ADVERTISEMENT

ಬೀದರ್‌ | ಮೂಲಸೌಕರ್ಯ ನಿರೀಕ್ಷೆಯಲ್ಲಿ ಹಳ್ಳಿಗಳು..

ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡವರಿಗೆ ಪರಿಹಾರ ಸಿಗುತ್ತಾ?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 25 ಫೆಬ್ರುವರಿ 2026, 7:50 IST
Last Updated 25 ಫೆಬ್ರುವರಿ 2026, 7:50 IST
ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನ
ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನ   

ಬೀದರ್‌: ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರವು ಬೀದರ್‌ ಮತ್ತು ಚಿಟಗುಪ್ಪ ತಾಲ್ಲೂಕಿನ 118 ಹಳ್ಳಿಗಳನ್ನು ಒಳಗೊಂಡಿರುವ ವಿಶಾಲ ಕ್ಷೇತ್ರ.

ಹಳ್ಳಿ ಮತ್ತು ತಾಂಡಾಗಳಿಂದ ಕೂಡಿರುವ ಈ ಕ್ಷೇತ್ರದ ಹಳ್ಳಿಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ದೊಡ್ಡ ಸವಾಲಿದೆ. ಕ್ಷೇತ್ರದ ವ್ಯಾಪ್ತಿ ವಿಶಾಲವಾಗಿದ್ದರೂ ಇಲ್ಲಿ ಪಟ್ಟಣ ಪಂಚಾಯಿತಿಯಾಗಲಿ, ಪುರಸಭೆಯಾಗಲಿ ಇಲ್ಲ. ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟವಾದ ಕೇಂದ್ರ ಸ್ಥಳವೂ ಇಲ್ಲ. ಆದಕಾರಣ ಬೀದರ್‌ ಮತ್ತು ಚಿಟಗುಪ್ಪ ತಾಲ್ಲೂಕು ಪಂಚಾಯಿತಿಗಳಲ್ಲಿ ಸಭೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ಹೋದ ವರ್ಷ ಚಿಟಗುಪ್ಪ ತಾಲ್ಲೂಕಿನ ಮನ್ನಾಏಖ್ಖೆಳ್ಳಿ ಹಾಗೂ ಬೀದರ್‌ ತಾಲ್ಲೂಕಿನ ಕಮಠಾಣ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಇನ್ನಷ್ಟೇ ಅದು ಅನುಷ್ಠಾನಕ್ಕೆ ಬರಬೇಕಿದೆ. ಇನ್ನು, ಬೀದರ್‌ ತಾಲ್ಲೂಕಿನ ಬಗದಲ್‌ ಕೂಡಾ ಅತಿ ದೊಡ್ಡ ಪಂಚಾಯಿತಿಯಾಗಿದ್ದು, ಜನಸಂಖ್ಯೆ ಕೂಡ ಹೆಚ್ಚಿದೆ. ಇದನ್ನು ಕೂಡ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಬೇಕೆಂಬ ಕೂಗು ಇದೆ. ಇದಕ್ಕೆ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ.

ADVERTISEMENT

ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು, ಗುಣಮಟ್ಟದ ರಸ್ತೆ, ಒಳಚರಂಡಿ, ಸಮರ್ಪಕವಾಗಿ ರೈತರಿಗೆ ವಿದ್ಯುತ್‌ ಪೂರೈಸುವುದು ಹಳ್ಳಿ ಭಾಗದ ಜನರ ಪ್ರಮುಖ ಬೇಡಿಕೆಗಳಾಗಿವೆ. ಹೆಚ್ಚಿನ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಇತರೆ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಬೀದರ್‌–ಚಿಟ್ಟಾ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಜನರ ಬಹುವರ್ಷಗಳ ಬೇಡಿಕೆಗೆ ಸ್ಪಂದನೆ ದೊರೆತಿದೆ. ಅದೇ ರೀತಿ ಸಿಂದೋಲ್‌ ಸಮೀಪದ ಸೇತುವೆ ಕೂಡ ಪ್ರತಿ ಮಳೆಗಾಲದಲ್ಲಿ ಮುಳುಗಡೆಯಾಗಿ ಸಂಚಾರ ಕಡಿತ ಹೋಗುತ್ತಿತ್ತು. ಅಲ್ಲಿ ಕೂಡ ಹೊಸ ಸೇತುವೆ ನಿರ್ಮಾಣಗೊಂಡಿದೆ.

ಬೀದರ್‌–ಮನ್ನಳ್ಳಿ–ಭಂಗೂರ ರಸ್ತೆ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆ ಕೂಡ ಇನ್ನಷ್ಟೇ ಈಡೇರಬೇಕಿದೆ. ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆಂದೇ ಪ್ರತ್ಯೇಕ ಆಡಳಿತ ಕಚೇರಿ ಕೂಡ ನಿರ್ಮಿಸಬೇಕೆಂಬ ಬೇಡಿಕೆ ಆರಂಭದಿಂದಲೂ ಇದ್ದು, ಇನ್ನೂ ಅದು ಮರೀಚಿಕೆಯಾಗಿದೆ.

ಇನ್ನು, ಈ ಭಾಗದ ಹಳ್ಳಿಗಳ ಜನರ ಜಮೀನು ಕಾರಂಜಾ ಯೋಜನೆಯಲ್ಲಿ ಮುಳುಗಡೆಯಾಗಿದೆ. ಅವರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಹೋದ ವರ್ಷ ನಿರಂತರವಾಗಿ ಒಂದು ವರ್ಷ ಹೋರಾಟ ನಡೆಸಿದ ಪರಿಣಾಮ ಸರ್ಕಾರ ಸಮಿತಿಯೊಂದನ್ನು ರಚಿಸಿ, ಯಾವ ರೀತಿಯಲ್ಲಿ ಪರಿಹಾರ ಕೊಡಬಹುದು ಎನ್ನುವುದರ ಬಗ್ಗೆ ನಿರ್ಧರಿಸಲು ಮುಂದಾಗಿದೆ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಪರಿಹಾರ ವಿತರಣೆಗೆ ಮುಂದಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.

