ADVERTISEMENT

ಬೀದರ್: ಗ್ರಹಣ ಲೆಕ್ಕಿಸದೆ ಸಡಗರ, ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 14:48 IST
Last Updated 3 ಮಾರ್ಚ್ 2026, 14:48 IST
   

ಬೀದರ್: ಚಂದ್ರಗ್ರಹಣ ಲೆಕ್ಕಿಸದೇ ಜನ ನಗರ ಸೇರಿದಂತೆ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಬಣ್ಣದಾಟ ಆಡಿ ಸಂಭ್ರಮಿಸಿದರು.

ಸೋಮವಾರ ರಾತ್ರಿ ನಗರದ ವಿವಿಧ ಬಡಾವಣೆಗಳಲ್ಲಿ ಜನ ಕಾಮದಹನ ನೆರವೇರಿಸಿ, ಕಡಲೆ, ಕೊಬ್ಬರಿ ಹುರಿದುಕೊಂಡು ಪರಸ್ಪರ ಹಂಚಿ‌ ಸವಿದರು.‌ ಹಲವೆಡೆ ಸಂಗೀತ ಕಾರ್ಯಕ್ರಮಗಳು ಜರುಗಿದವು.

ಮಂಗಳವಾರ ಬೆಳಕು ಹರಿಯುತ್ತಿದ್ದಂತೆ ಬಣ್ಣದಾಟದ ಸಂಭ್ರಮ ಮೇರೆ ಮೀರಿತ್ತು. ಚಂದ್ರಗ್ರಹಣದ ಅಂಗವಾಗಿ ಕೆಲ ಸಂಘಟನೆಗಳು ಮಂಗಳವಾರ ರಂಗಿನಾಟವಾಡಬೇಕೆಂದು ತಿಳಿಸಿದರೆ, ಮತ್ತೆ ಕೆಲವು ಸಂಘಟನೆಗಳವರು ಬುಧವಾರ (ಮಾ.4) ಹಬ್ಬ ಆಚರಿಸಲು ತಿಳಿಸಿದ್ದರಿಂದ ಗೊಂದಲ ಏರ್ಪಟ್ಟಿತ್ತು. ಆದರೆ, ಹಲವರು ಗ್ರಹಣ ಮಧ್ಯಾಹ್ನ ಮೂರು ಗಂಟೆ ಇದ್ದದ್ದರಿಂದ ಅದನ್ನು ಲೆಕ್ಕಿಸದೆ ರಂಗಿನಾಟ ಆಡಿದರು.

ADVERTISEMENT

ಚಿಣ್ಣರಿಂದ ಹಿರಿಯರವರೆಗೆ ಎಲ್ಲ ವಯೋಮಾನದವರು ಸಡಗರ, ಸಂಭ್ರಮದಿಂದ ಬಣ್ಣವಾಡಿ ವಿವಿಧ ಬಣ್ಣಗಳಲ್ಲಿ ಮಿಂದೆದ್ದರು.

ನಗರದ ಕೆಇಬಿ ಕಾಲೊನಿ, ಮೋಹನ್ ಮಾರ್ಕೆಟ್, ಗುಂಪಾ, ವಿವೇಕಾನಂದ ಕಾಲೊನಿ, ಮೈಲೂರ, ವಿದ್ಯಾ ನಗರ ಕಾಲೊನಿ ಹಾಗೂ ಗ್ರಾಮೀಣ ಭಾಗಗಳಲ್ಲಿ ಜನ ರಂಗುಗಳಲ್ಲಿ ಮೈಮರೆತು ಹೆಜ್ಜೆ ಹಾಕಿದರು. ಕೆಲವೆಡೆ ಮೊಸರಿನ ಗಡಿಗೆ ಒಡೆಯುವ ಕಾರ್ಯಕ್ರಮವೂ ನಡೆಯಿತು.

ಸರ್ಕಾರಿ ಶಾಲಾ ಕಾಲೇಜುಗಳು ಎಂದಿನಂತೆ ಕೆಲಸ ನಿರ್ವಹಿಸಿದವು‌. ಖಾಸಗಿ ಶಿಕ್ಷಣ ಸಂಸ್ಥೆಗಳು ರಂಗಿನಾಟಕ್ಕೆ ರಜೆ ಘೋಷಿಸಿದ್ದವು. ಮಂಗಳವಾರ ಹಬ್ಬ ಆಚರಿಸದವರು ಬುಧವಾರ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಆದಕಾರಣ ಈ ವರ್ಷ ಎರಡು ದಿನ ಬಣ್ಣದಾಟಕ್ಕೆ ಜಿಲ್ಲೆ ಸಾಕ್ಷಿಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.