ADVERTISEMENT

ಬೀದರ್‌ | ಸೋಯಾ ಖರೀದಿ ಕೇಂದ್ರ ವಿಳಂಬ: ಖಾಸಗಿಯವರ ಮೊರೆ ಹೋಗುತ್ತಿರುವ ರೈತರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಅಕ್ಟೋಬರ್ 2025, 0:20 IST
Last Updated 26 ಅಕ್ಟೋಬರ್ 2025, 0:20 IST
ರಾಶಿ ಮಾಡಿ ಚೀಲಗಳಲ್ಲಿ ತುಂಬಿಟ್ಟಿರುವ ಸೋಯಾ ಅವರೆ
ರಾಶಿ ಮಾಡಿ ಚೀಲಗಳಲ್ಲಿ ತುಂಬಿಟ್ಟಿರುವ ಸೋಯಾ ಅವರೆ   

ಬೀದರ್‌: ಜಿಲ್ಲೆಯಲ್ಲಿ ಇದುವರೆಗೆ ಸೋಯಾ ಅವರೆ ಖರೀದಿ ಕೇಂದ್ರಗಳು ಆರಂಭಗೊಳ್ಳದ ಕಾರಣ ರೈತರು ಖಾಸಗಿಯವರ ಮೊರೆ ಹೋಗುತ್ತಿದ್ದಾರೆ. 

ತಿಂಗಳ ಹಿಂದೆಯೇ ಸೋಯಾ ಅವರೆ ರಾಶಿ ಆರಂಭಗೊಂಡಿದೆ. ಆದರೆ, ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗದೇ ರೈತರು ಕಡಿಮೆ ಬೆಲೆಗೆ ಮಾರುವ ಸ್ಥಿತಿ ಸೃಷ್ಟಿಯಾಗಿದೆ.

ಹೆಚ್ಚಿನ ರೈತರ ಬಳಿ ಬೆಳೆ ದಾಸ್ತಾನಿಗೆ ವ್ಯವಸ್ಥೆ ಇಲ್ಲ. ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅನಿವಾರ್ಯವಾಗಿ ಖಾಸಗಿಯವರ ಕದ ತಟ್ಟುತ್ತಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡು ಖಾಸಗಿಯವರು ಪ್ರತಿ ಕ್ವಿಂಟಲ್‌ ಸೋಯಾ ಕೇವಲ ₹ 4 ಸಾವಿರಕ್ಕೆ ಖರೀದಿಸುತ್ತಿದ್ದಾರೆ.

ADVERTISEMENT

ಸರ್ಕಾರ ಪ್ರತಿ ಕ್ವಿಂಟಲ್‌ ಸೋಯಾಗೆ ₹ 5,328 ಬೆಂಬಲ ಬೆಲೆ ನಿಗದಿಪಡಿಸಿದೆ. ಅಕ್ಟೋಬರ್‌ ಎರಡನೇ ವಾರದಿಂದ ಜಿಲ್ಲೆಯ 122 ಖರೀದಿ ಕೇಂದ್ರಗಳಲ್ಲಿ ಸೋಯಾ ನೋಂದಣಿ ಪ್ರಕ್ರಿಯೆ ಆರಂಭಿಸಿದೆ. ಡಿಸೆಂಬರ್‌ 16ರವರೆಗೆ ನೋಂದಣಿ ನಡೆಯಲಿದೆ. ಎಕರೆಗೆ ಐದು ಕ್ವಿಂಟಲ್‌ನಂತೆ ಗರಿಷ್ಠ 20 ಕ್ವಿಂಟಲ್‌ವರೆಗೆ ಖರೀದಿ, ‘ಎಫ್‌ಎಕ್ಯೂ’ ಅತ್ಯುತ್ತಮ ಗುಣಮಟ್ಟದ ಸೋಯಾ ಮಾತ್ರ ಖರೀದಿಸುವ ಷರತ್ತುಗಳನ್ನು ವಿಧಿಸಿದೆ. ಇದೇ ರೈತರಿಗೆ ತೊಡಕಾಗಿ ಪರಿಣಮಿಸಿದೆ. ಇಷ್ಟಾಗಿಯೂ ಸರ್ಕಾರ ಇನ್ನೂ ಖರೀದಿ ಕೇಂದ್ರದಲ್ಲಿ ಪ್ರಕ್ರಿಯೆ ಆರಂಭಿಸಿಲ್ಲ.

