ADVERTISEMENT

ಬೀದರ್ | ಕುಷ್ಠರೋಗ ಪತ್ತೆ ಆಂದೋಲನ ಯಶಸ್ಸಿಗೆ ಸೂಚನೆ

ನ.24ರಿಂದ ಡಿ.9ರ ವರೆಗೆ ಆಂದೋಲನ ಮನೆಮನೆಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 7:12 IST
Last Updated 21 ನವೆಂಬರ್ 2025, 7:12 IST
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ ಹಾಗೂ ಇತರರು ಕುಷ್ಠರೋಗ ಆಂದೋಲದ ಭಿತ್ತಿಪತ್ರ ಬಿಡುಗಡೆಗೊಳಿಸಿದರು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ ಹಾಗೂ ಇತರರು ಕುಷ್ಠರೋಗ ಆಂದೋಲದ ಭಿತ್ತಿಪತ್ರ ಬಿಡುಗಡೆಗೊಳಿಸಿದರು   

ಬೀದರ್‌: ‘ಜಿಲ್ಲೆಯಾದ್ಯಂತ ನ. 24ರಿಂದ ಡಿ. 9ರ ವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಆಂದೋಲನವನ್ನು ಯಶಸ್ವಿಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಗುರುವಾರ ನಡೆದ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಪರ್ಶ ಜ್ಞಾನ, ನೋವು ನವೆ ಇಲ್ಲದ ತಿಳಿ ಬಿಳಿ ತಾಮ್ರ ವರ್ಣದ ಮಚ್ಚೆ, ಕೈ ಕಾಲು ಜೋಮು ಉಂಟಾಗುವುದು, ಮಚ್ಚೆಯ ಜಾಗದಲ್ಲಿ ಕೂದಲುಗಳು ಉದುರುವಿಕೆ ಇವು ಕುಷ್ಠರೋಗದ ಲಕ್ಷಣಗಳಾಗಿವೆ. ಇದು ಒಂದು ನರ ಮತ್ತು ಚರ್ಮದ ಕಾಯಿಲೆಯಾಗಿದೆ. ಕುಷ್ಠರೋಗದಿಂದ ಉಂಟಾಗುವ ಅಂಗವೈಕಲ್ಯದ ಬಗ್ಗೆ ಸೂಕ್ತ ತಿಳಿವಳಿಕೆ, ಚಿಕಿತ್ಸೆ ಅಗತ್ಯ. ಅದರ ಬಗ್ಗೆಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಪ್ರಾರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡಿ, ಬಹು ಔಷಧಿ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು. ಭವಿಷ್ಯದಲ್ಲಿ ಆಗಬಹುದಾದ ಅಂಗವೈಕಲ್ಯವನ್ನು ತಡೆಯಬಹುದು. ಗಾಂಧೀಜಿಯವರ ಕಂಡ ಕನಸ್ಸಿನಂತೆ ಕುಷ್ಠರೋಗ ಮುಕ್ತ ಭಾರತ ನಿರ್ಮಿಸಬೇಕು ಎಂದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡಿ, ಜಿಲ್ಲಾ ಕುಷ್ಠರೋಗ ನಿರ್ಮೂಲನೆ ಅಧಿಕಾರಿ ಡಾ.ಕಿರಣ ಎಮ್.ಪಾಟೀಲ್, ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಡಾ.ಶಂಕ್ರೆಪ್ಪ ಬೊಮ್ಮಾ, ಡಾ.ಶಿವಶಂಕರ ಬಿ., ಡಾ.ರಾಜಶೇಖರ ಪಾಟೀಲ್, ಡಾ.ದಿಲೀಪ್‌ ಡೋಂಗ್ರೆ, ಡಾ.ಅನೀಲ್ ಚಿಂತಾಮಣಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಗಾರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬ್ಳೆ, ಸಂಗೀತಾ, ಡಾ.ರೇಣುಕಾ, ವೀರಶೆಟ್ಟಿ ಚನ್ನಶೆಟ್ಟಿ, ಬಸವರಾಜ ರಾಜಕುಮಾರ, ಭೃಮರಾಂಬದೇವಿ, ಜ್ಯೋತಿ, ಇಮ್ಯಾನುವೆಲ್‌, ಶಾಮರಾವ್‌, ಅಬ್ದುಲ್‌ಹೈ, ಅಫಜಲುದ್ದೀನ್‌, ಅರವಿಂದ, ಗೋರಖನಾಥ್‌ ಇದ್ದರು.

