ADVERTISEMENT

ಸಮೀಕ್ಷೆ ಬಳಿಕ ಬಸವಕಲ್ಯಾಣಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ: ಲಕ್ಷ್ಮಣ ಸವದಿ

ಬಸವಕಲ್ಯಾಣ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 3:06 IST
Last Updated 21 ನವೆಂಬರ್ 2020, 3:06 IST
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿದರು
ಬಸವಕಲ್ಯಾಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿದರು   

ಬಸವಕಲ್ಯಾಣ: `ಆಂತರಿಕ ಸಮೀಕ್ಷೆಯ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿ ಯಾರೇ ಆದರೂ ಇಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇಲ್ಲಿನ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

`ಪ್ರಧಾನಿ ಮೋದಿಯವರ ಕಾರ್ಯವೈಖರಿ ಮೆಚ್ಚಿ ಮತದಾರರು ಬಿಜೆಪಿಗೆ ಬೆಂಬಲಿಸುತ್ತಿದ್ದಾರೆ. ಈ ಕಾರಣ ಅಭ್ಯರ್ಥಿ ಇಂಥವರೇ ಆಗಬೇಕೆಂದೆನಿಲ್ಲ. ಪಕ್ಷ ನಿಷ್ಠೆ ಹೊಂದಿರುವ ಸಾಮಾನ್ಯ ಕಾರ್ಯಕರ್ತನಿದ್ದರೂ ನಡೆಯುತ್ತದೆ. ಆದರೂ, ನಾನು 25 ದಿನ ಇಲ್ಲಿಯೇ ಮನೆ ಮಾಡಿಕೊಂಡಿದ್ದು ಅಭ್ಯರ್ಥಿ ಆಯ್ಕೆ ಮತ್ತು ಪಕ್ಷದ ಗೆಲುವಿಗೆ ಸತತವಾಗಿ ಪ್ರಯತ್ನಿಸುತ್ತೇನೆ. ಇಲ್ಲಿ ಮೊದಲು ಕಾಂಗ್ರೆಸ್ ಶಾಸಕರಿದ್ದರಾದರೂ ಈ ಸಲ ಬಿಜೆಪಿ ಧ್ವಜ ಹಾರುವುದು ನಿಶ್ಚಿತ. ಟಿಕೆಟ್‌ಗಾಗಿ ಗುಂಪುಗಾರಿಕೆ ನಡೆಸುವುದನ್ನು ನಿಲ್ಲಿಸಬೇಕು. ಎಲ್ಲ ಆಕಾಂಕ್ಷಿಗಳು ಒಂದೆಡೆ ಬರಬೇಕು. ಆಗ ಮಾತ್ರ ಅವರಿಂದ ಟಿಕೆಟ್ ಗಾಗಿ ಅರ್ಜಿ ಪಡೆಯಲಾಗುತ್ತದೆ. ಪ್ರತ್ಯೇಕವಾಗಿ ಶಕ್ತಿ ಪ್ರದರ್ಶನ ನಡೆಸುವುದಕ್ಕೆ ಆಸ್ಪದ ನೀಡುವುದಿಲ್ಲ'
ಎಂದರು.

ADVERTISEMENT

ಸಂಸದ ಭಗವಂತ ಖೂಬಾ ಮಾತನಾಡಿ, `ಇಲ್ಲಿ ವ್ಯಕ್ತಿ ಅಲ್ಲ, ಬಿಜೆಪಿ ಗೆಲ್ಲಲಿದೆ. ಆದ್ದರಿಂದ ಎಲ್ಲ ಪದಾಧಿಕಾರಿಗಳು ಒಗ್ಗಟ್ಟಿನಿಂದ ಇರಬೇಕು' ಎಂದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, `ನಾನೂ ಕಳೆದ ಸಲ ಪಕ್ಷದಿಂದ ಇಲ್ಲಿ ಸ್ಪರ್ಧೆ ಮಾಡಿ ಸೋತಿದ್ದೇನೆ. ಈ ಸಲ ಸ್ಥಳೀಯ ಆಕಾಂಕ್ಷಿಗಳೆಲ್ಲ ಒಂದಾಗಿದ್ದೇವೆ. ಟಿಕೆಟ್ ಯಾರಿಗೆ ದೊರೆತರೂ ಶ್ರಮಿಸುತ್ತೇವೆ’ ಎಂದರು.

ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಸಂಜಯ ಪಟವಾರಿ, ಈಶ್ವರಸಿಂಗ್ ಠಾಕೂರ, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ, ಶಾಂತಕುಮಾರ ಹಿರೇನಾಗಾಂವ ಮಾತನಾಡಿದರು. ಶಾಸಕರಾದ ದತ್ತಾತ್ತೇಯ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ ಉಪಸ್ಥಿತರಿದ್ದರು.

ಖಡ್ಗ ನೀಡಿದ ಗುಂಡುರೆಡ್ಡಿ

ಟಿಕೆಟ್ ಆಕಾಂಕ್ಷಿಯಾದ ಮುಖಂಡ ಗುಂಡುರೆಡ್ಡಿ ಅವರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಮೇಲೆ ಜೆಸಿಬಿ ವಾಹನಗಳಿಂದ ಪುಷ್ಪವೃಷ್ಟಿಗೈದು ಸನ್ಮಾನಿಸಿ ಬೆಳ್ಳಿ ಖಡ್ಗ ನೀಡಿದರು.

ಸಂಸದ ಭಗವಂತ ಖೂಬಾ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಸೂರ್ಯಕಾಂತ ನಾಗಮಾರಪಳ್ಳಿ, ಸಂಜಯ ಪಟವಾರಿ, ಪ್ರದೀಪ ವಾತಡೆ, ಅನಿಲ ಭೂಸಾರೆ, ಸುಧೀರ ಕಾಡಾದಿ, ವಿಜಯಕುಮಾರ ಮಂಠಾಳೆ, ಉಮೇಶ ಬಿರಬಿಟ್ಟೆ ಉಪಸ್ಥಿತರಿದ್ದರು.

ಕಿರೀಟ ತೊಡಿಸಿದ ಶರಣು

ನಗರದ ಸಸ್ತಾಪುರ ರಸ್ತೆಯಲ್ಲಿ ಮಿನಿವಿಧಾನಸೌಧದ ಹತ್ತಿರದಲ್ಲಿ ಮುಖಂಡ ಶರಣು ಸಲಗರ ಅವರು ಅಪಾರ ಬೆಂಬಲಿಗರೊಂದಿಗೆ ಪ್ರತ್ಯೇಕ ಸಭೆ ಆಯೋಜಿಸಿ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಿ ಬೆಳ್ಳಿ ಕಿರೀಟ ತೊಡಿಸಿದರು. ಸಂಸದ ಭಗವಂತ ಖೂಬಾ, ರಾಜಕುಮಾರ ಶಿರಗಾಪುರ, ರತಿಕಾಂತ ಶಿರ್ಶಿವಾಡಿ ಮುಂತಾದವರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.