ADVERTISEMENT

ಬೀದರ್ ನಗರಸಭೆ ಚುನಾವಣೆ: ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಇಂದು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 3:55 IST
Last Updated 30 ಏಪ್ರಿಲ್ 2021, 3:55 IST

ಬೀದರ್: ಬೀದರ್ ನಗರಸಭೆ ಹಾಗೂ ಹಳ್ಳಿಖೇಡ(ಬಿ) ಪಟ್ಟಣ ಪಂಚಾಯಿತಿಯ ವಾರ್ಡ್ ಸಂಖ್ಯೆ 11ರ ಉಪ ಚುನಾವಣೆಯ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಶುಕ್ರವಾರ (ಏ.30) ನಿರ್ಧಾರವಾಗಲಿದೆ.

ಬೀದರ್ ನಗರಸಭೆ ಚುನಾವಣೆಯ ಮತ ಎಣಿಕೆ ಗುರುನಾನಕ ಪಬ್ಲಿಕ್ ಸ್ಕೂಲ್‍ನಲ್ಲಿ ಹಾಗೂ ಹಳ್ಳಿಖೇಡ(ಬಿ) ಪಟ್ಟಣ ಪಂಚಾಯಿತಿಯ ವಾರ್ಡ್ ಸಂಖ್ಯೆ 11 ರ ಉಪ ಚುನಾವಣೆಯ ಮತ ಎಣಿಕೆ ಹುಮನಾಬಾದ್ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಲಿದೆ. ಬೆಳಿಗ್ಗೆ 8 ರಿಂದ ಮತ ಎಣಿಕೆ ಶುರುವಾಗಲಿದೆ. ಜಿಲ್ಲಾ ಆಡಳಿತ ಮತ ಎಣಿಕೆಗೆ
ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

ನೆಗೆಟಿವ್ ಇದ್ದವರಿಗೆ ಮಾತ್ರ ಪ್ರವೇಶ: ‘ನಗರದ ಗುರುನಾನಕ ಪಬ್ಲಿಕ್ ಸ್ಕೂಲ್‍ನ ಬೀದರ್ ನಗರಸಭೆ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಗುರುತಿನ ಚೀಟಿ ಹಾಗೂ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿದ ಅಭ್ಯರ್ಥಿ ಹಾಗೂ ಏಜೆಂಟರಿಗೆ ಮಾತ್ರ ಪ್ರವೇಶ ನೀಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ತಿಳಿಸಿದ್ದಾರೆ.

ADVERTISEMENT

‘ಎಣಿಕೆ ಕೇಂದ್ರಕ್ಕೆ ಹೋಗಲು ಎರಡು ದಾರಿಗಳು ಇವೆ. ರಂಗಮಂದಿರ ಪಕ್ಕದ ರಸ್ತೆ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಡಿವಾಳ ವೃತ್ತದ ಕಡೆಯಿಂದ ನಿರ್ಗಮನಕ್ಕೆ ಅವಕಾಶ ಇದೆ’ ಎಂದು ಹೇಳಿದ್ದಾರೆ.

‘ಯಾವುದೇ ಕಾರಣಕ್ಕೂ ಅಭ್ಯರ್ಥಿಗಳ ಬೆಂಬಲಿಗರು ಮತ ಎಣಿಕೆ ಕೇಂದ್ರದ ಆಸುಪಾಸಿನಲ್ಲಿ ಸೇರಲು ಅವಕಾಶ ಇಲ್ಲ. ವಿಜೇತ ಅಭ್ಯರ್ಥಿಗಳು ಮೆರವಣಿಗೆ ಅಥವಾ ವಿಜಯೋತ್ಸವ ಮಾಡದಂತೆ ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.