ADVERTISEMENT

ಬೀದರ್ - ಹುಬ್ಬಳ್ಳಿ ಪ್ರಾಯೋಗಿಕ ರೈಲು ಸಂಚಾರ: ಭಗವಂತ ಖೂಬಾ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 14:58 IST
Last Updated 9 ಆಗಸ್ಟ್ 2022, 14:58 IST
ಭಗವಂತ ಖೂಬಾ
ಭಗವಂತ ಖೂಬಾ   

ಬೀದರ್: ರೈಲ್ವೆ ಇಲಾಖೆಯು ಬೀದರ್-ಹುಬ್ಬಳ್ಳಿ ಮಧ್ಯೆ ರೈಲು ಸೇವೆ ಪ್ರಾರಂಭಿಸುವ ದಿಸೆಯಲ್ಲಿ ಶುಭ ಸುದ್ದಿ ನೀಡಿದೆ. ಆಗಸ್ಟ್ 13 ರಿಂದ ಮೂರು ದಿನ ಎರಡೂ ನಗರಗಳ ನಡುವೆ ಪ್ರಾಯೋಗಿಕವಾಗಿ ರೈಲು ಓಡಿಸಲಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಆಗಸ್ಟ್ 13, 20 ಹಾಗೂ 27 ರಂದು ನಾಂದೇಡ್‍ನಿಂದ ಹುಬ್ಬಳ್ಳಿ ವಯಾ ಬೀದರ್ ಹಾಗೂ ಆಗಸ್ಟ್ 14, 21 ಮತ್ತು 28 ರಂದು ಹುಬ್ಬಳ್ಳಿಯಿಂದ ನಾಂದೇಡ್ ವಯಾ ಬೀದರ್ ಪ್ರಾಯೋಗಿಕ ರೈಲು ಸಂಚರಿಸಲಿದೆ ಎಂದು ಹೇಳಿದ್ದಾರೆ.

ಆಗಸ್ಟ್ 13, 20 ಹಾಗೂ 27 ರಂದು ಮಧ್ಯಾಹ್ನ 2.10ಕ್ಕೆ ರೈಲು ಸಂಖ್ಯೆ 07635 ನಾಂದೇಡ್‍ನಿಂದ ಹೊರಟು ಪೂರ್ಣ, ಪರಳಿ, ಉದಗಿರ್ ಮೂಲಕ ಸಂಜೆ 7.25ಕ್ಕೆ ಭಾಲ್ಕಿ ಮತ್ತು ರಾತ್ರಿ 8ಕ್ಕೆ ಬೀದರ್‌ಗೆ ತಲುಪಲಿದೆ, ಜಹೀರಾಬಾದ್, ಸೇಡಂ, ಚಿತ್ತಾಪೂರ, ತಾಂಡೂರ, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ ಮಾರ್ಗವಾಗಿ ಮರುದಿನ ಬೆಳಿಗ್ಗೆ 10ಕ್ಕೆ ಹುಬ್ಬಳ್ಳಿಗೆ ತಲುಪಲಿದೆ ಎಂದು ತಿಳಿಸಿದ್ದಾರೆ.

ಆಗಸ್ಟ್ 14, 21 ಹಾಗೂ 28 ರಂದು ಬೆಳಿಗ್ಗೆ 11ಕ್ಕೆ ರೈಲು ಸಂಖ್ಯೆ 07636 ಹುಬ್ಬಳ್ಳಿಯಿಂದ ಹೊರಟು ಬಂದ ಮಾರ್ಗವಾಗಿ ರಾತ್ರಿ 10.55ಕ್ಕೆ ಬೀದರ್ ಮತ್ತು ರಾತ್ರಿ 11.30ಕ್ಕೆ ಭಾಲ್ಕಿಗೆ ತಲುಪಲಿದೆ. ಮರುದಿನ ಬೆಳಿಗ್ಗೆ 6.50ಕ್ಕೆ ನಾಂದೇಡ್ ತಲುಪಲಿದೆ ಎಂದು ಹೇಳಿದ್ದಾರೆ.

ಬೀದರ್‌ನಿಂದ ಹುಬ್ಬಳ್ಳಿಗೆ ಚಲಿಸಲಿರುವ ಈ ರೈಲು ಬೀದರ್ ಜಿಲ್ಲೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿದೆ. ಪ್ರಾಯೋಗಿಕ ರೈಲಿಗೆ ಪ್ರಯಾಣಿಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆತಲ್ಲಿ ರೈಲು ಸೇವೆ ನಿರಂತರವಾಗಲಿದೆ ಎಂದು ತಿಳಿಸಿದ್ದಾರೆ.

ಕ್ಷೇತ್ರದ ಜನ ಪ್ರಾಯೋಗಿಕ ರೈಲಿನ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.