ADVERTISEMENT

ಬೀದರ್: ಮಹಿಳಾ ಆಯೋಗದ ಅಧ್ಯಕ್ಷರ ಕಾಲಿಗೆರಗಿ ಅಳಲು ತೋಡಿಕೊಂಡ ಬ್ರಿಮ್ಸ್ ಸಿಬ್ಬಂದಿ!

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 7:30 IST
Last Updated 6 ಮಾರ್ಚ್ 2025, 7:30 IST
<div class="paragraphs"><p>: ಮಹಿಳಾ ಆಯೋಗದ ಅಧ್ಯಕ್ಷರ ಕಾಲಿಗೆರಗಿ ಅಳಲು ತೋಡಿಕೊಂಡ ಬ್ರಿಮ್ಸ್ ಸಿಬ್ಬಂದಿ!</p></div>

: ಮಹಿಳಾ ಆಯೋಗದ ಅಧ್ಯಕ್ಷರ ಕಾಲಿಗೆರಗಿ ಅಳಲು ತೋಡಿಕೊಂಡ ಬ್ರಿಮ್ಸ್ ಸಿಬ್ಬಂದಿ!

   

ಪ್ರಜಾವಾಣಿ ಚಿತ್ರ-ಲೋಕೇಶ ವಿ. ಬಿರಾದಾರ

ADVERTISEMENT

ಬೀದರ್: 'ನನಗೆ ನ್ಯಾಯ ಕೊಡಿಸಿ, ಇಲ್ಲವಾದರೆ ನಾನು ಇಲ್ಲೇ ಸಾಯುವೆ'

ಹೀಗೆಂದು ಕಣ್ಣೀರು ಹಾಕಿದವರು‌ ಬ್ರಿಮ್ಸ್ 'ಡಿ' ಗ್ರುಪ್ ಸಿಬ್ಬಂದಿ ಲಕ್ಷ್ಮಿ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ನಗರದ ಬ್ರಿಮ್ಸ್ ಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಕಾಲಿಗೆರಗಿ ಗೋಳು ತೋಡಿಕೊಂಡರು.

ನಾನು ಕಳೆದ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆದರೆ, ಕಳೆದ ಒಂದು ವರ್ಷದಿಂದ ಬ್ರಿಮ್ಸ್ ಸೂಪರ್ ವೈಸರ್ ಪ್ರಕಾಶ ಮಾಳಗೆ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮಾತು ಕೇಳಬೇಕು ಇಲ್ಲವಾದರೆ ನೋಡಿಕೊಳ್ಳುತ್ತೇನೆ ಎಂದು ಹೆದರಿಸಿ ಹಾಜರಿ ಸಹ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಈ ಸಂಬಂಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಿಳಾ ಪೊಲೀಸ್ ಠಾಣೆ ಹಾಗೂ‌ ನ್ಯೂ ಟೌನ್ ಠಾಣೆಗೆ ದೂರು ಕೊಟ್ಟರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿಲ್ಲ. ಬ್ರಿಮ್ಸ್ ನಿರ್ದೇಶಕರಿಗೂ ತಿಳಿಸಿರುವೆ. ಆದರೆ, ಏನೂ ಮಾಡಿಲ್ಲ. ಹೀಗಾಗಿ ಕಿರುಕುಳ ನಿಂತಿಲ್ಲ ಎಂದು ಹೇಳಿಕೊಂಡರು.

ಲಕ್ಷ್ಮಿಯನ್ನು ಕೈಹಿಡಿದು ಮೇಲಕ್ಕೆತ್ತಿ ಸಂತೈಸಿದ ಡಾ. ನಾಗಲಕ್ಷ್ಮಿ ಚೌಧರಿ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಧೈರ್ಯದಿಂದ ಇರಬೇಕೆಂದು ಹೇಳಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಾಸ್ತವದಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಪಡೆದುಕೊಳ್ಳುವೆ. ಆನಂತರ ಸಂಬಂಧಿಸಿದವರಿಗೆ ಸೂಕ್ತ ಕ್ರಮಕ್ಕೆ ಸೂಚಿಸುವೆ ಎಂದರು.

ಫೆಬ್ರುವರಿಯಲ್ಲಿ ಬ್ರಿಮ್ಸ್ ಗೆ ಭೇಟಿ ಕೊಟ್ಟಾಗ ಸಾಕಷ್ಟು‌ ಅಸ್ವಚ್ಛತೆ ಇತ್ತು. ಈಗ ಸರಿಪಡಿಸಿದ್ದಾರೆ. ಬಾತ್ ರೂಂ, ಟಾಯ್ಲೆಟ್ ಸ್ವಚ್ಛಗೊಂಡಿವೆ. ನೀರಿನ ಟ್ಯಾಂಕ್ ಸ್ವಚ್ಚಗೊಳಿಸಿ ಮುಚ್ಚಳ ಹಾಕಿದ್ದಾರೆ. ಎಲ್ಲ ಕಡೆ ಬಣ್ಣ ಬಳಿದಿದ್ದಾರೆ. ಕಟ್ಟಡದ ಮೇಲ್ಭಾಗದಿಂದ ಸೋಲಾರ್ ಪ್ಯಾನಲ್ ಕಳುವಾಗಿದ್ದು, ಸೂಕ್ತ ಕ್ರಮಕ್ಕೆ ಬ್ರಿಮ್ಸ್ ನಿರ್ದೇಶಕರಿಗೆ ಸೂಚಿಸಿದ್ದೇನೆ. ಲೋಪವಾಗದಂತೆ ನೋಡಿಕೊಳ್ಳಲು ತಿಳಿಸಿದ್ದೇನೆ ಎಂದರು.

ಇದಕ್ಕೂ ಮುನ್ನ ನಾಗಲಕ್ಷ್ಮಿ ಅವರು ಬ್ರಿಮ್ಸ್ ನ ವಿವಿಧ ವಾರ್ಡ್, ಹೊರರೋಗಿಗಳ ವಿಭಾಗ, ಕಟ್ಟಡದ ನೀರಿನ ಟ್ಯಾಂಕರ್ ಪರಿಶೀಲಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ, ಡಿಎಚ್ ಒ ಡಾ. ಧ್ಯಾನೇಶ್ವರ ನೀರಗುಡಿ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.