ADVERTISEMENT

ಬೀದರ್‌: ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ರಸ್ತೆತಡೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 6:19 IST
Last Updated 24 ನವೆಂಬರ್ 2025, 6:19 IST
ರಸ್ತೆತಡೆ ಚಳವಳಿ ಬೆನ್ನಲ್ಲೇ ಮಹಾನಗರ ಪಾಲಿಕೆಯ ವತಿಯಿಂದ ಬೀದರ್‌ನ ಮೌನೇಶ್ವರ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಸ್ಥಳೀಯ ಕಟ್ಟಡಗಳ ಮಾಲೀಕರು ಹಾಕಿದ್ದ ಹಂಪ್ಸ್‌ಗಳನ್ನು ತೆರವುಗೊಳಿಸಲಾಯಿತು
ರಸ್ತೆತಡೆ ಚಳವಳಿ ಬೆನ್ನಲ್ಲೇ ಮಹಾನಗರ ಪಾಲಿಕೆಯ ವತಿಯಿಂದ ಬೀದರ್‌ನ ಮೌನೇಶ್ವರ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಸ್ಥಳೀಯ ಕಟ್ಟಡಗಳ ಮಾಲೀಕರು ಹಾಕಿದ್ದ ಹಂಪ್ಸ್‌ಗಳನ್ನು ತೆರವುಗೊಳಿಸಲಾಯಿತು   

ಬೀದರ್‌: ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಕೃಷಿ ಕಾಲೊನಿ, ವಿವೇಕಾನಂದ ಕಾಲೊನಿಯ ನಿವಾಸಿಗಳು ನಗರದ ಮೈಲೂರ–ಗುಂಪಾ ರಿಂಗ್‌ರೋಡ್‌ನಲ್ಲಿರುವ ಹಡಪದ ಅಪ್ಪಣ್ಣ ವೃತ್ತದಲ್ಲಿ ಭಾನುವಾರ ರಸ್ತೆತಡೆ ಚಳವಳಿ ನಡೆಸಿದರು.

ರಿಂಗ್‌ರೋಡ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ, ಘೋಷಣೆಗಳನ್ನು ಹಾಕಿದರು. ಅರ್ಧಗಂಟೆಗೂ ಹೆಚ್ಚು ಸಮಯ ರಸ್ತೆತಡೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು. ಪ್ರತಿಭಟನೆ ಮುಗಿಯುವವರೆಗೆ ಸಂಚಾರ ಪೊಲೀಸರು ವಾಹನಗಳಿಗೆ ಅನ್ಯ ಮಾರ್ಗಗಳ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಿದರು.

ಮಹಾನಗರ ಪಾಲಿಕೆಯ ಆಯುಕ್ತರಾಗಲಿ ಅಥವಾ ಅಧ್ಯಕ್ಷರಾಗಲಿ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿ, ಸಮಸ್ಯೆಗಳನ್ನು ಈಡೇರಿಸುವ ಬಗ್ಗೆ ಖಚಿತ ಆಶ್ವಾಸನೆ ನೀಡುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ಪಾಲಿಕೆಯ ಎಇಇ ನಾಗನಾಥ ಅವರು, ಪಾಲಿಕೆಯ ಆಯುಕ್ತರು, ಅಧ್ಯಕ್ಷರು ಜಿಲ್ಲೆಯಲ್ಲಿಲ್ಲ. ಅವರ ಬದಲು ನಾನು ಮನವಿ ಸ್ವೀಕರಿಸಿ ನಿಮ್ಮ ಸಮಸ್ಯೆಗಳನ್ನು ಈಡೇರಿಸಲು ಶ್ರಮಿಸುವೆ. ಅವರು ಜಿಲ್ಲೆಗೆ ಬಂದ ನಂತರ ಬಡಾವಣೆಗೆ ಕರೆತಂದು ಸಮಸ್ಯೆಗಳ ಬಗ್ಗೆ ತಿಳಿಸಲಾಗುವುದು. ಹೋರಾಟ ಕೈಬಿಡಬೇಕೆಂದು ಮನವಿ ಮಾಡಿದರು. ಆದರೆ, ಇದಕ್ಕೆ ಸ್ಥಳೀಯರು ಒಪ್ಪಲಿಲ್ಲ. ಬಳಿಕ ಪಾಲಿಕೆಯ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತನಾಡಿಸಿ, ಸಮಸ್ಯೆ ಬಗೆಹರಿಸುವ ಆಶ್ವಾಸನೆ ಕೊಡಿಸಿದರು. ಇದಕ್ಕೆ ಸ್ಥಳೀಯರು ಒಪ್ಪಿದರು.

