ADVERTISEMENT

ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ನಿಷ್ಠರಾಗಿರಲಿ: ಶಾಸಕ ಡಾ.ಶೈಲೇಂದ್ರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 16:25 IST
Last Updated 6 ಏಪ್ರಿಲ್ 2024, 16:25 IST
ಬೀದರ್‌ನಲ್ಲಿ ಶನಿವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷರನ್ನು ಸನ್ಮಾನಿಸಲಾಯಿತು
ಬೀದರ್‌ನಲ್ಲಿ ಶನಿವಾರ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷರನ್ನು ಸನ್ಮಾನಿಸಲಾಯಿತು   

ಬೀದರ್‌: ‘ಬಿಜೆಪಿ ಪಕ್ಷದಿಂದಲೇ ನಮಗೆಲ್ಲ ಸಮಾಜದಲ್ಲಿ ಗೌರವ. ಹಾಗಾಗಿ ಎಲ್ಲ ಕಾರ್ಯಕರ್ತರು ಪಕ್ಷಕ್ಕೆ ನಿಷ್ಠರಾಗಿರಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿಯೂ ಆದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ ತಿಳಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪಕ್ಷದ 44ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ದೇಶದ ಸೇವೆಗೆ ಅವಕಾಶ ಕೊಟ್ಟಿದೆ. ಸರ್ವರ ಹಿತದ ಜೊತೆಗೆ ದೇಶದ ಸಮಗ್ರ ವಿಕಾಸಕ್ಕೆ ಪಕ್ಷ ದುಡಿಯುತ್ತಿದೆ. ಅನೇಕರ ಅವಿರತ ಶ್ರಮ, ಹಲವರ ತ್ಯಾಗ, ಬಲಿದಾನ, ಸಂಘರ್ಷದ ಫಲವಾಗಿ ಇಂದು ಪಕ್ಷ ಹೆಮ್ಮರವಾಗಿ ಬೆಳೆದಿದೆ. ತನ್ನದೇ ಸಿದ್ಧಾಂತ, ವಿಚಾರಧಾರೆಗಳ ಮೇಲೆ ಗಟ್ಟಿಯಾಗಿ ನಿಂತಿದೆ.  ಕಾರ್ಯಕರ್ತರಿಗೆ, ಸಾಮಾನ್ಯರಿಗೂ ದೊಡ್ಡ ಅವಕಾಶ ಕೊಡುವ ಏಕೈಕ ಪಕ್ಷವಿದು. ಕಾರ್ಯಕರ್ತರ ಶ್ರಮಕ್ಕೆ ಇಲ್ಲಿ ಬೆಲೆಯಿದೆ ಎಂದು ಹೇಳಿದರು.

ಬಿಜೆಪಿ ನಮಗೆ ಸ್ಥಾನ ಹಾಗೂ ಮಾನ ನೀಡಿದೆ. ಸಮಾಜದಲ್ಲಿ ಹೆಸರು ಹಾಗೂ ಗೌರವ ಕೊಟ್ಟಿದೆ. ನಾವು ಸಹ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿ ಪಕ್ಷ ಬೆಳೆಸಬೇಕು. ಉತ್ತಮ ಹುದ್ದೆಗೇರಿದರೆ, ಅಧಿಕಾರ ಸಿಕ್ಕರೆ ಎಲ್ಲರಿಗೂ ಬೆಳೆಸಬೇಕು. ಪಕ್ಷ ಸಂಘಟನೆ ಬಲಪಡಿಸಬೇಕು ಎಂದು ತಿಳಿಸಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, 1980 ಏಪ್ರಿಲ್ 6ರಂದು ಬಿಜೆಪಿ ಹುಟ್ಟುಕೊಂಡಿತು. ಅಟಲ್ ಬಿಹಾರಿ ವಾಪೇಯಿ ಬಿಜೆಪಿ ಮೊದಲ ಅಧ್ಯಕ್ಷರಾಗಿ ಹಾಗೂ ಇವರ ಜೊತೆಗೆ ಲಾಲಕೃಷ್ಣ ಅಡ್ವಾಣಿ ಸೇರಿದಂತೆ ಇತರರು ಪಕ್ಷಕ್ಕೆ ಭದ್ರ ಬುನಾದಿ ಹಾಕಿದರು. ಜನಸಂಘದಿಂದ ನಮ್ಮ ದಾರಿ ಆರಂಭವಾಯಿತು ಎಂದು ನೆನಪಿಸಿದರು.

ಪಕ್ಷದ ವಿಭಾಗ ಸಂಘಟನಾ ಸಹ ಕಾರ್ಯದರ್ಶಿ ಸೂರ್ಯಕಾಂತ ಢೋಣೆ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಮಾಜಿ ಜಿಲ್ಲಾಧ್ಯಕ್ಷರಾದ ಸುಭಾಷ ಕಲ್ಲೂರ್, ಪ್ರಕಾಶ ಖಂಡ್ರೆ, ಬಾಬುರಾವ ಮದಕಟ್ಟಿ, ನಂದಕಿಶೋರ ವರ್ಮಾ, ಶಿವರಾಜ ಗಂದಗೆ, ಶಿವಾನಂದ ಮಂಠಾಳಕರ್ ದಂಪತಿಯನ್ನು ಸನ್ಮಾನಿಸಲಾಯಿತು. ದಿವಂಗತ ನಾರಾಯಣರಾವ್‌ ಮನ್ನಳ್ಳಿ ಅವರ ಧರ್ಮಪತ್ನಿ, ದಿವಂಗತ ಅಶೋಕ ಗುತ್ತೇದಾರ್ ಅವರ ಧರ್ಮಪತ್ನಿ ಸನ್ಮಾನ ಸ್ವೀಕರಿಸಿದರು. ಪ್ರಮುಖರಾದ ಜಯಕುಮಾರ ಕಾಂಗೆ, ರಾಜಶೇಖರ ಮೂರ್ತಿ, ಕಿರಣ ಪಾಟೀಲ,  ಪೀರಪ್ಪ ಯರನಳ್ಳೆ, ಮಾಧವ ಹಸೂರೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.