ರಾಜ್ಯದಲ್ಲೇ ಅತಿ ಹೆಚ್ಚು ಸೋಯಾ ಬೆಳೆಯುವ ಪ್ರದೇಶ ಎಂಬ ಹೆಗ್ಗಳಿಕೆ ಬೀದರ್‌ ಜಿಲ್ಲೆಗಿದೆ. ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2.21 ಲಕ್ಷ ಹೆಕ್ಟೇರ್‌ನಲ್ಲಿ ಸೋಯಾ ಬಿತ್ತನೆ ಮಾಡಲಾಗಿತ್ತು. ಅತಿವೃಷ್ಟಿಯಿಂದ 40 ಸಾವಿರ ಹೆಕ್ಟೇರ್‌ಗೂ ಅಧಿಕ ಸೋಯಾ ಹಾಳಾಗಿದೆ. ಮಿಕ್ಕುಳಿದ ಬೆಳೆಯ ಮೇಲೂ ಪರಿಣಾಮ ಉಂಟಾಗಿದೆ. ಜಿಲ್ಲೆಯ ಬಹುತೇಕ ಭಾಗಗಳ ಸೋಯಾ ಬೆಳೆಗಳ ಮೇಲೆ ಕಲೆಗಳಿವೆ. ಇದು ಎಫ್‌ಎಕ್ಯೂ ಗುಣಮಟ್ಟದ ಷರತ್ತಿಗೆ ತೊಡಕಾಗಿದೆ. ಇದನ್ನೆಲ್ಲ ಅರಿತುಕೊಂಡೇ ರೈತರು ಖಾಸಗಿಯವರ ಮೊರೆ ಹೋಗಿದ್ದಾರೆ.

ಅತಿವೃಷ್ಟಿಯಿಂದ ರೈತರು ಕಷ್ಟದಲ್ಲಿದ್ದು, ಹಾಕಿದ ಬಂಡವಾಳ ಕೈಸೇರಿದರೆ ಸಾಕು ಎಂಬ ಚಿಂತೆಯಲ್ಲಿದ್ದಾರೆ. ಹೀಗಾಗಿ, ಅನೇಕರು ಎಫ್‌ಎಕ್ಯೂ ಗುಣಮಟ್ಟದ ಷರತ್ತು ಕೈಬಿಟ್ಟು ಬೇಗ ಖರೀದಿ ಪ್ರಕ್ರಿಯೆ ಆರಂಭಿಸಿ, ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.

ಅತಿವೃಷ್ಟಿಯಿಂದ ಜಿಲ್ಲೆಯ ರೈತರು ನಲುಗಿದ್ದಾರೆ. ಸಂಕಷ್ಟದ ಸಮಯದಲ್ಲಿ ಷರತ್ತು ವಿಧಿಸದೆ ಬೆಂಬಲ ಬೆಲೆ ಯೋಜನೆಯಡಿ ಎಲ್ಲಾ ರೈತರ ಸೋಯಾ ಶೀಘ್ರ ಖರೀದಿಸಬೇಕು
ಸಿದ್ರಾಮಪ್ಪ ಆಣದೂರೆ ರೈತ ಮುಖಂಡ
ಅಕ್ಟೋಬರ್‌ ಎರಡನೇ ವಾರದಿಂದ ಖರೀದಿ ಕೇಂದ್ರದಲ್ಲಿ ನೋಂದಣಿ ಆರಂಭಗೊಂಡಿದ್ದು ಇದುವರೆಗೆ ಹತ್ತು ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ. ಶೀಘ್ರದಲ್ಲೇ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ
ಮಲ್ಲಿಕಾರ್ಜುನ ವ್ಯವಸ್ಥಾಪಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.