ADVERTISEMENT

ಕೃಷಿ ಕಾಲೊನಿ, ವಿವೇಕಾನಂದ ಕಾಲೊನಿಯಲ್ಲಿ ರಸ್ತೆಯಲ್ಲಿ ಹಾಕಿರುವ ಅವೈಜ್ಞಾನಿಕ ಹಂಪ್ಸ್‌, ರಸ್ತೆ ಅತಿಕ್ರಮಣವನ್ನು ತಕ್ಷಣವೇ ತೆರವುಗೊಳಿಸಬೇಕು. ಮೌನೇಶ್ವರ ದೇವಸ್ಥಾನದಿಂದ ಮನ್ನಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ, ಜ್ಞಾನಗಂಗಾ ಫಾರ್ಮಸಿ ಕಾಲೇಜಿನ ರಸ್ತೆ ಅಭಿವೃದ್ಧಿಪಡಿಸಬೇಕು. ಕೃಷಿ ಕಾಲೊನಿಯಲ್ಲಿ ಪಾಳು ಬಿದ್ದಿರುವ ಉದ್ಯಾನವನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಬೇಕು. ಈ ಉದ್ಯಾನದಲ್ಲಿ ಅನೇಕ ವಿಷ ಜಂತುಗಳು ನೆಲೆಸಿವೆ. ಇದರಿಂದ ಸ್ಥಳೀಯರು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ. ಅದನ್ನು ಸರಿಪಡಿಸಬೇಕು. ಬಡಾವಣೆಗಳಲ್ಲಿ ವಿದ್ಯುತ್‌ ದೀಪ, ನಾಮಫಲಕಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

‘ಪಾಲಿಕೆಗೆ ನಿಯಮಿತವಾಗಿ ಎಲ್ಲಾ ರೀತಿಯ ತೆರಿಗೆ ತುಂಬುತ್ತ ಬಂದಿದ್ದೇವೆ. ನಮ್ಮ ಬಡಾವಣೆಗಳು ಅಸ್ತಿತ್ವಕ್ಕೆ ಬಂದು ಮೂರು ದಶಕಗಳಾಗುತ್ತ ಬಂದಿವೆ. ಕನಿಷ್ಠ ಮೂಲಸೌಕರ್ಯ ಇಲ್ಲ. ಸೌಲಭ್ಯ ಕಲ್ಪಿಸಬೇಕೆಂದು ಹಲವು ಸಲ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಅನಿವಾರ್ಯವಾಗಿ ಹೋರಾಟಕ್ಕಿಳಿಯಬೇಕಾಯಿತು’ ಎಂದು ಸಂಜೀವಕುಮಾರ್‌ ಸಜ್ಜನ್‌ ಹೇಳಿದರು.

ವಿವೇಕಾನಂದ ಕಾಲೊನಿಯ ಸಂಜೀವಕುಮಾರ್‌ ಸಜ್ಜನ್‌, ಪಾಂಡುರಂಗ ಇಟಕಂಪಳ್ಳಿ, ಶಿವರಾಜ ಜಮಾದಾರ್‌, ಸುಭಾಷ ಹುಲಸೂರೆ, ಬಕ್ಕಪ್ಪ ಶೇರಿಕಾರ್‌, ಮಲ್ಲಿನಾಥ ಸಜ್ಜನ್‌, ವೀರಶೆಟ್ಟಿ ಹಚ್ಚೆ, ವೀರೇಶ, ಶಶಿಕಾಂತ, ಶೇಷರಾವ್‌ ಕುಲಕರ್ಣಿ, ಭಗವಾನ್‌ ದಾಸ್‌, ಅನಿಲ್‌ಕುಮಾರ್‌, ರೇವಣಸಿದ್ದಪ್ಪ, ಶಿವಪುತ್ರ ಪಾಟೀಲ, ಸೂರ್ಯಕಾಂತ ಮಾಳಗೆ, ಅಶೋಕ ರೆಡ್ಡಿ, ಕೃಷಿ ಕಾಲೊನಿಯ ಕಾಶಿನಾಥ ಬೇಲೂರ, ಗೋಪಾಲ ರೆಡ್ಡಿ, ದೇವಿಂದ್ರಪ್ಪ ಚಿಮಕೋಡೆ, ಶಿವನಾಥ, ವಿಜಯಕುಮಾರ, ನಾಗನಾಥ ಪಾಟೀಲ, ಮಂಜುನಾಥ ಆಲೂರೆ, ಕೇದಾರ, ಕೇಶವ ಕುಲಕರ್ಣಿ, ಡಾ. ಚಂದ್ರಕಾಂತ ಹಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