‘ಶಾಪ–ಪಾಪಕ್ಕೆ ಬರೊಲ್ಲ’

ಕುಷ್ಠರೋಗವು ಸಾಂಕ್ರಾಮಿಕ ರೋಗವಲ್ಲ. ಇದು ಯಾವುದೇ ಶಾಪ– ಪಾಪದಿಂದ ಬರುವುದಿಲ್ಲ. ಈ ಕಾಯಿಲೆ ‘ಮೈಕೋ ಬ್ಯಾಕ್ಟಿರಿಯಾ ಲೆಪ್ರೆ’ ಎಂಬ ರೋಗಾಣುವಿನಿಂದ ಬರುತ್ತದೆ. ಈ ಬ್ಯಾಕ್ಟಿರಿಯಾಗಳು ಬಹು ಔಷಧಿ ಚಿಕಿತ್ಸೆ ಪಡೆಯದೇ ಇದ್ದ ಸೋಂಕಿತ ವ್ಯಕ್ತಿ ಸೀನಿದಾಗ ಕೆಮ್ಮಿದಾಗ ಹೊರಬರುವ ತುಂತುರ ಹನಿಗಳ ಮೂಲಕ ರೋಗಾಣುಗಳು ಗಾಳಿಯಲ್ಲಿ ಸೇರಿಕೊಂಡು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಕಾಯಿಲೆಗೆ ಯಾರೂ ಹೆದರಬೇಕಿಲ್ಲ. ಇದನ್ನು ಗೌಪ್ಯವಾಗಿ ಇಡದೇ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಪ್ರಾರಂಭಿಕ ಹಂತದಲ್ಲೆ ಚಿಕಿತ್ಸೆ ಪಡೆದರು ಗುಣಮುಖರಾಗಬಹುದು ಎಂದು ಸಿಇಒ ಡಾ. ಗಿರೀಶ್‌ ಬದೋಲೆ ತಿಳಿಸಿದರು.

564 ತಂಡ 8 ಲಕ್ಷ ಜನರ ಪರೀಕ್ಷೆ

ಬೀದರ್‌ ಜಿಲ್ಲೆಯಾದ್ಯಂತ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಂದೋಲನ್ದಲ್ಲಿ ಒಟ್ಟು 564 ತಂಡಗಳಿವೆ. ಇದರಲ್ಲಿ 1128 ಸದಸ್ಯರಿದ್ದಾರೆ. 56 ಮೇಲ್ವಿಚಾರಕರು ಕೆಲಸ ನಿರ್ವಹಿಸಲ್ಲಿದ್ದು ಒಟ್ಟು 158005 ಮನೆಗಳಿಗೆ ಭೇಟಿ ನೀಡಿ 839128 ಜನರಿಗೆ ಪರೀಕ್ಷೆ ಮಾಡಲಿದ್ದಾರೆ. ಪ್ರತಿ ತಂಡದಲ್ಲಿ ಒಬ್ಬ ಮಹಿಳಾ ಮತ್ತು ಪುರುಷ ಸಿಬ್ಬಂದಿ ಇರುತ್ತಾರೆ. ಬೀದರ್‌ ಜಿಲ್ಲೆಯಲ್ಲಿ ಸದ್ಯ 66 ಕುಷ್ಠರೋಗಿಗಳು ಬಹು ಔಷಧಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಶಿಕ್ಷಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆಯ ಸಮನ್ವಯದೊಂದಿಗೆ ಈ ಕಾರ್ಯಕ್ರಮವನ್ನು ಅಂತರ ಇಲಾಖಾ ಸಮನ್ವಯದೊಂದಿಗೆ ಮಾಡಬೇಕು. ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಸಂಬಂಧಪಟ್ಟ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕುಷ್ಠರೋಗ ನಿವಾರಿಸಲು ಗ್ರಾಮದಲ್ಲಿ ಟಂಟ್‌ ಹಾಕಿಸಿ ಜನರಲ್ಲಿ ಜಾಗೃತಿ ಮೂಡಿಸಿ ಸಮೀಕ್ಷೆ ಕೈಗೊಳ್ಳಬೇಕು ಎಂದು ಸೂಚಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.