ADVERTISEMENT

ಸಂಸತ್ತಿನ ಮೇಲೆ ಉಗ್ರರ ದಾಳಿಗೆ ಬೀದರ್‌ ಸಂಸದರ ಲೆಟರ್‌ ಹೆಡ್‌!

ಇಂದು ಮೈಸೂರು ಸಂಸದ ಪ್ರತಾಪ ಸಿಂಹ, 2001ರಲ್ಲಿ ರಾಮಚಂದ್ರ ವೀರಪ್ಪ ಹೆಸರು ಬಳಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 15 ಡಿಸೆಂಬರ್ 2023, 6:32 IST
Last Updated 15 ಡಿಸೆಂಬರ್ 2023, 6:32 IST
<div class="paragraphs"><p>2001ರಲ್ಲಿ ದಾಳಿಗೆ ಒಳಗಾದ ದೇಶದ ಹಳೆಯ ಸಂಸತ್‌ ಭವನದ ಕಟ್ಟಡ</p><p><br></p></div>

2001ರಲ್ಲಿ ದಾಳಿಗೆ ಒಳಗಾದ ದೇಶದ ಹಳೆಯ ಸಂಸತ್‌ ಭವನದ ಕಟ್ಟಡ


   

ಬೀದರ್‌: ಡಿಸೆಂಬರ್‌ 13ರಂದು ದೇಶದ ಹೊಸ ಸಂಸತ್‌ ಭವನದೊಳಗೆ ನಡೆದ ಭದ್ರತಾ ಲೋಪ ಘಟನೆಯು ಬರೋಬ್ಬರಿ 22 ವರ್ಷಗಳ ಹಿಂದೆ ಭಯೋತ್ಪಾದಕರು ನಡೆಸಿದ ದಾಳಿಯ ಕಹಿ ನೆನಪನ್ನು ಬಿಚ್ಚಿಟ್ಟಿದೆ. ಆದರೆ, ಅದಕ್ಕೆ ಅಂದಿನ ಬೀದರ್‌ ಸಂಸದರ ಹೆಸರು ತಳಕು ಹಾಕಿಕೊಂಡಿತ್ತು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.

ADVERTISEMENT

ಬುಧವಾರ (ಡಿ.13) ಹೊಸ ಸಂಸತ್‌ ಭವನದಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಮೈಸೂರು ಸಂಸದ ಪ್ರತಾಪ ಸಿಂಹ ಅವರ ಶಿಫಾರಸ್ಸಿನ ಮೂಲಕ ಪಾಸ್‌ ಪಡೆದ ಇಬ್ಬರು ಯುವಕರು ಕೃತ್ಯ ಎಸಗಿದ್ದಾರೆ. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ, 2001ರ ಡಿಸೆಂಬರ್‌ 13ರಂದು ಉಗ್ರರು ಸಂಸತ್ತಿನ ಮೇಲೆ ದಾಳಿ ನಡೆಸಿದಾಗ ಅಂದಿನ ಬೀದರ್‌ ಸಂಸದ ರಾಮಚಂದ್ರ ವೀರಪ್ಪ ಅವರ ಕಚೇರಿಯಿಂದ ಉಗ್ರರು ಪಾಸ್‌ ಪಡೆದುಕೊಂಡಿದ್ದರು.

ಭಯೋತ್ಪಾದಕರು ರಾಮಚಂದ್ರ ವೀರಪ್ಪನವರ ಲೆಟರ್‌ ಹೆಡ್‌ ಮತ್ತು ನಕಲಿ ಸಹಿ ಬಳಸಿ, ಅವರ ಕಚೇರಿಯ ಸಹಾಯಕರಿಗೆ ತೋರಿಸಿ ಕಾರಿನ ಪಾಸ್‌ ಪಡೆದುಕೊಂಡಿದ್ದರು. ಆ ಕಾರಿನ ಪಾಸ್‌ ಮೂಲಕ ಅವರು ಸಂಸತ್‌ ಭವನದ ಆವರಣದೊಳಗೆ ಪ್ರವೇಶಿಸಿದ್ದರು.

