ADVERTISEMENT

ಬೀದರ್ ಹಿಂದೂ ಸಮ್ಮೇಳನ: ಹಿಂದೂಗಳು ಜಾತಿಗಳಲ್ಲಿ ಬೇರ್ಪಡದಿರಲಿ ಎಂದ RSS ಪ್ರಚಾರಕ

ಆರ್‌ಎಸ್‌ಎಸ್‌ ಪ್ರಚಾರಕ ಶಿವಲಿಂಗ ಕುಂಬಾರ ದಿಕ್ಸೂಚಿ ಭಾಷಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 14:35 IST
Last Updated 4 ಜನವರಿ 2026, 14:35 IST
   

ಬೀದರ್‌: ‘ಹಿಂದೂಗಳು ಜಾತಿ ಜಾತಿಗಳ ಹೆಸರಿನಲ್ಲಿ ಬೇರ್ಪಡಬಾರದು. ಎಲ್ಲರೂ ಒಂದಾಗಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಶಿವಲಿಂಗ ಕುಂಬಾರ ತಿಳಿಸಿದರು.

ಗುರು ತೇಗ್‌ ಬಹಾದ್ದೂರ ಅವರ 350ನೇ ಹುತಾತ್ಮ ದಿನ ಹಾಗೂ ವಂದೇ ಮಾತರಂ ಗೀತೆಗೆ 150 ವರ್ಷಗಳು ಪೂರ್ಣಗೊಂಡಿರುವುದರಿಂದ ಹಿಂದೂ ಸಮ್ಮೇಳನ ಆಯೋಜನಾ ಸಮಿತಿಯಿಂದ ಭಾನುವಾರ ಸಂಜೆ ನಗರದ ಗಣೇಶ ಮೈದಾನದಲ್ಲಿ ಏರ್ಪಡಿಸಿದ್ದ ಹಿಂದೂ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಹಿಂದೂ ಸಂಸ್ಕೃತಿ ಉಳಿಸಬೇಕಿದೆ. ಜಾತಿ ಜಾತಿಗಳ ನಡುವೆ ನಾವು ವಿಘಟಿತರಾಗಬಾರದು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಇಡೀ ದೇಶದಾದ್ಯಂತ ಹಿಂದೂ ಸಮ್ಮೇಳನಗಳನ್ನು ಆಯೋಜಿಸಿ ಹಿಂದೂಗಳನ್ನು ಒಟ್ಟುಗೂಡಿಸುವ, ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ADVERTISEMENT

ದೇಶದ ಎಲ್ಲಾ ಮನೆಗಳಲ್ಲಿ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಎಲ್ಲರೂ ಸಂವಿಧಾನಕ್ಕೆ ಗೌರವ ಕೊಟ್ಟು ನಾಗರಿಕ ಕರ್ತವ್ಯ ಪಾಲಿಸಬೇಕು. ಪ್ರಕೃತಿ ಕೂಡ ಉಳಿಸಿ ಬೆಳೆಸಬೇಕು. ಸಾಮರಸ್ಯದಿಂದ ಬಾಳಬೇಕೆಂಬ ತತ್ವದಡಿ ಆರ್‌ಎಸ್‌ಎಸ್‌ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜದ ಸಂಘಟನೆಗೆ ಆರ್‌ಎಸ್‌ಎಸ್‌ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ ಕೆಲಸ. ಈ ಧರ್ಮದಲ್ಲಿ ಅನೇಕ ಮಹಾಪುರುಷರು ಕಾಲಕಾಲಕ್ಕೆ ಸುಧಾರಣೆ ಮಾಡಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣ, 20ನೇ ಶತಮಾನದಲ್ಲಿ ಸ್ವಾಮಿ ವಿವೇಕಾನಂದರು ಜಾಗೃತಿ ಮೂಡಿಸಿದ್ದಾರೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ನೌಬಾದ್‌ ಜ್ಞಾನ ಯೋಗಾಶ್ರಮದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಭಾಗಕ್ಕೆ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರು ಮುಕ್ತಿ ಕೊಟ್ಟಿದ್ದಾರೆ. ಈ ಭಾಗದಲ್ಲಿ ಎಲ್ಲಾದರೂ ಅವರ ಪುತ್ಥಳಿ ನಿರ್ಮಿಸಬೇಕು. ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾ‌ಲಯಕ್ಕೆ ಅವರ ಹೆಸರಿಡಬೇಕೆಂದು ಹೇಳಿದರು.

ಪ್ರಮುಖರಾದ ಜಗನ್ನಾಥ ಜಮಾದಾರ, ಶಿವಕುಮಾರ ಉಪ್ಪೆ ಮತ್ತಿತರರು ಪಾಲ್ಗೊಂಡಿದ್ದರು.

ಗಮನ ಸೆಳೆದ ಮೆರವಣಿಗೆ...

ಹಿಂದೂ ಸಮ್ಮೇಳನದ ಅಂಗವಾಗಿ ನಡೆದ ಮೆರವಣಿಗೆಯು ಗಮನ ಸೆಳೆಯಿತು. ಕೇಂದ್ರ ಬಸ್‌ ನಿಲ್ದಾಣ ಸಮೀಪದ ಗುರುನಗರದ ಶಿವಾಲಯ ದೇವಸ್ಥಾನದಿಂದ ಗಣೇಶ ಮೈದಾನ ವರೆಗೆ ಮೆರವಣಿಗೆ ನಡೆಯಿತು.

ಭಗವಾ ಧ್ವಜಗಳನ್ನು ಹಿಡಿದುಕೊಂಡು ನೂರಾರು ಜನ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳು ಲೇಜಿಮ್‌, ಕೋಲಾಟವಾಡಿ ಗಮನ ಸೆಳೆದರು. ಕೆಲ ಚಿಣ್ಣರು ಯೋಧರ ಪೋಷಾಕು ಧರಿಸಿ ಕಂಗೊಳಿಸಿದರು. ಗುರುನಾನಕ್‌ ಗೇಟ್‌, ಮಡಿವಾಳೇಶ್ವರ ವೃತ್ತ, ನೆಹರೂ ಕ್ರೀಡಾಂಗಣದ ಮೂಲಕ ಗಣೇಶ ಮೈದಾನದ ವರೆಗೆ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ನಾಗರಾಜ್‌ ಕರ್ಪೂರ್‌, ಗುರುನಾಥ ಜ್ಯಾಂತಿಕರ್‌, ಗುರುನಾಥ ರಾಜಗೀರಾ, ಸಂಜೀವಕುಮಾರ ಪಾಟೀಲ್‌, ಅಶೋಕ್‌ ಕರಂಜಿ, ಶರಣಪ್ಪ ಪಾಟೀಲ್‌, ಅಶೋಕ್‌ ಶೀಲವಂತ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.