ಬೀದರ್‌ ತಾಲ್ಲೂಕಿನ ರೇಕುಳಗಿ ಮೌಂಟ್‌ ಬೌದ್ಧ ವಿಹಾರ

ಶಾಸಕರು ಏನು ಹೇಳ್ತಾರೆ?

‘ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡು ನಿರಾಶ್ರಿತರಾದ ರೈತರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂಬುದು ನನ್ನ ಮೊದಲ ಆಗ್ರಹ ಸರ್ಕಾರಕ್ಕಿದೆ. ಅನೇಕ ವರ್ಷಗಳಿಂದ ಅವರು ಹೋರಾಟ ನಡೆಸುತ್ತಿದ್ದಾರೆ. ಅನೇಕ ಸಭೆಗಳು ಜರುಗಿವೆ. ಸರ್ಕಾರ ಇನ್ನೂ ತಡಮಾಡದೇ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು’ ಎನ್ನುತ್ತಾರೆ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ. ರೇಕುಳಗಿಯಿಂದ ಔರಾದ್‌ (ಎಸ್‌) ತಾಂಡಾದವರೆಗೆ ಸೇತುವೆ ನಿರ್ಮಿಸಬೇಕಿದ್ದು ಇದಕ್ಕೆ ಅನುದಾನ ಮೀಸಲಿಡಬೇಕು. ಇದರಿಂದ 20 ಕಿ.ಮೀ ಅಂತರ ಕಡಿಮೆಯಾಗುತ್ತದೆ. ಬೀದರ್‌–ಮನ್ನಳ್ಳಿ–ಭಂಗೂರ ರಸ್ತೆ ಅಭಿವೃದ್ಧಿ ಪಡಿಸಬೇಕಿದೆ. ಇದಕ್ಕಾಗಿ ₹130 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಏತ ನೀರಾವರಿ ಯೋಜನೆಗೆ ₹10 ಕೋಟಿ ಮಂಜೂರಾಗಿದೆ. ಇನ್ನೂ ₹50 ಕೋಟಿ ಬರಬೇಕಿದೆ. ನನ್ನ ಕ್ಷೇತ್ರದ 26 ಕೆರೆ ತುಂಬಿಸುವ ಯೋಜನೆ ಅತ್ಯಂತ ಮಹತ್ವದ್ದು. ಇದರಿಂದ ಅಂತರ್ಜಲ ಹೆಚ್ಚಾಗಿ ರೈತರ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗುತ್ತದೆ. ಅದೇ ರೀತಿ ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನಕ್ಕೆ ತಲಾ ₹10 ಕೋಟಿ ಕೇಳಿದ್ದೇನೆ. ಹೋದ ವರ್ಷ ಸಲ್ಲಿಸಿದ ಪ್ರಸ್ತಾವದಲ್ಲಿ ಶೇ 50ರಷ್ಟಕ್ಕೆ ಸರ್ಕಾರದಿಂದ ಸ್ಪಂದನೆ ಸಿಕ್ಕಿದೆ. ಈ ಸಲ ಹೆಚ್ಚಿನ ನಿರೀಕ್ಷೆ ಇದೆ ಎಂದರು.

ಜನ ಏನು ಕೇಳ್ತಾರೆ?

‘ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಹೆಚ್ಚಿನ ಹಳ್ಳಿಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಕೆಲಸ ಆದ್ಯತೆಯ ಮೇರೆಗೆ ಆಗಬೇಕು. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಪ್ರಥಮಾದ್ಯತೆ ಮೇಲೆ ಅಭಿವೃದ್ಧಿ ಪಡಿಸಿದರೆ ಜನರ ಸಂಚಾರ ಬಹಳ ಸುಗಮಗೊಳ್ಳುತ್ತದೆ. ಸಾಕಷ್ಟು ಸಮಯ ಉಳಿಯುತ್ತದೆ. ಗ್ರಾಮಗಳ ಅಭಿವೃದ್ಧಿಗೂ ವೇಗ ಸಿಗುತ್ತದೆ’ ಎನ್ನುತ್ತಾರೆ ಮನ್ನಾಏಖ್ಖೆಳ್ಳಿಯ ಬಸವರಾಜ ಕಮಠಾಣದ ಪ್ರಶಾಂತ್‌. ಬೀದರ್‌ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನ ಕಮಠಾಣ ಜೈನ ಮಂದಿರ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನದಂಥ ಪ್ರಮುಖ ಧಾರ್ಮಿಕ ಸ್ಥಳಗಳಿವೆ. ಬೌದ್ಧರ ಪವಿತ್ರ ಯಾತ್ರಾ ಸ್ಥಳ ರೇಕುಳಗಿ ಮೌಂಟ್‌ ಕೂಡ ಇದ್ದು ಇವುಗಳಿಗೆ ಹೆಚ್ಚಿನ ಅನುದಾನ ಮೀಸಲಿಟ್ಟು ಇನ್ನಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ. ಅದೇ ರೀತಿ ಅತ್ಯಮೂಲ್ಯ ಔಷಧಿ ವನ ಕರಕನಳ್ಳಿಯಲ್ಲಿದ್ದು ಅಲ್ಲೊಂದು ಸಂಶೋಧನಾ ಕೇಂದ್ರ ಸ್ಥಾಪಿಸಿ ಸಂರಕ್ಷಿಸುವ ಕೆಲಸವಾಗಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.