
ಬೀದರ್: ಬಸವ ಸೇವಾ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವ24ನೇ ವಚನ ವಿಜಯೋತ್ಸವ ಕಾರ್ಯಕ್ರಮಕ್ಕೆ ನಗರದ ಬಸವಗಿರಿಯಲ್ಲಿ ಶುಕ್ರವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ ಅನುಭಾವ ನೀಡಿದ ಸಾಹಿತಿ ಬಸವರಾಜ ಸಬರದ, ‘ಸಮಾನತೆ ಶರಣತತ್ವದ ಜೀವಾಳ. ಸೌಹಾರ್ದತೆ ಲಿಂಗಾಯತ ಧರ್ಮದ ಮುಖ್ಯ ಗುರಿ. ಇವೆರಡರ ಬುನಾದಿ ಮೇಲೆ ಬಸವಾದಿ ಶರಣರು ಶರಣ ಧರ್ಮ ಕಟ್ಟಿದರು’ ಎಂದು ಹೇಳಿದರು.
ಸಮಾನತೆ, ಸೌಹಾರ್ದದ ಜತೆ ಮಾನವೀಯತೆ, ಅಂತಃಕರಣ, ಕಾಯಕ, ದಾಸೋಹ ಶರಣರ ಪ್ರಮುಖ ಜೀವನದ ಮೌಲ್ಯಗಳಾಗಿದ್ದವು. ಜಾಗತಿಕ ಕ್ರಾಂತಿಗಳಲ್ಲಿ ಬಸವಣ್ಣನವರ ಕ್ರಾಂತಿ ಬಹಳ ವಿಶಿಷ್ಟವಾದುದು. ಬಸವಣ್ಣ ಹಿಂಸೆ, ಜೀವ ವಧೆ ಬೆಂಬಲಿಸಲಿಲ್ಲ ಎಂದರು.
ಬೀದರ್ ಬಸವಾದಿ ಶರಣರು ಮೆಟ್ಟಿದ ನೆಲ. ಧರ್ಮ ಮತ್ತು ಕ್ರಾಂತಿ ಎರಡೂ ಒಂದೇ ಕಡೆ ನಡೆಯುವುದಿಲ್ಲ. ಎರಡೂ ಬೇರೆ ಬೇರೆ. ಧರ್ಮವನ್ನು ಕ್ರಾಂತಿಯಾಗಿ ಮಾಡಿದ ಜಗತ್ತಿನ ಏಕೈಕ ವ್ಯಕ್ತಿ ಬಸವಣ್ಣ. ಇದರಿಂದ ಶರಣರ ಹತ್ಯಾಕಾಂಡವೇ ನಡೆದು ಹೋಯಿತು. ಅನೇಕರ ತ್ಯಾಗ, ಬಲಿದಾನದಿಂದ ವಚನ ಸಾಹಿತ್ಯ ಉಳಿಯಿತು. ಬಸವಾದಿ ಶರಣರು ಅದಕ್ಕಾಗಿ ಜೀವ ತೆತ್ತರು. ಅದಕ್ಕೆ ಅವರು ಮರಣವೇ ಮಹಾನವಮಿ ಎಂದು ಕರೆದರು. ನಾವು ವಚನ ವಿಜಯೋತ್ಸವವಾಗಿ ಆಚರಿಸುತ್ತಿದ್ದೆವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ತೆಲಂಗಾಣದ ವಾರಂಗಲಿನ ಪಾಲ್ಕುರಿಕೆ ಸೋಮನಾಥ ಕಲಾ ಪೀಠದ ಅಧ್ಯಕ್ಷ ರಾಪುಲು ಸತ್ಯನಾರಾಯಣ ಮಾತನಾಡಿ, ಇಷ್ಟಲಿಂಗದ ಮೂಲಕ ಬಸವಣ್ಣನವರು ಭಕ್ತ ಮತ್ತು ದೇವರನ್ನು ಸಮೀಪಕ್ಕೆ ತಂದರು. ಬಸವಣ್ಣನವರ ಶ್ರೇಷ್ಠ ಸಂದೇಶಗಳನ್ನು ಪಾಲ್ಕುರಿಕೆ ಸೋಮನಾಥ ಅವರು ‘ಬಸವ ಪುರಾಣ’ದ ಮೂಲಕ ಜಗತ್ತಿಗೆ ಪ್ರಚುರಪಡಿಸಿದ್ದಾರೆ. ತೆಲುಗು ಭಾಷೆಯಲ್ಲಿ ಬಸವಣ್ಣನವರ ವಿಚಾರಗಳನ್ನು ಕವಿತೆ ರೂಪದಲ್ಲಿ ಬರೆದು, ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದ್ಧಾರೆ ಎಂದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಚಂದ್ರಕಾಂತ ಮಿರ್ಚೆ ಆಶಯ ನುಡಿ ಆಡಿದರು. ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ, ಆಂಧ್ರಪ್ರದೇಶದ ಬಪತಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕುರುಪತಿ ನೀಲಕಂಠೇಶ್ವರ ಪ್ರಸಾದ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಬಾಬು ವಾಲಿ, ಜಗನ್ನಾಥ ಹೆಬ್ಬಾಳೆ, ಕುಶಾಲ ಪಾಟೀಲ ಖಾಜಾಪುರ, ಶರಣಪ್ಪ ಮಿಠಾರೆ, ಸೋಮಶೇಖರ ಪಾಟೀಲ ಗಾದಗಿ, ಬಿ.ಜಿ.ಶೆಟಕಾರ್, ಸಿದ್ದಯ್ಯ ಕಾವಡಿಮಠ, ಶ್ರೀಕಾಂತ ಸ್ವಾಮಿ, ಪ್ರಕಾಶ ಟೊಣ್ಣೆ, ರಮೇಶ ಪಾಟೀಲ ಸೋಲಪುರ, ಭಾಲ್ಕಿ ತಹಸೀಲ್ದಾರ್ ಮಹೇಶ ಪಾಟೀಲ, ಮಹಾನಗರ ಪಾಲಿಕೆ ಸದಸ್ಯ ರಾಜು ಚಿಂತಾಮಣಿ, ವಿಜಯಶ್ರೀ ಸಬರದ, ಸುಭಾಷ ಹಮೀಲಪುರೆ, ರಾಜಕುಮಾರ ನಾಗೇಶ್ವರ, ಸೋಮನಾಥ ಅಮಲಾಪುರೆ, ಸುಭಾಷ ಮಡಿವಾಳ, ವಿಠ್ಠಲ ಕುಂಬಾರ, ಜಗನ್ನಾಥ ಜಮಾದಾರ್, ರಮೇಶ ಕಟ್ಟಿಮನಿ ಮತ್ತಿತರರು ಇದ್ದರು.
ವನಿತಾ ಗುಂಡಪ್ಪ ಬಳತೆ, ಡಾ. ದೇವಕಿ ಡಾ. ಅಶೋಕ ನಾಗೂರೆ ಗುರುಪೂಜೆ ನೇರವೇರಿಸಿದರು. ನೀಲಮ್ಮನ ಬಳಗದ ಶರಣೆಯರಿಂದ ವಚನ ವಿಜಯೋತ್ಸವದ ಸಮೂಹ ಗಾಯನ ನಡೆಯಿತು. ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ಕಲಾವಿದರು ಆಕರ್ಷಕ ವಚನ ನೃತ್ಯ ನಡೆಸಿಕೊಟ್ಟರು. ರಾಜಮತಿ ಗಂಗು ನಿರೂಪಿಸಿದರು. ಕರಣ ಪಾಟೀಲ ವಂದಿಸಿದರು.
