ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಬೀದರ್‌ನ ಬ್ರಿಮ್ಸ್‌ನಲ್ಲಿ ದಾಖಲಾಗಿರುವ ಡಕಾಯಿತಿ ಪ್ರಕರಣದ ಆರೋಪಿ ಕರ್ತಾರ್ ಸಿಂಗ್‌ನನ್ನು ನೋಡಿದ ಎಸ್ಪಿ ಪ್ರದೀಪ್ ಗುಂಟಿ
ಬೀದರ್: ಏಪ್ರಿಲ್ 26ರಂದು ನಗರದ ಓಲ್ಡ್ ಆದರ್ಶ ಕಾಲೊನಿಯಲ್ಲಿ ನಡೆದ ಡಕಾಯಿತಿ ಪ್ರಕರಣದ ಮೂವರು ಆರೋಪಿಗಳನ್ನು ಬೀದರ್ ಜಿಲ್ಲಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರಳಿಯ ಕರ್ತಾರ್ ಸಿಂಗ್, ಈತನ ಸಹೋದರ, ಬೀದರ್ ನಿವಾಸಿ ಜಗಜೀತ್ ಸಿಂಗ್ ಹಾಗೂ ಪುಣೆಯ ಅಕ್ಷಯ್ ಬಂಧಿತರು. ಕದ್ದೊಯ್ದಿದ್ದ ಚಿನ್ನ ಮಾರಾಟಕ್ಕೆ ಸಹಕಾರ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಗುಂಡೇಟಿನಿಂದ ಕರ್ತಾರ್ ಸಿಂಗ್ ಬಲಗಾಲಿಗೆ ಗುಂಡು ತಗುಲಿದ್ದು, ನಗರದ ಬ್ರಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡ ಹೆಡ್ ಕಾನ್‌ಸ್ಟೆಬಲ್ ಮಕ್ಸೂದ್ ಅವರಿಗೂ ಇಲ್ಲಿಯೇ ದಾಖಲಿಸಲಾಗಿದೆ.
ಘಟನೆ ನಡೆದ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಅರಣ್ಯ ಪ್ರದೇಶ
ನಡೆದದ್ದೇನು?: ನಗರದ ಓಲ್ಡ್ ಆದರ್ಶ ಕಾಲೊನಿಯಲ್ಲಿ ಏಪ್ರಿಲ್ 26ರಂದು ನಸುಕಿನ ಜಾವ ಐದು ಜನ ಮುಸುಕುಧಾರಿಗಳು, ಡಿಎಲ್‌ಆರ್ ಸೂಪರಿಟೆಂಡೆಂಟ್ ಜ್ಯೋತಿಲತಾ ಎಂಬುವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಬೆದರಿಸಿ, ₹15.55 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಡಕಾಯಿತಿ ಮಾಡಿದ್ದರು. ಈ ಸಂಬಂಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಾಂಧಿ ಗಂಜ್ ಹಾಗೂ ಬೀದರ್ ಗ್ರಾಮೀಣ ಪೊಲೀಸರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಈ ತಂಡವು ಶುಕ್ರವಾರ (ಮೇ 2) ಖಚಿತ ಸುಳಿವು ಆಧರಿಸಿ, ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಹತ್ತಿರ ಆರೋಪಿಗಳು ಓಡಾಡುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ತೆರಳಿ, ಅವರನ್ನು ವಶಕ್ಕೆ ಪಡೆಯಲು ಮುಂದಾಗಿದೆ. ಈ ವೇಳೆ ಕರ್ತಾರ್ ಸಿಂಗ್ ತನ್ನ ಬಳಿಯಿದ್ದ ಹರಿತವಾದ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹೆಡ್ ಕಾನ್‌ಸ್ಟೆಬಲ್ ಮಕ್ಸೂದ್ ಅವರ ಭುಜಕ್ಕೆ ಗಂಭೀರ ಗಾಯವಾಗಿ ಕುಸಿದು ಬಿದ್ದಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಗ್ರಾಮೀಣ ಠಾಣೆಯ ಸಿಪಿಐ ಜಿ.ಎಸ್. ಬಿರಾದಾರ ಅವರು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಕರ್ತಾರ್ ಸಿಂಗ್ ಗಾಯಗೊಂಡಿದ್ದಾನೆ. ಪೊಲೀಸರು ಆತನನ್ನು ಅಲ್ಲೇ ವಶಕ್ಕೆ ಪಡೆದರು. ಹೊನ್ನಿಕೇರಿ ಅರಣ್ಯ ಪ್ರದೇಶದೊಳಗಿನಿಂದ ಪರಾರಿಯಾಗಲು ಯತ್ನಿಸಿದ ಜಗಜೀತ್ ಸಿಂಗ್ ಹಾಗೂ ಅಕ್ಷಯ್‌ನನ್ನು ಹಿಡಿದಿದ್ದಾರೆ. ಬಳಿಕ ಇವರ ಮಾಹಿತಿ ಆಧರಿಸಿ ಚಿನ್ನಾಭರಣ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಬಳಿಕ ಬ್ರಿಮ್ಸ್‌ಗೆ ಭೇಟಿ ನೀಡಿ ಹೆಡ್ ಕಾನ್‌ಸ್ಟೆಬಲ್ ಮಕ್ಸೂದ್ ಅವರಿಗೆ ಧೈರ್ಯ ತುಂಬಿದರು. ಆರೋಪಿಗಳ ಮಾಹಿತಿ ಪಡೆದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪ್ರದೀಪ್ ಗುಂಟಿ, ‘ಕರ್ತಾರ್ ಸಿಂಗ್ ಹಾಗೂ ಜಗಜೀತ್ ಸಿಂಗ್ ಸಹೋದರರು. ಕರ್ತಾರ್ ಸಿಂಗ್ ವಿರುದ್ಧ 18 ಡಕಾಯಿತಿ ಪ್ರಕರಣಗಳಿವೆ. ಜಗಜೀತ್ ಸಿಂಗ್ ಬೀದರ್‌ನಲ್ಲೇ ಇರುವುದರಿಂದ ಎಲ್ಲ ವಿಷಯ ಸಂಗ್ರಹಿಸಿ, ಓಲ್ಡ್ ಆದರ್ಶ ಕಾಲೊನಿಯಲ್ಲಿ ಡಕಾಯಿತಿಗೆ ಯೋಜನೆ ರೂಪಿಸಿದ್ದ. ಐವರು ಸೇರಿಕೊಂಡು ಡಕಾಯಿತಿ ಮಾಡಿದ್ದರು. ಇದರಲ್ಲಿ ಈಗ ಮೂವರನ್ನು ಬಂಧಿಸಲಾಗಿದೆ. ಕದ್ದೊಯ್ದ ಚಿನ್ನಾಭರಣವನ್ನು ಪರಳಿಯಲ್ಲಿ ಮಾರಾಟ ಮಾಡಿ, ಐದು ಜನರು ಸಮನಾಗಿ ಹಣ ಹಂಚಿಕೊಂಡಿದ್ದರು. ಚಿನ್ನಾಭರಣ ಮಾರಾಟಕ್ಕೆ ನೆರವು ನೀಡಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರ ಹುಡುಕಾಟ ನಡೆದಿದೆ. ಚಿನ್ನಾಭರಣ ಜಪ್ತಿ ಪ್ರಕ್ರಿಯೆ ಕೂಡ ನಡೆದಿದೆ. ಡಕಾಯಿತಿಗೆ ಇವರು ಏರ್ ಗನ್ ಬಳಸಿರುವುದು ಗೊತ್ತಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.