ADVERTISEMENT

ಬೀದರ್ ಉತ್ಸವ ಲೋಗೊ ಬಿಡುಗಡೆ

ಜನರ ಅಭಿರುಚಿಗೆ ಅನುಗುಣವಾದ ಉತ್ಸವ ಆಗಲಿ: ಕೇಂದ್ರ ಸಚಿವ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 14:44 IST
Last Updated 25 ನವೆಂಬರ್ 2022, 14:44 IST
ಬೀದರ್‌ನಲ್ಲಿ ಉತ್ಸವದ ಲೋಗೊ ಅನ್ನು ಕೇಂದ್ರ ಸಚಿವ ಭಗವಂತ ಖೂಬಾ ಬಿಡುಗಡೆ ಮಾಡಿದರು
ಬೀದರ್‌ನಲ್ಲಿ ಉತ್ಸವದ ಲೋಗೊ ಅನ್ನು ಕೇಂದ್ರ ಸಚಿವ ಭಗವಂತ ಖೂಬಾ ಬಿಡುಗಡೆ ಮಾಡಿದರು   

ಬೀದರ್: ‘ನಗರದಲ್ಲಿ ಜ.7 ರಿಂದ 9 ರವರೆಗೆ ನಡೆಯಲಿರುವ ಬೀದರ್ ಉತ್ಸವವು ಜನರ ಅಭಿರುಚಿಗೆ ಅನುಗುಣವಾದ ಉತ್ಸವ ಆಗಬೇಕು’ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೀದರ್ ಉತ್ಸವದ ಲೋಗೊ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜನರ ಬಹುದಿನಗಳ ಬೇಡಿಕೆಯಂತೆ ಬೀದರ್ ಉತ್ಸವ ಆಚರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಉತ್ಸವದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಿ, ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿ,‘ಜ. 7, 8 ಮತ್ತು 9 ರಂದು ಬೇರೆ ಬೇರೆ ವೇದಿಕೆಗಳಲ್ಲಿ ಇಂಥ ಉತ್ಸವಗಳು ನಡೆಯಲಿವೆ’ ಎಂದು ಹೇಳಿದರು.

ಮೆರವಣಿಗೆ ಉತ್ಸವ, ಮ್ಯಾರಥಾನ್ ಉತ್ಸವ, ಕ್ರೀಡಾ ಉತ್ಸವ, ಕುಸ್ತಿ ಉತ್ಸವ, ಕವಿಗೋಷ್ಠಿ ಉತ್ಸವ, ಸ್ಮರಣ ಸಂಚಿಕೆ ಉತ್ಸವ, ಪಶು ಮೇಳ ಉತ್ಸವ, ಉದ್ಯೋಗ ಮೇಳ ಉತ್ಸವ, ಗಡಿನಾಡು ಕನ್ನಡಿಗರ ಉತ್ಸವ, ಸ್ಥಳೀಯ ಕಲಾವಿದರ ಉತ್ಸವಗಳು ಬೀದರ್ ಉತ್ಸವದ ಭಾಗವಾಗಲಿವೆ ಎಂದು ತಿಳಿಸಿದರು.

ಸ್ಥಳೀಯ ಕಲಾವಿದರಿಗೆ ಮುಖ್ಯ ವೇದಿಕೆಯಲ್ಲಿ ಸಂಜೆ 5.30 ರಿಂದ 7.15 ರವರೆಗೆ ಕಲಾ ಪ್ರದರ್ಶನಕ್ಕೆ ಅವಕಾಶ ಕೊಡಲಾಗುವುದು. ಜ. 26 ರಂದು ನೆಹರೂ ಕ್ರೀಡಾಂಗಣದಲ್ಲಿ ಭಾರತ ಭಾಗ್ಯವಿಧಾತ ನಾಟಕ ಪ್ರದರ್ಶಿಸಲಾಗುವುದು ಎಂದು ಹೇಳಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.