‘ಬಸವ ಪುರಾಣ’ ರಚಿಸಿದ ಪಾಲ್ಕುರಿಕೆ ಸೋಮನಾಥ ಅವರು ಮಾಗಡಿ ತಾಲ್ಲೂಕಿನ ಕಲ್ಯಾ ಗ್ರಾಮದಲ್ಲಿ ನಿಧನರಾಗಿದ್ದಾರೆ. ಆ ಸ್ಥಳವನ್ನು ಕರ್ನಾಟಕ ಸರ್ಕಾರ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು– ರಾಪುಲು ಸತ್ಯನಾರಾಯಣ, ಅಧ್ಯಕ್ಷ ತೆಲಂಗಾಣದ ವಾರಂಗಲಿನ ಪಾಲ್ಕುರಿಕೆ ಸೋಮನಾಥ ಕಲಾ ಪೀಠ
ರಾಜ್ಯ ಸರ್ಕಾರವು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದೆ. ಒಂದರಿಂದ 12ನೇ ತರಗತಿ ವರೆಗಿನ ಪಠ್ಯಗಳಲ್ಲಿ ಬಸವಾದಿ ಶರಣರ ವಿಚಾರಗಳನ್ನು ಸೇರಿಸಿದರೆ ಹೆಚ್ಚು ಪ್ರಚಾರವಾಗುತ್ತದೆ– ಬಸವಲಿಂಗ ಪಟ್ಟದ್ದೇವರು, ಅಧ್ಯಕ್ಷ ಬಸವಕಲ್ಯಾಣದ ಅನುಭವ ಮಂಟಪ
‘ಪಂಚ ಜಗದ್ಗುರುಗಳಿಗೆ ಜ್ಞಾನೋದಯ’
‘ಪಂಚ ಜಗದ್ಗುರುಗಳು ಬಸವಣ್ಣನವರ ಇತಿಹಾಸ ತಿರುಚಲು ಪ್ರಯತ್ನಿಸಿದರು. ಸುಳ್ಳು ಸೃಷ್ಟಿಸಿದರು. ಬಸವಣ್ಣನವರನ್ನು ನಿರ್ಲಕ್ಷಿಸಿದರು. ಆದರೆ ಈಗ ಅವರಿಗೆ ಜ್ಞಾನೋದಯವಾಗಿದೆ’ ಎಂದು ಸಾಹಿತಿ ಬಸವರಾಜ ಸಬರದ ಹೇಳಿದರು.
ಪಂಚ ಜಗದ್ಗುರುಗಳು ಬಸವಣ್ಣನವರನ್ನು ವಿರೋಧಿಸುತ್ತಿದ್ದರು. ಅವರ ಭಾವಚಿತ್ರ ಗೌರವಿಸುತ್ತಿರಲಿಲ್ಲ. ಇಂದು ಅವರೇ ಪೇಟೆಂಟ್ ತೆಗೆದುಕೊಂಡಿದ್ದಾರೆ. ಇವರ ವಿರೋಧದ ಕಾರಣಕ್ಕಾಗಿಯೇ ಜಾಗತಿಕ ಲಿಂಗಾಯತ ಮಹಾಸಭಾ ಹುಟ್ಟಿಕೊಂಡಿತು. ಇನ್ನೂ ಕೆಲವು ವರ್ಷಗಳು ಗತಿಸಿದರೆ ಅವರು ಸುಧಾರಣೆಯಾಗುತ್ತಾರೆ ಎಂದರು.
‘ಜಗದ್ಗುರು ಅಂದರೆ ಜಡ’
‘ಜಗದ್ಗುರು ಅಂದರೆ ಜಡ ಹೆಸರು. ಯಾವ ಜಗದ್ಗುರುಗಳಿಗೂ ಈಗ ಕಿಮ್ಮತ್ತಿಲ್ಲ. ಬಸವಣ್ಣನ ತತ್ವ ಹೇಳುವವರಿಗೆ ನಾನು ಸಾಷ್ಟಾಂಗ ನಮಸ್ಕಾರ ಮಾಡುವೆ. ಯಾರು ಬೇಕಾದರೂ ಪಲ್ಲಕ್ಕಿ ಹೊರಲಿ’ ಎಂದು ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.
ಎಲ್ಲ ಮಠಾಧೀಶರು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಳ್ಳಬೇಕು. ಮಠಕ್ಕೆ ಶಕ್ತಿ ಬರಬೇಕಾದರೆ ಈ ಕೆಲಸ ಮಾಡಬೇಕು. ಬಸವಣ್ಣ ಇಷ್ಟಲಿಂಗದ ಜನಕ. ವಚನ ಸಾಹಿತ್ಯ ಧರ್ಮಗ್ರಂಥ. ಲಿಂಗಾಯತ ಸ್ವತಂತ್ರ ಧರ್ಮ. ನಾವು ಯಾವ ಧರ್ಮದ ವಿರೋಧಿಗಳಲ್ಲ. ಲಿಂಗಾಯತರೆನಿಸಿಕೊಂಡವರು ಇಷ್ಟಲಿಂಗ ಬಿಟ್ಟು ಬೇರೆ ಪೂಜೆ ಮಾಡಬಾರದು. ಬೇರೆಯವರು ಏನು ಬೇಕಾದರೂ ಮಾಡಿಕೊಳ್ಳಲಿ. ಅದಕ್ಕೆ ನಮ್ಮ ವಿರೋಧವಿಲ್ಲ ಎಂದರು.
