ಬೀದರ್: ಬಸವಕಲ್ಯಾಣ ಜವಾಹರ್ ನವೋದಯ ವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಹೈದರಾಬಾದಿನ ‘ಸೆಂಟರ್ ಆಫ್ ಸೆಲ್ಯುಲಾರ್ ಅಂಡ್ ಮೈಕ್ರೋಬಯಾಲಜಿ ರಿಸರ್ಚ್ ಸೆಂಟರ್’ನಲ್ಲಿ ನಡೆಯಲಿರುವ ಕಾರ್ಯಾಗಾರಕ್ಕೆ ಒಂದು ದಿನದ ವಿಜ್ಞಾನಿಗಳಾಗಿ ಆಯ್ಕೆಯಾಗಿದ್ದಾರೆ.
ಎಂಟನೇ ತರಗತಿಯ ಆರುಷ್, ಒಂಬತ್ತನೇ ತರಗತಿಯ ಅಮೃತಾ ಎನ್.ಆರ್. ಹಾಗೂ ಅನುಷ್ಕಾ ವಿ.ಟಿ. ಆಯ್ಕೆಯಾದವರು. ಸಿಎಸ್‌ಆರ್‌ಐನಿಂದ ಇತ್ತೀಚೆಗೆ ಏರ್ಪಡಿಸಿದ್ದ ವಿಜ್ಞಾನ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದ್ದರಿಂದ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಸ್ಆರ್‌ಐ ತಿಳಿಸಿದೆ.
ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಮಕ್ಕಳನ್ನು ಗುರುತಿಸಿ, ಅವರಲ್ಲಿ ಅಡಗಿರುವ ವೈಜ್ಞಾನಿಕ ಹಾಗೂ ಸಂಶೋಧನಾ ಮನೋಭಾವ ಗುರುತಿಸಿ, ಪ್ರತಿಷ್ಠಿತ ವಿಜ್ಞಾನಿಗಳೊಂದಿಗೆ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮೇ 16ರಂದು ಹೈದರಾಬಾದ್‌ನಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳ ಸಾಧನೆಗೆ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯೆ ಭಾವನಾ ಋಷಿ, ಅಧ್ಯಾಪಕರಾದ ಮದನ್ ಲಾಮತುರೆ, ಧರ್ಮಣ್ಣ ಚಿಟ್ಟಾ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.