ಬೀದರ್: ‘ಮಹಿಳೆಯರು ತಮಗೆ ಸಿಕ್ಕ ಅಧಿಕಾರವನ್ನು ಪತಿ, ಮಕ್ಕಳು, ಸಂಬಂಧಿಕರಿಗೆ ವಹಿಸಬಾರದು. ಮಹಿಳೆಯರೇ ಆ ಅಧಿಕಾರವನ್ನು ಚಲಾಯಿಸಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘ, ರಾಣಿ ಕಿತ್ತೂರ ಚನ್ನಮ್ಮ ಮಹಿಳಾ ಮಂಡಳ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯಿಂದ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಹಿತಿ ಪ್ರೇಮಾ ಸಿರ್ಸೆ ಅವರ ‘ಚುಕ್ಕಿಗಳು’ ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಗ್ರಾಮ ಪಂಚಾಯಿತಿಯಲ್ಲಿ ಶೇ 50ರಷ್ಟು ಮೀಸಲಾತಿ ಸಿಕ್ಕರೂ ಮಹಿಳೆಯರು ಅದರ ಪ್ರಯೋಜನ ಪಡೆಯುತ್ತಿಲ್ಲ. ತಮಗೆ ಸಿಕ್ಕ ಅಧಿಕಾರ ಬೇರೆಯವರಿಗೆ ವಹಿಸಿ ಅದರಿಂದ ವಂಚಿತರಾಗುತ್ತಿದ್ದಾರೆ. ಇದು ದುಃಖದ ಸಂಗತಿ’ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾ ಎಸ್. ಪಾಟೀಲ ಮಾತನಾಡಿ, ‘ಮಹಿಳೆಯರು ಧೈರ್ಯ ಬೆಳೆಸಿಕೊಂಡು ಮುನ್ನಡೆಯಬೇಕು. ಸ್ವತಂತ್ರ ನಿರ್ಧಾರ ಕೈಗೊಳ್ಳಬೇಕು’ ಎಂದು ಹೇಳಿದರು.
ಪ್ರಾಧ್ಯಾಪಕಿ ಮಹಾದೇವಿ ಹೆಬ್ಬಾಳೆ, ರಾಣಿ ಚನ್ನಮ್ಮ ಮಹಿಳಾ ಮಂಡಳ ಅಧ್ಯಕ್ಷೆ ಡಾ. ಗುರಮ್ಮ ಸಿದ್ದಾರೆಡ್ಡಿ, ಅಕ್ಕ ಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸಾವಿತ್ರಿ ಹೆಬ್ಬಾಳೆ, ತಿಂಗಳ ಪುಸ್ತಕ ಪರಿಚಯ ಸಮಿತಿ ಅಧ್ಯಕ್ಷೆ ಸುನೀತಾ ಕೂಡ್ಲಿಕರ್, ಜಾನಪದ ಮಹಿಳಾ ಘಟಕದ ಮಲ್ಲಮ್ಮ ಸಂತಾಜಿ, ಭುವನೇಶ್ವರಿ ಹಿರೇಮಠ, ಪುಣ್ಯವತಿ ವಿಸಾಜಿ, ಮಲ್ಲಮ್ಮ ಹೆಬ್ಬಾಳೆ ಹಾಜರಿದ್ದರು.
ಅರ್ಪಿತಾ ಅಶೋಕ ಹೆಬ್ಬಾಳೆ ಅವರ ಸುಗ್ಗಿ ನೃತ್ಯ ಗಮನ ಸೆಳೆಯಿತು. ಲಕ್ಷ್ಮೀಬಾಯಿ ಪಾಟೀಲ, ಶೋಭಾ ಔರಾದೆ ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿ, ಪುಣ್ಯವತಿ ವಿಸಾಜಿ, ಶಿವಲೀಲಾ ಖಂಡೆ ಅವರನ್ನು ಸಮಾಜ ಕ್ಷೇತ್ರ, ಮೀನಾಕ್ಷಿ ಪಾಟೀಲ ಅವರನ್ನು ಉತ್ತಮ ಸೋಸೆ, ರಶ್ಮಿ ಶರ್ಮಾ ಅವರನ್ನು ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಅಕ್ಕ ಮಹಾದೇವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.