ADVERTISEMENT

ಬೀದರ್ ಮಹಾನಗರ ಪಾಲಿಕೆ ನಾಮಫಲಕ ಕನ್ನಡದಲ್ಲಿರಲಿ: ಒತ್ತಾಯ

ಉರ್ದು ನಾಮಫಲಕದಲ್ಲಿ ‘ಮಹಮ್ಮದಾಬಾದ್‌ ಬೀದರ್‌ ಷರೀಫ್‌‘ಗೆ ಕಸಾಪ ವಿರೋಧ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 6:48 IST
Last Updated 7 ಸೆಪ್ಟೆಂಬರ್ 2025, 6:48 IST
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್‌ ಹಾನಗಲ್‌ ಹಾಜರಿದ್ದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್‌ ಹಾನಗಲ್‌ ಹಾಜರಿದ್ದರು   

ಬೀದರ್‌: ‘ಬೀದರ್‌ ಮಹಾನಗರ ಪಾಲಿಕೆಯ ನಾಮಫಲಕ ಕನ್ನಡದಲ್ಲಿ ಬರೆಸಬೇಕು. ಕಡ್ಡಾಯವಾಗಿ ಕನ್ನಡದಲ್ಲಿಯೇ ಬರೆಯಿಸಬೇಕೆಂಬ ನಿಯಮ ಜಾರಿಯಲ್ಲಿದ್ದರೂ ಕನ್ನಡದೊಂದಿಗೆ ಉರ್ದು ಭಾಷೆಯಲ್ಲಿ ಬರೆಸಿರುವುದು ಸರಿಯಲ್ಲ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಅವರು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

ಹಿಂದಿನ ನಗರಸಭೆಯ ಸಭೆಯೊಂದರಲ್ಲಿ ನಿರ್ಣಯ ಅಂಗೀಕರಿಸಿ ಕನ್ನಡದ ಜತೆ ಉರ್ದುವಿನಲ್ಲಿ ಬರೆಯಲಾಗಿತ್ತು. ಕನ್ನಡಿಗರ ಆಗ್ರಹದ ಮೇರೆಗೆ ಆ ಉರ್ದು ನಾಮಫಲಕವನ್ನು ತೆಗೆದು ಹಾಕಲಾಗಿತ್ತು. ಆದರೆ, ಈಗ ಕೆಲವರು ಮತ್ತೆ ಉರ್ದು ನಾಮಫಲಕ ಹಾಕಿ ಬೇರೆ ಇಲಾಖೆಯವರಿಗೂ ಉರ್ದುವಿನಲ್ಲಿ ಬರೆಸಲು ಒತ್ತಾಯಿಸುವುದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ADVERTISEMENT

ರಾಜ್ಯ ಸರ್ಕಾರದ ಆದೇಶವಿಲ್ಲದೇ ಉರ್ದು ನಾಮಫಲಕ ಹಾಕುವುದು ಕಾನೂನುಬಾಹಿರ. ಬೀದರ್‌ನಲ್ಲಿ ಹಿಂದಿ, ಮರಾಠಿ, ಉರ್ದು, ತೆಲುಗು, ಸಿಖ್ ಭಾಷಿಕರು ಇದ್ದಾರೆ. ಹಾಗಂತ ಎಲ್ಲಾ ಭಾಷೆಗಳಲ್ಲಿ ಬರೊಯೊಕ್ಕಾಗುತ್ತಾ? ಕನ್ನಡದಲ್ಲಿ ಶೇ 60ರಷ್ಟು ಬರೆಸಿ, ಹಿಂದಿ, ಇಂಗ್ಲಿಷ್ ಬರೆದರೆ ಎಲ್ಲರಿಗೂ ಅರ್ಥವಾಗುತ್ತೆ. ನಾವು ಅನ್ಯ ಭಾಷೆಯ ವಿರೋಧಿಗಳಲ್ಲ. ಆದರೆ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ನಿಯಮದಂತೆ ನಾಮಫಲಕವಿರಬೇಕು. ಆದರೆ, ಇಂತಹ ಕ್ರಮಗಳು ಭಾಷಾ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದ್ದಾರೆ.

ಈ ನೆಲದ ಕಾನೂನಿನ ಅನ್ವಯ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬ ಸರ್ಕಾರಿ ನೌಕರರ ಕರ್ತವ್ಯವಾಗಿದೆ. ತಕ್ಷಣವೇ ಉರ್ದು ನಾಮಫಲಕವನ್ನು ತೆರವುಗೊಳಿಸಿ ಮಹಾನಗರ ಪಾಲಿಕೆಯ ಮೇಲೆ ಕನ್ನಡದಲ್ಲಿ ನಾಮಫಲಕ ಹಾಕಿಸಬೇಕು. ಈಗಾಗಲೇ ಹಾಕಿರುವ ಉರ್ದು ನಾಮಫಲಕದಲ್ಲಿ ‘ಮಹಮ್ಮದಾಬಾದ್‌ ಬೀದರ್‌ ಷರೀಫ್’ ಅಂತ ಬರೆಯಲಾಗಿದೆ. ಅದನ್ನು ತೆಗೆಯಲು ಕ್ರಮ ಕೈಗೊಳ್ಳಬೇಕು. ಬೀದರ್ ನಗರಸಭೆಯ ವತಿಯಿಂದ ಪ್ರತಿದಿನ ಬೆಳಿಗ್ಗೆ ಘನತಾಜ್ಯ ಸಂಗ್ರಹಿಸುವ ವಾಹನಗಳಲ್ಲಿ ಹಿಂದಿ ಭಾಷೆಯ ಗೀತೆಗಳನ್ನು ಹಾಕಲಾಗುತ್ತಿದೆ. ಅದನ್ನು ನಿಲ್ಲಿಸಿ ಕನ್ನಡ ಗೀತೆಗಳನ್ನು ಬಳಸಲು ಸೂಚಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಬೀದರ್ ಜಿಲ್ಲೆಯ ಗ್ರಾಮ, ಪಟ್ಟಣ, ನಗರ ಪ್ರದೇಶಗಳ ರಸ್ತೆ, ಬಡಾವಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ತಪ್ಪು ತಪ್ಪಾಗಿ ಬರೆಯಲಾಗಿದೆ. ಕೂಡಲೇ ಅವುಗಳನ್ನು ಸರಿಪಡಿಸಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಹಾಗೂ ಅಂಗಡಿಗಳ ಮೇಲೆ ಕಡ್ಡಾಯವಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರಂತೆ ಕನ್ನಡದಲ್ಲಿ ನಾಮಫಲಕ ಅಳವಡಿಸಿಕೊಳ್ಳಲು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.