ಸಂಸದರ ಪಾಸ್‌ ಹಾಗೂ ಗೃಹ ಸಚಿವಾಲಯದ ಸ್ಟಿಕ್ಕರ್‌ ಅಂಟಿಸಿದ್ದ ಕೆಂಪು ಗೂಟದ ಅಂಬಾಸಿಡರ್‌ ಕಾರಿನೊಳಗೆ ಸಂಸತ್‌ ಭವನದ ಆವರಣದೊಳಗೆ ಪ್ರವೇಶ ಮಾಡಿದ್ದರು. 2001ರ ಡಿ.13ರ ಬೆಳಿಗ್ಗೆ 11.40ಕ್ಕೆ ಸಂಸತ್‌ ಭವನದ ಗೇಟ್‌ ನಂಬರ್‌ 12ರ ಮೂಲಕ ಒಳಗೆ ಹೋಗಿದ್ದರು. ಆದರೆ, ಭದ್ರತಾ ಸಿಬ್ಬಂದಿ ಅನುಮಾನಗೊಂಡು ಅವರನ್ನು ತಡೆಯಲೆತ್ನಿಸಿದಾಗ ಕಾರು ಅಪಘಾತಕ್ಕೀಡಾಗಿತ್ತು. ಬಳಿಕ ಅದರಲ್ಲಿದ್ದ ಭಯೋತ್ಪಾದಕರು ಹೊರಬಂದು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಸುಮಾರು 30 ನಿಮಿಷಗಳವರೆಗೆ ನಡೆದ ಗುಂಡಿನ ಕಾಳಗದಲ್ಲಿ ಎಂಟು ಜನ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು. ಐದು ಜನ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ದಾಳಿಯ ಸಂದರ್ಭದಲ್ಲಿ ಸಂಸತ್‌ ಭವನದೊಳಗೆ ನೂರಕ್ಕೂ ಅಧಿಕ ಜನ ಸದಸ್ಯರಿದ್ದರು. ಅಂದಿನ ಘಟನೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಭಾರತದ ಹೃದಯವನ್ನು ಕಲಕಿತ್ತು. ಬಳಿಕ ಸಂಸತ್ತಿಗೆ ಭಾರಿ ಭದ್ರತೆ ಕಲ್ಪಿಸಲಾಗಿತ್ತು. ಕೆಲ ತಿಂಗಳ ಹಿಂದೆ ಉದ್ಘಾಟನೆಗೊಂಡಿರುವ ಹೊಸ ಸಂಸತ್ತಿಗೆ ಅಂದಿಗಿಂತಲೂ ಹೆಚ್ಚು ಭದ್ರತೆಯ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಇಬ್ಬರು ಯುವಕರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್‌ ಕ್ಯಾನ್‌’ (ಹಳದಿ ವರ್ಣದ ಬಣ್ಣ ಉಗುಳುವ ಕ್ಯಾನ್‌) ಹಾರಿಸಿ ದಾಂದಲೆ ಮಾಡಿದ್ದಾರೆ. ಇದರಿಂದ ಆತಂಕ ಸೃಷ್ಟಿಯಾಗಿತ್ತು. 2001ರಲ್ಲಿ ನಡೆದ ಘಟನೆಗೆ ಹೋಲಿಸಿದರೆ ಬುಧವಾರದ ಕೃತ್ಯ ಏನೂ ಇಲ್ಲ. ಆದರೆ, ಭಾರಿ ಭದ್ರತಾ ಲೋಪ ಆಗಿರುವುದನ್ನು ಬಹಿರಂಗಪಡಿಸಿದೆ. ಹಳೆಯ ಘಟನೆಗಳಿಂದ ನಾವೇಕೆ ಪಾಠ ಕಲಿಯುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಬಸವರಾಜ ಆರ್ಯ

‘ಯಾರು ರಾಜಕೀಯ ಮಾಡಬಾರದು’

‘ಕ್ಷೇತ್ರದ ಮತದಾರರು ಎಂದು ಸಂಸದರು ಅಥವಾ ಅವರ ಕಚೇರಿಯ ಸಹಾಯಕರು ಪಾಸ್‌ ಕೊಡುತ್ತಾರೆ. ಈ ರೀತಿ ಮಾಡುತ್ತಾರೆ ಎಂದು ಯಾವುದೇ ಸಂಸದರಿಗೆ ಗೊತ್ತಿರುವುದಿಲ್ಲ. ಇಂದಿನ ಯುವ ಪೀಳಿಗೆ ಈ ಕೆಲಸ ಮಾಡಿದ್ದರಿಂದ ಇಡೀ ದೇಶ ತಲೆತಗ್ಗಿಸುವಂತಾಗಿದೆ. ಭಾರಿ ಭದ್ರತೆಯಿರುವ ಸಂಸತ್ತಿನೊಳಗೆ ಯುವಕರು ಪ್ರವೇಶಿಸಿದ್ದಾರೆ. ಇದು ಖಂಡನಾರ್ಹ. 2001ರಲ್ಲಿ ಭಯೋತ್ಪಾದಕರು ನಮ್ಮ ತಂದೆಯವರ ನಕಲಿ ಸಹಿ ಲೆಟರ್‌ ಬಳಸಿ ಹೋದಾಗ ಅಂದು ಸಂಸತ್ತಿನ ಹೊರಗೆ ಭದ್ರತಾ ಸಿಬ್ಬಂದಿ ಅವರನ್ನು ತಡೆದು ದೊಡ್ಡ ಅನಾಹುತ ತಪ್ಪಿಸಿದ್ದರು. ಅದಕ್ಕಾಗಿ ಯೋಧರು ಬಲಿದಾನ ಕೊಟ್ಟಿದ್ದರು. ಹೊಸ ಸಂಸತ್ತಿನೊಳಗೆ ಪ್ರವೇಶಿಸಿರುವುದು ಖಂಡನಾರ್ಹ. ಈ ವಿಷಯದಲ್ಲಿ ಯಾರು ರಾಜಕೀಯ ಮಾಡಬಾರದು’ ಎಂದು ಮಾಜಿಸಂಸದ ರಾಮಚಂದ್ರ ವೀರಪ್ಪ ಅವರ ಮಗ ಬಸವರಾಜ ಆರ್ಯ ಮನವಿ ಮಾಡಿದ್ದಾರೆ. ಅನಾರೋಗ್ಯದಿಂದ 2004ರಲ್ಲಿ ತಮ್ಮ 96ನೇ ವಯಸ್ಸಿನಲ್ಲಿ ರಾಮಚಂದ್ರ ವೀರಪ್ಪ ಹೈದರಾಬಾದಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.