ಭಾಲ್ಕಿ ತಾಲ್ಲೂಕಿನ ದಾಡಗಿ ಸೇತುವೆಗೆ ರಕ್ಷಣಾ ತಡೆಗೋಡೆ ಇಲ್ಲದಿರುವುದು
ಭಾಲ್ಕಿ: ತಾಲ್ಲೂಕಿನ ದಾಡಗಿ ಗ್ರಾಮದ ಸಮೀಪ ಕಾರಂಜಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗೆ ರಕ್ಷಣಾ ತಡೆಗೋಡೆ ಇಲ್ಲ. ಹೀಗಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಾಲನೆ ಮಾಡುವಂತಾಗಿದೆ.
ಭಾರಿ ಮಳೆಯಾದಾಗ ಮತ್ತು ಕಾರಂಜಾ ಜಲಾಶಯದಿಂದ ನದಿಗೆ ನೀರು ಹರಿಸಿದರೆ ಸೇತುವೆ ಮುಳುಗುತ್ತದೆ. ಇದರಿಂದ ತಾಲ್ಲೂಕಿನ ದಾಡಗಿ, ಏಣಕೂರು, ಮದಕಟ್ಟಿ, ಬಾಜೋಳಗಾ, ಕಪಲಾಪುರ, ಉಚ್ಚಾ ಸೇರಿದಂತೆ ಸುಮಾರು 15 ಹಳ್ಳಿಗಳ ಸಂಪರ್ಕ ತಾಲ್ಲೂಕು ಕೇಂದ್ರದೊಂದಿಗೆ ಕಡಿತಗೊಳ್ಳುತ್ತದೆ. ಐದೂವರೆ ದಶಕಗಳ ಹಿಂದೆ ನಿರ್ಮಿಸಲಾದ ಈ ಸೇತುವೆಗೆ ರಕ್ಷಣಾ ತಡೆಗೋಡೆ ಇಲ್ಲದಾಗಿದೆ. ಸದ್ಯದ ಸ್ಥಿತಿಗೆ ಸೇತುವೆಯ ಎತ್ತರವೂ ಕಿರಿದಾದಂತಾಗಿದೆ. ಭಾಲ್ಕಿಯಿಂದ ಹುಮನಾಬಾದ್, ಕಲಬುರಗಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯೂ ಆಗಿದೆ.
ಹೆಚ್ಚು ಮಳೆಯಾದಾಗೊಮ್ಮೆ ಸೇತುವೆ ಮುಳುಗಡೆಯಾಗುತ್ತಿದೆ. ತಾಲ್ಲೂಕು ಕೇಂದ್ರದ ಕಚೇರಿ, ಶಾಲೆ, ಕಾಲೇಜು ಸೇರಿದಂತೆ ಇತರ ಕೆಲಸ ಕಾರ್ಯಗಳಿಗೆ ಈ ಭಾಗದ ಜನರು ನಿತ್ಯ ಇದೇ ಮಾರ್ಗವಾಗಿ ಹೋಗಬೇಕು. ಮಳೆಗಾಲದಲ್ಲಿ ಯಾವ ಸಮಯದಲ್ಲಿ ಸೇತುವೆ ಮೇಲಿಂದ ನೀರು ಹರಿದು ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ ಎಂಬ ಭಯದಲ್ಲಿಯೇ ದಿನಗಳನ್ನು ಕಳೆಯುವಂತಾಗಿದೆ ಎಂದು ರೇವಣಸಿದ್ದ ಜಾಡರ, ಉಮಾಕಾಂತ ತಳವಾಡೆ, ನಾಗಶೆಟ್ಟಿ ಚೋಳಾ ಅಳಲು ತೋಡಿಕೊಂಡರು.
ಈಚೆಗೆ ಸುರಿದ ಭಾರಿ ಮಳೆಯ ಪರಿಣಾಮ ಸುಮಾರು ನಾಲ್ಕು ದಿನಗಳವರೆಗೆ ದಾಡಗಿ, ಇಂಚೂರ, ಲಖನಗಾಂವ, ಆನಂದವಾಡಿ ಸೇತುವೆ ಮೇಲಿಂದ ನೀರು ಹರಿದು ವಿವಿಧೆಡೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಭಾಲ್ಕಿ ಬಸ್ ಘಟಕಕ್ಕೆ ಸುಮಾರು ₹ 29 ಲಕ್ಷ ನಷ್ಟ ಉಂಟಾಯಿತು ಎಂದು ಸಾರಿಗೆ ಅಧಿಕಾರಿಗಳು ಈಚೆಗೆ ತಿಳಿಸಿದ್ದರು.
ಸಾರ್ವಜನಿಕರ ಸುಗಮ, ಸುರಕ್ಷಿತ ಸಂಚಾರ ದೃಷ್ಟಿಯಿಂದ ಶೀಘ್ರ ನೂತನ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು. ಸೇತುವೆ ನಿರ್ಮಾಣ ಕಾರ್ಯ ಆರಂಭದವರೆಗೆ ಇರುವ ಸೇತುವೆಗೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬುದು ವಿವಿಧ ಗ್ರಾಮಸ್ಥರ ಒತ್ತಾಯವಾಗಿದೆ.
ಭಾರಿ ಮಳೆಯಾದಾಗ, ಕಾರಂಜಾ ಜಲಾಶಯದಿಂದ ನದಿಗೆ ನೀರು ಹರಿಸಿದಾಗ ಸೇತುವೆ ಮುಳುಗಡೆ ಆಗುತ್ತಿದ್ದು ತಾಲ್ಲೂಕು ಕೇಂದ್ರದೊಂದಿಗೆ ಸಾಕಷ್ಟು ಹಳ್ಳಿಗಳ ಸಂಪರ್ಕ ಕಡಿತಗೊಳ್ಳುತ್ತಿದೆರೇವಣಸಿದ್ದ ಜಾಡರ್, ಎಬಿವಿಪಿ ಮುಖಂಡ
ದಾಡಗಿ ಸೇತುವೆ ಅಕ್ಕಪಕ್ಕ ರಕ್ಷಣಾ ತಡೆಗೋಡೆ ಇಲ್ಲದಿರುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನ ಚಾಲನೆ ಮಾಡಬೇಕಾಗಿದೆಉಮಾಕಾಂತ ತಳವಾಡೆ ಏಣಕೂರು ಗ್ರಾಮಸ್ಥ
ಸೇತುವೆ ತುಂಬಾ ಹಳೆಯದಾಗಿದ್ದು, ಸಾರ್ವಜನಿಕರ, ವಿದ್ಯಾರ್ಥಿಗಳ, ವ್ಯಾಪಾರಿಗಳ ಸುರಕ್ಷಿತ ಸಂಪರ್ಕದ ದೃಷ್ಟಿಯಿಂದ ಹೊಸದಾದ ಸೇತುವೆ ನಿರ್ಮಿಸುವುದು ಒಳಿತುನಾಗಶೆಟ್ಟಿ ಚೋಳಾ, ದಾಡಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.