ADVERTISEMENT

ಔರಾದ್ | CM ಕಾಟಾಚಾರದ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ: ಬಿಜೆಪಿ ಮುಖಂಡರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 5:08 IST
Last Updated 12 ಅಕ್ಟೋಬರ್ 2025, 5:08 IST
ಬೀದರ್ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಮುಖಂಡರು ಔರಾದ್ ತಾಲ್ಲೂಕಿನ ಕೌಠಾದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಿದರು
ಬೀದರ್ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಮುಖಂಡರು ಔರಾದ್ ತಾಲ್ಲೂಕಿನ ಕೌಠಾದಲ್ಲಿ ಬೆಳೆ ಹಾನಿ ವೀಕ್ಷಣೆ ಮಾಡಿದರು   

ಔರಾದ್: ‘ಬೀದರ್ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾನಿಯಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಹೊಲಗಳಿಗೆ ಭೇಟಿ ನೀಡುವ ಬದಲು ಕಾಟಾಚಾರದ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ’ ಎಂದು ಬಿಜೆಪಿ ಮುಖಂಡರು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಶಾಸಕ ಪ್ರಭು ಚವಾಣ್, ಶರಣು ಸಲಗಾರ, ಸಿದ್ದು ಪಾಟೀಲ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ರಘುನಾಥರಾವ ಮಲ್ಕಾಪೂರ, ಈಶ್ವರಸಿಂಗ್ ಠಾಕೂರ್, ಬಾಬುವಾಲಿ, ವಸಂತ ವಕೀಲ ಅವರು ತಾಲ್ಲೂಕಿನ ಕೌಠಾ, ಸಂತಪೂರ, ರಕ್ಷಾಳ ಗ್ರಾಮಗಳ ಬೆಳೆ ಹಾನಿ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

‘ಭಾರಿ ಮಳೆ ಹಾಗೂ ಮಾಂಜ್ರಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ನದಿ ಪಾತ್ರದ ಹತ್ತಾರು ಗ್ರಾಮಗಳ ರೈತರ ಹೊಲದಲ್ಲಿನ ಬೆಳೆಗಳು ಮಣ್ಣು ಸಹಿತ ಕೊಚ್ಚಿಕೊಂಡು ಹೋಗಿದೆ. ಮುಂಗಾರು ಬೆಳೆ ಎಲ್ಲಿಯೂ ಇಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಯಾದರೂ ಕೇವಲ ಎಕರೆಗೆ ಐದಾರು ಸಾವಿರ ಕೊಟ್ಟರೆ ಅದೂ ಯಾತಕ್ಕೂ ಸಾಲದು. ಹೀಗಾಗಿ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರ ಕೊಡಬೇಕು. ಇಲ್ಲವಾದಲ್ಲಿ ಬಿಜೆಪಿ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಶಾಸಕ ಪ್ರಾಭು ಚವಾಣ್ ಮಾತನಾಡಿ, ‘ಭಾರಿ ಮಳೆಯಿಂದ ಔರಾದ್ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಹೆಚ್ಚಿನ ಹಾನಿಯಾಗಿದೆ. ಸರ್ಕಾರ ರೈತರ ನೆರವಿಗೆ ಬಾರದೆ ಇದ್ದರೆ ಖಂಡಿತ ಶಾಪ ತಟ್ಟುತ್ತದೆ’ ಎಂದು ಹೇಳಿದರು.

ಇದೇ ವೇಳೆ ಕೌಠಾ ಹಾಗೂ ರಕ್ಷಾಳ ರೈತರು ಬಿಜೆಪಿ ಮುಖಂಡರಿಗೆ ಆಗಿರುವ ಬೆಳೆ ಹಾನಿ ಮಾಹಿತಿ ನೀಡಿದರು. ಮುಖಂಡರು ಕೆಲ ಕಡೆ ಟ್ರ‍್ಯಾಕ್ಟರ್ ಮೂಲಕ ಹೋಗಿ ಬೆಳೆ ಹಾನಿ ವೀಕ್ಷಣೆ ಮಾಡಿದರು. ರಾಜಶೇಖರ ನಾಗಮೂರ್ತಿ, ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ, ಪೀರಪ್ಪ ಔರಾದೆ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಶಶಿಧರ ಹೊಸಳ್ಳಿ, ಖಂಡೋಬಾ ಕಂಗಟೆ, ಶಿವಕುಮಾರ ಪಾಂಚಾಳ, ಶ್ರೀಮಂತ ಪಾಟೀಲ ಮತ್ತಿತರರು ಹಾಜರಿದ್ದರು.

‘ಮುಖ್ಯಮಂತ್ರಿ ಬಂದು ಹೋದರೂ ರೈತರಿಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ’

ಹುಮನಾಬಾದ್: ತಾಲ್ಲೂಕಿನ ಕನಕಟ್ ಗ್ರಾಮದ ರೈತರೊಬ್ಬರ ಹೊಲಕ್ಕೆ ಜಿಲ್ಲೆಯ ಬಿಜೆಪಿ ಶಾಸಕರ ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿತು.

ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಾತನಾಡಿ, ‘ಅತಿವೃಷ್ಟಿಯಿಂದಾಗಿ ತಾಲ್ಲೂಕಿನ ರೈತರು ಮತ್ತು ಬಡವರು ಸಂಪೂರ್ಣ ಬೆಳೆ ಮನೆಗಳು ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕೃಷಿ ಸಚಿವರು ಈ ರೈತರ ನೆರವಿಗೆ ಬರುತ್ತಿಲ್ಲ. ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಪರಿಹಾರ ಘೋಷಣೆ ಮಾಡಿದ್ದಾರೆ ಆದರೆ ಇಲ್ಲಿಯವರೆಗೆ ನಯಾ ಪೈಸೆ ರೈತರಿಗೆ ಬಂದಿಲ್ಲ. ₹ 17 ಸಾವಿರ ಪರಿಹಾರ ಏನು ಆಗುವುದಿಲ್ಲ. ಹೀಗಾಗಿ ಪ್ರತಿ ಎಕರೆಗೆ ₹ 25 ಸಾವಿರ ಪರಿಹಾರ ನೀಡಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಶಾಸಕರಾದ ಪ್ರಭು ಚವಾಣ್, ಶರಣು ಸಲಗರ, ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಈಶ್ವರ ಸಿಂಗ್ ಠಾಕೂರ, ಬಿಜೆಪಿ ಮಂಡಲ ಅಧ್ಯಕ್ಷ ಅನಿಲ ಪಸರ್ಗಿ, ರವಿ ಹೊಸಳ್ಳಿ, ರಮೇಶ ಕಲ್ಲೂರ, ಗಜೇಂದ್ರ ಕನಕಟಕರ, ಗೋಪಾಲಕೃಷ್ಣ ಮೋಹಳೆ, ನಾಗಭೂಷಣ ಸಂಗಮ, ಬಲಭೀಮ್ ಬಿರಾದರ, ಶಿವು ಮಾಶಟ್ಟಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.