ADVERTISEMENT

ಬೀದರ್‌: ದ್ವೇಷ ಭಾಷಣ ತಡೆ ಮಸೂದೆ ಹಿಂಪಡೆಯಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 12:59 IST
Last Updated 24 ಡಿಸೆಂಬರ್ 2025, 12:59 IST
   

ಬೀದರ್‌: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ತಹಶೀಲ್ದಾರ್‌ ಕಚೇರಿ ಎದುರು ಬುಧವಾರ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ತಹಶೀಲ್ದಾರ್‌ ಕಚೇರಿ ವರೆಗೆ ರ್‍ಯಾಲಿ ನಡೆಸಿ, ಆನಂತರ ತಹಶೀಲ್ದಾರ್‌ ಕಚೇರಿ ಎದುರು ಜಮಾಯಿಸಿ ಘೋಷಣೆ ಕೂಗಿದರು. ಬಳಿಕ ಮನವಿ ಪತ್ರ ಸಲ್ಲಿಸಿದರು.

ರಾಜ್ಯ ಸರ್ಕಾರ ತಂದಿರುವ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ತಂತ್ರವಾಗಿದೆ. ಸಂವಿಧಾನ ನೀಡಿದ ಸ್ವಾತಂತ್ರ್ಯವನ್ನು ಕಾಂಗ್ರೆಸ್‌ ಸರ್ಕಾರ ಕಿತ್ತುಕೊಳ್ಳಲು ಈ ಮಾರ್ಗ ಅನುಸರಿಸುತ್ತಿದೆ. ಪ್ರಜಾಪ್ರಭುತ್ವದ ಕತ್ತು ಹಿಚುಕುವ ಕೆಲಸ ಇದು ಎಂದು ಆರೋಪ ಮಾಡಿದರು.

ADVERTISEMENT

ಸರ್ಕಾರದ ಜನವಿರೋಧಿ ನೀತಿಗಳನ್ನು ಟೀಕಿಸುವುದು, ಚರ್ಚಿಸುವುದು ದ್ವೇಷ ಎಂದು ಪರಿಗಣಿಸುವ ಅಪಾಯ ಭವಿಷ್ಯದಲ್ಲಿ ಎದುರಾಗಬಹುದು. ವಿರೋಧ ಪಕ್ಷದವರಷ್ಟೇ ಅಲ್ಲ; ಜನಸಾಮಾನ್ಯರನ್ನೂ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸುವ ಅಪಾಯ ಹೆಚ್ಚಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ಬೀದರ್‌ ಗ್ರಾಮೀಣ ಅಧ್ಯಕ್ಷ ದೀಪಕ್‌ ಗಾದಗೆ, ಬೀದರ್‌ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಗುರುನಾಥ ರಾಜಗೀರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ,ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಉಲ್ಲಾಸಿನಿ ಮುದಾಳೆ, ಶಕುಂತಲಾ ಬೆಲ್ದಾಳೆ, ಗಣೇಶ ವಿ. ಭೋಸ್ಲೆ, ಸುನೀಲ್‌ ಗೌಳಿ, ಸೌಜನ್ಯ ಕೋಳಿ, ಗುಂಡಪ್ಪ ಬುಧೇರಾ, ಸಂತೋಷ್‌ ರೆಡ್ಡಿ, ವೀರು ದಿಗ್ವಾಲ್‌, ವೆಂಕಟರಾವ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.