ADVERTISEMENT

ಬೀದರ್‌ ಕನ್ನಡ ಸಾಹಿತ್ಯ ಸಮ್ಮೇಳನ: ಮೆರವಣಿಗೆಗೆ ಸಚಿವ ಈಶ್ವರ ಖಂಡ್ರೆ ಚಾಲನೆ

ಸಾರೋಟಿನಲ್ಲಿ ಸರ್ವಾಧ್ಯಕ್ಷರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 6:58 IST
Last Updated 9 ಮಾರ್ಚ್ 2024, 6:58 IST
<div class="paragraphs"><p>ಮೆರವಣಿಗೆಗೆ ಸಚಿವ ಈಶ್ವರ ಖಂಡ್ರೆ ಚಾಲನೆ</p></div>

ಮೆರವಣಿಗೆಗೆ ಸಚಿವ ಈಶ್ವರ ಖಂಡ್ರೆ ಚಾಲನೆ

   

ಬೀದರ್‌: ‌ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿರುವ ಸರ್ವಾಧ್ಯಕ್ಷರು ಹಾಗೂ ಕಲಾ ತಂಡಗಳ ಮೆರವಣಿಗೆಗೆ ಶನಿವಾರ ಚಾಲನೆ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಡೊಳ್ಳು ಬಾರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಅದಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್‌ ಸಾಥ್‌ ನೀಡಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರನ್ನು ಅಲಂಕರಿಸಿದ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಗುತ್ತಿದೆ.

ADVERTISEMENT

ವಿವಿಧ ಶಾಲೆಯ ಮಕ್ಕಳು ಬಸವಣ್ಣ, ಅಕ್ಕಮಹಾದೇವಿ, ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು, ಇಳಕಲ್‌ ಮಹಾಂತಪ್ಪ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಅವರ ವೇಷಧಾರಿಗಳಾಗಿ ಗಮನ ಸೆಳೆದರು.

ಇನ್ನು, ಪರಿಷತ್ತಿನ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಕನ್ನಡದ ಬಾವುಟಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕಿದರು. ಕನ್ನಡಾಂಬೆಗೆ ಜಯವಾಗಲಿ, ಸಾಹಿತ್ಯ ಪರಿಷತ್ತಿಗೆ ಜಯವಾಗಲಿ, ತಾಯಿ ಭುವನೇಶ್ವರಿಗೆ ಜಯವಾಗಲಿ, ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂದು ಜಯಘೋಷಗಳನ್ನು ಹಾಕಿದರು.

ನಗರದ ಮನ್ನಳ್ಳಿ ರಸ್ತೆಯ ಕರ್ನಾಟಕ ಫಾರ್ಮಸಿ ಕಾಲೇಜಿನ ಆವರಣದಿಂದ ಆರಂಭಗೊಂಡ ಮೆರವಣಿಗೆಯು ಮೈಲೂರ್‌ ಕ್ರಾಸ್‌, ಹಾರೂರಗೇರಿ, ಬಸವೇಶ್ವರ ವೃತ್ತ, ಭಗತ್‌ ಸಿಂಗ್‌ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ಮೂಲಕ ಹಾದು ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರ ತಲುಪಲಿದೆ.

ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಮನು ಬಳಿಗಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ಅಧ್ಯಕ್ಷ ಬಾಬುವಾಲಿ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಹಾಜರಿದ್ದರು.

ಬೆಳಿಗ್ಗೆ ರಂಗ ಮಂದಿರದಲ್ಲಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ನಾಡ ಧ್ವಜಾರೋಹಣ ಹಾಗೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಪರಿಷತ್ ಧ್ವಜಾರೋಹಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.