‘ಇಂದು ಮುಂದು ಎಂದೆಂದೂ ವಚನ ಸಾಹಿತ್ಯ’
‘ಅಂದಿನಿಂದ ಇಂದಿನ ವರೆಗೆ ಪುರೋಹಿತಷಾಹಿಗಳು ವಚನ ಸಾಹಿತ್ಯವನ್ನು ಹಾಳುಗೆಡವಲು ನಿರಂತರವಾಗಿ ಯತ್ನಿಸುತ್ತಿದ್ದಾರೆ. ಆದರೆ ಬಸವಾದಿ ಪರಂಪರೆಯವರು ಶರಣತತ್ವವನ್ನು ಜೀವನದಲ್ಲಿ ಆಚರಣೆಗೆ ತಂದರೆ ಯಾರೂ ಹಾಳುಗೆಡವಲು ಸಾಧ್ಯವಿಲ್ಲ. ಇಂದು ಮುಂದು ಎಂದೆಂದಿಗೂ ಮನುಷ್ಯ ಜನಾಂಗ ಇರುವವರೆಗೆ ವಚನ ಸಾಹಿತ್ಯ ಇರುತ್ತದೆ’ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಬಸವ ಸೇವಾ ಪ್ರತಿಷ್ಠಾನದ ಗಂಗಾಂಬಿಕಾ ಅಕ್ಕ ಹೇಳಿದರು.
ಬಸವಾದಿ ಶರಣರ ಆಶಯಗಳು ನಮ್ಮ ದೇಶದ ಸಂವಿಧಾನದ ಮೂಲಕ ಈಡೇರುತ್ತಿವೆ. 12ನೇ ಶತಮಾನದಲ್ಲಿ ವಚನ ಸಾಹಿತ್ಯಕ್ಕೆ ಬೆಂಕಿ ಇಡಲಾಯಿತು. ಶರಣರ ವಧೆ ಮಾಡಲಾಯಿತು. ಒಂದು ಕಡೆ ಬಸವಣ್ಣ ಇನ್ನೊಂದು ಕಡೆ ಚನ್ನಬಸವಣ್ಣ ಲಿಂಗೈಕ್ಯರಾದರು. ಆದರೆ ಅಕ್ಕನಾಗಮ್ಮ ಹಾಗೂ ಇತರೆ ಶರಣರು ಎದೆಗುಂದದೆ ವಚನ ಸಾಹಿತ್ಯ ಸಂರಕ್ಷಿಸಿ ಪ್ರಚಾರ ಕೈಗೊಂಡರು. ಇವರ ತ್ಯಾಗದಿಂದ ವಚನ ಸಾಹಿತ್ಯ ನಾವೆಲ್ಲ ಓದುವಂತಾಗಿದೆ. ಅವರ ಸ್ಮರಣೆಗಾಗಿಯೇ ಈ ವಚನ ವಿಜಯೋತ್ಸವ ಎಂದು ಹೇಳಿದರು.
ಅಕ್ಕ ಭಾವುಕ...
ಇಬ್ಬರು ಹೆಣ್ಣು ಮಕ್ಕಳು ಕೂಡಿಕೊಂಡು ಕಟ್ಟಿರುವ ಸಂಸ್ಥೆ ಇಷ್ಟೊಂದು ಎತ್ತರಕ್ಕೆ ಬೆಳೆದಿದೆ ಎಂದು ಹೇಳುತ್ತ ಗಂಗಾಂಬಿಕಾ ಅಕ್ಕ ಭಾವುಕರಾಗಿ ಕಣ್ಣೀರಾದರು. ವಚನ ಸಾಹಿತ್ಯ ಉಳಿಸಬೇಕು. ಜನಮನಕ್ಕೆ ತಲುಪಿಸಬೇಕೆಂಬ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿಸಲಾಗಿತ್ತು. ಸತತ 24 ವರ್ಷಗಳಿಂದ ವಚನ ವಿಜಯೋತ್ಸವ ನಡೆಸಿಕೊಂಡು ಬರಲಾಗುತ್ತಿದ್ದು ವಚನ ವಿಜಯೋತ್ಸವ ಇದು ನಾಡಹಬ್ಬ. ಈ ಕಾರ್ಯಕ್ರಮದ ಮೂಲಕ ವಚನಗಳ ಬೀಜ ಬಿತ್ತುವ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.