
ಬೀದರ್: ಝರಿಗಳ ನೆಲವೆಂದೇ ಗುರುತಿಸಿಕೊಂಡಿರುವ ಬೀದರ್ ಜಿಲ್ಲೆ ಅಪರೂಪದ ವನ್ಯಜೀವಿಗಳ ನೆಲೆಬೀಡು ಹೌದು.
ಸಮುದ್ರ ಮಟ್ಟದಿಂದ ಎತ್ತರದ ಪ್ರದೇಶದಲ್ಲಿರುವುದರಿಂದ ಬೀದರ್ ಜಿಲ್ಲೆ ಕೆಲವು ಅಪರೂಪದ ವನ್ಯಜೀವಿಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇದರಲ್ಲಿ ಅಳಿವಿನಂಚಿನ ಪ್ರಭೇದದ ಕೆಲ ಕಾಡು ಜೀವಿಗಳೂ ಸೇರಿರುವುದು ವಿಶೇಷ.
ಇಡೀ ಜಗತ್ತಿನಲ್ಲೇ 150ರಿಂದ 200 ಜನಸಂಖ್ಯೆಯಷ್ಟೇ ಹೊಂದಿರುವ ಅಳಿವಿನಂಚಿನಲ್ಲಿರುವ ಕರಿನವಿಲು (ಲೆಸರ್ ಫ್ಲೋರಿಕನ್) ಕೂಡ ಬೀದರ್‌ನಲ್ಲಿರುವುದು ದೃಢಪಟ್ಟಿದೆ. ಇಷ್ಟೇ ಅಲ್ಲ, ಇವುಗಳ ಸಂತಾನೋತ್ಪತಿಯ ತಾಣವೂ ಹೌದು ಎಂಬುದನ್ನು ಇತ್ತೀಚಿನ ‘ಭಾರತೀಯ ವನ್ಯಜೀವಿ ಸಂಸ್ಥೆ’ (ಡಬ್ಲ್ಯೂಐಐ) ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.
ರಾಜಸ್ತಾನ, ಆಂಧ್ರ ಪ್ರದೇಶ, ಗುಜರಾತ್ ಹಾಗೂ ಕರ್ನಾಟಕದ ಬೀದರ್‌ನಲ್ಲಷ್ಟೇ ಕರಿನವಿಲುಗಳು ಕಾಣಸಿಗುತ್ತವೆ. ಇವುಗಳ ಸಂತತಿ ರಕ್ಷಿಸಿ, ಇವುಗಳ ಸಂತಾನ ಹೆಚ್ಚಳಕ್ಕೆ ಪೂರಕವಾದ ವಾತಾವರಣ ಕಲ್ಪಿಸಲು ಈ ಹಿಂದೆ ರಾಜ್ಯ ಸರ್ಕಾರ ಅನುದಾನ ಕೂಡಾ ಮೀಸಲಿಟ್ಟಿತ್ತು. ನಂತರ ಆ ಕಡೆಗೆ ಲಕ್ಷ್ಯ ಹರಿಸಿಲ್ಲ ಎಂಬ ಆರೋಪಗಳಿವೆ. ಇದರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಪರಿಸರವಾದಿಗಳು.
‘ಜಂಗಲ್ ಕ್ಯಾಟ್’
ಇದು ಬಿಟ್ಟರೆ ‘ಚಿಂಕಾರ’ (ಇಂಡಿಯನ್ ಡೆಜಲ್) ಕೂಡ ಇಲ್ಲಿವೆ. ಬೀದರ್ ಹೊರತುಪಡಿಸಿದರೆ ಇವುಗಳನ್ನು ರಾಜ್ಯದ ತುಮಕೂರು, ಬಾಗಲಕೋಟೆ, ಬೆಳಗಾವಿಯಲ್ಲಿ ನೋಡಬಹುದು. ನೋಡಲು ಥೇಟ್ ಜಿಂಕೆಗಳಂತೆ ಕಾಣಿಸುತ್ತವೆ. ಇದು ಬಿಟ್ಟರೆ ತೋಳ (ಇಂಡಿಯನ್ ಗ್ರೇ ವೂಲ್ಫ್), ನೀಲ್‌ಗಾಯ್, ಚೌಸಿಂಗಾ (ಫೋರ್ ಹಾರ್ನ್ಡ್ ಆ್ಯಂಟಿಲೋಪ್), ‘ಸೀವಿಯೆಟ್ ಕ್ಯಾಟ್’, ಕಾಡು ಹಂದಿಗಳು, ನರಿಗಳಿವೆ.
ಇನ್ನು, ಕೃಷ್ಣಮೃಗಗಳು, ಜಿಂಕೆಗಳ ನೆಚ್ಚಿನ ತಾಣವೂ ಹೌದು. ಬಯಲಿನಲ್ಲಿ ಒಟ್ಟಿಗೆ ನೂರಾರು ಸಂಖ್ಯೆಯ ಕೃಷ್ಣಮೃಗಗಳು, ಜಿಂಕೆಗಳನ್ನು ಬೀದರ್ ಸುತ್ತಮುತ್ತ ಕಣ್ತುಂಬಿಕೊಳ್ಳಬಹುದು. ಇನ್ನು, ‘ಡೆಮೊಜಿಲ್ ಕ್ರೇನ್’, ಬೆಳ್ಳಕ್ಕಿ, ಗುಬ್ಬಚ್ಚಿ ಸೇರಿದಂತೆ ಹಲವು ಜಾತಿಯ ಪಕ್ಷಿಗಳಿಗೆ ನೆಲೆಬೀಡಾಗಿದೆ.
ಬೀದರ್ ಜಿಲ್ಲೆ ಅಪರೂಪದ ವನ್ಯಜೀವಿಗಳ ತಾಣ. ಇವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಶ್ರಮಿಸುತ್ತಿದೆ. ನಾಗರಿಕರು ಕೂಡ ಅವುಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಹರಿಸುವ ಅಗತ್ಯವಿದೆ.ವಿವೇಕಾನಂದ ಬಿ. ನ್ಯಾಚುರಲಿಸ್ಟ್