರ್ಣ ಜಲಾವೃತಗೊಂಡಿವೆ. ಜಿಲ್ಲೆಯ ಹುಲಸೂರ, ಕಮಲನಗರ, ಔರಾದ್‌, ಭಾಲ್ಕಿಯಲ್ಲಿ ಪ್ರವಾಹದಿಂದ ಹೆಚ್ಚು ಪರಿಣಾಮ ಉಂಟಾಗಿದೆ. ಬೀದರ್‌ ತಾಲ್ಲೂಕಿನ ಇಸ್ಲಾಂಪೂರ, ಚಿಮಕೋಡ್‌, ಚಿಲ್ಲರ್ಗಿ, ಸಿಂದೋಲ್‌ ಸೇತುವೆಯ ಮೇಲಿನಿಂದ ನೀರು ಹರಿಯುತ್ತಿದ್ದು, ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ADVERTISEMENT

ಚಿಮಕೋಡ್‌–ಚಿಲ್ಲರ್ಗಿ ರಸ್ತೆಯಲ್ಲಿ ಶನಿವಾರ ಸಿಲಿಂಡರ್‌ ಸಾಗಿಸುತ್ತಿದ್ದ ವಾಹನ ನೀರು ಲೆಕ್ಕಿಸದೇ ಸಂಚಾರ ಬೆಳೆಸಿತು. ಆದರೆ, ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡು ನೀರಿನಲ್ಲಿ ಹರಿದು ಹೋಗುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ ಪಾರು ಮಾಡಿದ್ದಾರೆ. ಇದರಿಂದ ಆಗಬಹುದಾಗಿದ್ದ ದುರಂತ ತಪ್ಪಿದೆ. ಬಸವಕಲ್ಯಾಣದ ತ್ರಿಪುರಾಂತ ಕೆರೆಗೆ ಕೋಡಿ ಬಿದ್ದಿದೆ.

ಬೀದರ್‌ ನಗರದಲ್ಲಿ ದಿನವಿಡೀ ಮಳೆ ಸುರಿದಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಜಿಟಿಜಿಟಿ ಮಳೆಯಿತ್ತು. ಮಧ್ಯಾಹ್ನ ಬಿರುಸಿನ ಮಳೆಯಾಗಿದ್ದು, ರಾತ್ರಿ ಕೂಡ ಮುಂದುವರೆದಿತ್ತು. ಬೀದರ್‌ ತಾಲ್ಲೂಕಿನ ಜನವಾಡ, ಮರಕಲ್‌, ಚಿಕ್ಕಪೇಟೆ, ಬೆನಕನಳ್ಳಿ, ಚಿಟ್ಟಾ, ಘೋಡಂಪಳ್ಳಿ, ಯದಲಾಪೂರ, ಯಾಕತಪೂರ, ಬೆಳಕೇರಾ, ಕಮಠಾಣ, ಬಗದಲ್‌ ಸೇರಿದಂತೆ ಹಲವೆಡೆ ಉತ್ತಮ ವರ್ಷಧಾರೆಯಾಗಿದೆ. ಇನ್ನೆಷ್ಟು ದಿನ ಈ ಮಳೆ? ಹೀಗೆ ಜನ ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.

ನಗರ ಸೇರಿದಂತೆ ಗ್ರಾಮೀಣ ಭಾಗದ ಪ್ರಮುಖ ರಸ್ತೆಗಳಲ್ಲಿ ತಗ್ಗು, ಗುಂಡಿ ಬಿದ್ದಿದ್ದು, ಜನರ ಓಡಾಟ ಕಷ್ಟದಾಯಕವಾಗಿದೆ. ಮಳೆಯಿಂದ ರೈತರು ಗದ್ದೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಜನ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಈ ನಡುವೆ ದಿನವಿಡೀ ವಿದ್ಯುತ್‌ ಕಣ್ಣಾಮುಚ್ಚಾಲೆಗೆ ಜನ ತೀವ್ರ ಸಮಸ್ಯೆ ಎದುರಿಸಿದರು. ಶನಿವಾರ ರಾತ್ರಿಯೂ ವಿದ್ಯುತ್‌ ಇರಲಿಲ್ಲ. ಅನೇಕ ದಿನಗಳಿಂದ ಈ ಸಮಸ್ಯೆ ಉಂಟಾಗುತ್ತಿದೆ. ಜೆಸ್ಕಾಂ ಹಾಗೂ ಕೆಪಿಟಿಸಿಎಲ್‌ಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಸತತ ಮಳೆಗೆ ಬೀದರ್‌ನ ಕೆಇಬಿ ಬಳಿಯ ರಸ್ತೆಯ ಚಹರೆ ಬದಲಾಗಿದೆ
ಬೀದರ್‌ನಲ್ಲಿ ಶನಿವಾರ ರಾತ್ರಿ ಕೂಡ ಮಳೆ ಆಯಿತು. ನಗರದ ಕೇಂದ್ರ ಬಸ್‌ ನಿಲ್ದಾಣ ರಸ್ತೆಯಲ್ಲಿ ಜನ ಕೊಡೆಗಳನ್ನು ಹಿಡಿದುಕೊಂಡು ಸಂಚರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.