
ಬೀದರ್: ಗಾಳಿಪಟದ ಮಾಂಜಾ (ದಾರ) ಬೈಕ್ ಮೇಲೆ ತೆರಳುವಾಗ ಕುತ್ತಿಗೆಗೆ ಸಿಕ್ಕಿಕೊಂಡು ಸೀಳಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಸೇತುವೆ ಬಳಿಯಲ್ಲಿ ಬುಧವಾರ ನಡೆದಿದೆ.
ಬೀದರ್ ತಾಲ್ಲೂಕಿನ ಬಂಬುಳಗಿ ಗ್ರಾಮದ ಸಂಜುಕುಮಾರ್ ಗುಂಡಪ್ಪ ಹೊಸಮನಿ (49) ಮೃತ ವ್ಯಕ್ತಿ. ಮೃತರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.
‘ಸಂಕ್ರಾಂತಿ ಹಬ್ಬದ ರಜೆ ಇರುವುದರಿಂದ ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ಓದುತ್ತಿರುವ ಮಗಳನ್ನು ಕರೆತರಲು ಸಂಜುಕುಮಾರ ಅವರು ಬೈಕ್ ಮೇಲೆ ತೆರಳುತ್ತಿದ್ದರು. ಆಗ ಮಾಂಜಾ ಕುತ್ತಿಗೆಗೆ ಸಿಲುಕಿ ಛೇದಿಸಿದೆ. ನಂತರ ಅವರು ಬೈಕ್‌ನಿಂದ ಕೆಳಗೆ ಬಿದ್ದು ತೀವ್ರ ರಕ್ತಸ್ರಾವವಾಗಿ ರಸ್ತೆ ಮೇಲೆ ಹೊರಳಾಡುತ್ತ ಪ್ರಾಣ ಬಿಟ್ಟಿದ್ದಾರೆ. ಅವರು ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲೇ ಜನರಿದ್ದರೂ ಯಾರೂ ಅವರ ನೆರವಿಗೆ ಧಾವಿಸಲಿಲ್ಲ. ಮನ್ನಾಏಖ್ಖೆಳ್ಳಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
ಘಟನೆ ಬೆನ್ನಲ್ಲೇ ಜಿಲ್ಲಾ ಪೊಲೀಸರು, ಮಾಂಜಾ ತಯಾರಿಸುತ್ತಿದ್ದ ಮೂರು ಮಳಿಗೆಗೆಳನ್ನು ನಗರದಲ್ಲಿ ಜಪ್ತಿ ಮಾಡಿದ್ದಾರೆ.
ಗಾಜು ಪುಡಿ ಮಾಡಿ ಅರಿಶಿನ ಅಂಟು ಅಥವಾ ಇತರೆ ಜಿಗುಟು ವಸ್ತುವಿನೊಂದಿಗೆ ಸೇರಿಸಿ ರಾಸಾಯನಿಕ ಬಣ್ಣ ಮಿಶ್ರಣ ಮಾಡಿ ನೈಲಾನ್ ದಾರ ಅಥವಾ ತೆಳುವಾದ ವೈರ್‌ಗೆ ಸವರಿ ಆನಂತರ ಬಿಸಿಲಿನಲ್ಲಿ ಒಣಗಿಸುತ್ತಾರೆ. ಇದರಿಂದ ಅದು ಬಹಳ ಹರಿತವಾಗುತ್ತದೆ. ಈ ದಾರಕ್ಕೆ ಗಾಳಿಪಟ ಕಟ್ಟಿ ಹಾರಿಸುತ್ತಾರೆ. ಬೇರೆಯವರ ಪಟ ಕತ್ತರಿಸಲು ಈ ಮಾಂಜಾ ಉಪಯೋಗಿಸಿ ಗಾಳಿಪಟ ಹಾರಿಸುವುದು ರೂಢಿ. ಜನ–ಜಾನುವಾರು ಹಾಗೂ ಪಕ್ಷಿಗಳಿಗೆ ಇದು ಮಾರಕವಾಗಿರುವ ಕಾರಣ ನಿಷೇಧಿಸಲಾಗಿದೆ. ಆದರೂ ಎಗ್ಗಿಲ್ಲದೇ ಬಳಕೆಯಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.