ಬೀದರ್‌ನ ಕೃಷಿ ಕಾಲೊನಿ ವಿವೇಕಾನಂದ ಕಾಲೊನಿಯ ನಿವಾಸಿಗಳು ಮೈಲೂರ–ಗುಂಪಾ ರಿಂಗ್‌ರೋಡ್‌ನಲ್ಲಿ ಭಾನುವಾರ ರಸ್ತೆ ತಡೆ ನಡೆಸಿದರು
15 ದಿನಗಳ ಗಡುವು
ಮೌನೇಶ್ವರ ರಸ್ತೆಯಿಂದ ಮನ್ನಳ್ಳಿ ರಸ್ತೆಯ ವರೆಗೆ ಜ್ಞಾನಗಂಗಾ ಫಾರ್ಮಸಿ ಕಾಲೇಜಿನ ರಸ್ತೆ ಕೃಷಿ ಕಾಲೊನಿಯ ಉದ್ಯಾನವನ್ನು 15 ದಿನಗಳ ಒಳಗೆ ಅಭಿವೃದ್ಧಿಪಡಿಸುವ ಕೆಲಸ ಕೈಗೆತ್ತಿಕೊಳ್ಳಬೇಕು. ಇಲ್ಲವಾದಲ್ಲಿ 15 ದಿನಗಳ ನಂತರ ಮನ್ನಳ್ಳಿ ಮುಖ್ಯರಸ್ತೆಯಲ್ಲಿರುವ ಗುಂಪಾ ರಿಂಗ್‌ರೋಡ್‌ನಲ್ಲಿ ರಸ್ತೆತಡೆ ಚಳವಳಿ ನಡೆಸಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.
ರಸ್ತೆ ಅತಿಕ್ರಮಣ ತೆರವು
ಪ್ರತಿಭಟನಾ ಸ್ಥಳಕ್ಕೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಬಂದು ಮನವಿ ಸ್ವೀಕರಿಸಿದ ನಂತರ ಮೌನೇಶ್ವರ ದೇವಸ್ಥಾನ ಕೃಷಿ ಕಾಲೊನಿ ವಿವೇಕಾನಂದ ಕಾಲೊನಿಯಲ್ಲಿನ ರಸ್ತೆ ಅತಿಕ್ರಮಣ ಅವೈಜ್ಞಾನಿಕ ಹಂಪ್ಸ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ರಸ್ತೆಗಳಿಗೆ ಹಂಪ್ಸ್‌ಗಳನ್ನು ಹಾಕುವ ಅಧಿಕಾರ ಲೋಕೋಪಯೋಗಿ ಇಲಾಖೆ ಮಹಾನಗರ ಪಾಲಿಕೆಗೆ ಇದೆ. ಸಾರ್ವಜನಿಕರು ಹಂಪ್ಸ್‌ಗಳನ್ನು ಹಾಕುವಂತಿಲ್ಲ. ಈಗಾಗಲೇ ಹಾಕಿದ್ದ ಹಂಪ್ಸ್‌ ತೆರವುಗೊಳಿಸಿದ್ದು ಹಾಕಿದವರಿಗೆ ನೋಟಿಸ್‌ ನೀಡಲಾಗುವುದು. ಮೌನೇಶ್ವರ ರಸ್ತೆ ದುರಸ್ತಿ ಕೃಷಿ ಕಾಲೊನಿಯ ಉದ್ಯಾನವನ್ನು ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಪಾಲಿಕೆಯ ಎಇಇ ನಾಗನಾಥ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.