ADVERTISEMENT

ಬೀದರ್‌: ಕರಿನವಿಲು ಸಮೀಕ್ಷೆ ಆರಂಭ

ವಿಭಿನ್ನ ಪ್ರಭೇದ, ಭಿನ್ನ ಆಹಾರ ಕ್ರಮ: ಅರಣ್ಯ ಇಲಾಖೆಯಿಂದ ದಾಖಲೀಕರಣ

ಚಂದ್ರಕಾಂತ ಮಸಾನಿ
Published 22 ಜುಲೈ 2022, 5:19 IST
Last Updated 22 ಜುಲೈ 2022, 5:19 IST
ಬೀದರ್ ತಾಲ್ಲೂಕಿನ ಹುಲ್ಲುಗಾವಲು ಪ್ರದೇಶಕ್ಕೆ ಹೊಂದಿಕೊಂಡಿರುವ ಹೊಲಗಳಲ್ಲಿ ಕರಿ ನವಿಲು ಶೋಧ ನಡೆಸಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸದಸ್ಯರು
ಬೀದರ್ ತಾಲ್ಲೂಕಿನ ಹುಲ್ಲುಗಾವಲು ಪ್ರದೇಶಕ್ಕೆ ಹೊಂದಿಕೊಂಡಿರುವ ಹೊಲಗಳಲ್ಲಿ ಕರಿ ನವಿಲು ಶೋಧ ನಡೆಸಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸದಸ್ಯರು   

ಬೀದರ್‌: ದಕ್ಷಿಣ ಭಾರತದಲ್ಲಿ ಹಲವು ವರ್ಷಗಳ ನಂತರ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬೀದರ್ ತಾಲ್ಲೂಕಿನಲ್ಲಿ ಕರಿ ನವಿಲು ಕಾಣಿಸಿಕೊಂಡ ನಂತರ ಅವುಗಳ ಜೀವನ ಕ್ರಮ ಅರಿಯಲು ಹಾಗೂ ಸಂಖ್ಯೆ ಪತ್ತೆ ಮಾಡಲು ಅರಣ್ಯ ಇಲಾಖೆಯು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್‌ಎಚ್‌ಎಸ್) ನೆರವಿನೊಂದಿಗೆ ಜಿಲ್ಲೆಯಲ್ಲಿ ಎರಡನೇ ಹಂತದ ಸಮೀಕ್ಷೆ ಆರಂಭಿಸಿದೆ.

ಕರಿ ನವಿಲು ಸ್ಥಳೀಯವಾಗಿ ಕಾಣಸಿಗುವ ನವಿಲುಗಳ ಪ್ರಭೇದಕ್ಕೆ ಸೇರಿದ್ದಲ್ಲ. ಇದೊಂದು ಪ್ರತ್ಯೇಕ ಪ್ರಭೇದ. ಇದರ ವಾಸಸ್ಥಳ ಹಾಗೂ ಸೇವಿಸುವ ಆಹಾರವೂ ಭಿನ್ನವಾಗಿದೆ. ಇಂಗ್ಲಿಷ್‌ನಲ್ಲಿ ಇದರ ವೈಜ್ಞಾನಿಕ ಹೆಸರು ಲೆಸ್ಸರ್‌ ಫ್ಲೋರಿಕ್ಯಾನ್ (Lesser Florican) ಎಂದಿದೆ. ಕನ್ನಡದಲ್ಲಿ ಪ್ರತ್ಯೇಕ ಹೆಸರು ಇಲ್ಲ. ಮುಂಗಾರು ಅವಧಿಯಲ್ಲಿ ವಂಶಾಭಿವೃದ್ಧಿಯಲ್ಲಿ ತೊಡಗುತ್ತವೆ. ಮಿಲನ ಪೂರ್ವದಲ್ಲಿ ಗಂಡು ಹಾಗೂ ಹೆಣ್ಣು ನವಿಲುಗಳು ಸ್ವಚ್ಛಂದವಾಗಿ ಹಾರಾಡುತ್ತವೆ.

ಬೆದೆಗೆ ಬಂದಾಗ ಗಂಡು ಪಕ್ಷಿಯ ತಲೆ ಹಾಗೂ ಕುತ್ತಿಗೆ ಭಾಗ ಹೆಚ್ಚು ಕಪ್ಪಾಗಿ ಮಿನುಗುತ್ತದೆ. ಕೆಲ ದಿನಗಳ ನಂತರ ಹೆಣ್ಣು ಪಕ್ಷಿ ಹುಲ್ಲುಗಳ ಮಧ್ಯೆ ನೆಲದ ಮೇಲೆ ಮೊಟ್ಟೆ ಇಡುತ್ತವೆ.

ADVERTISEMENT

ಕರಿ ನವಿಲುಗಳು ನೆಲಮಟ್ಟದಿಂದ ಎರಡು ಮೀಟರ್‌ ಮಾತ್ರ ಹಾರಾಡುತ್ತದೆ. ಹೆಸರು, ಉದ್ದು ಬೆಳೆಗಳಲ್ಲಿ ಹಾಗೂ ಹುಲ್ಲುಗಾವಲಿನಲ್ಲಿನ ಹಸಿರು ಕೀಟಗಳನ್ನು ಸೇವಿಸುತ್ತವೆ. ಬೆಳೆಗೆ ಹಾನಿ ಉಂಟು ಮಾಡುವುದಿಲ್ಲ. ಕೀಟಗಳೇ ಇವುಗಳ ಮುಖ್ಯ ಆಹಾರ. ಜೀವಿತಾವಧಿ ಮೂರು ವರ್ಷಗಳು ಮಾತ್ರ. ಹಿಂದೆ ಕರಿ ನವಿಲು ಕಂಡು ಬಂದ ಪ್ರದೇಶದಲ್ಲೇ ಬೆಳಗಿನ ಅವಧಿಯಲ್ಲಿ ಶೋಧ ನಡೆಸಿದ್ದೇವೆ ಎಂದು ಸಮೀಕ್ಷೆ ತಂಡದ ತಜ್ಞರು ‘ಪ್ರಜಾವಾಣಿ’ಗೆ ತಿಳಿಸಿದರು.ಬಿಎನ್‌ಎಚ್‌ಎಸ್ ತಂಡದಲ್ಲಿರುವ 18 ಸದಸ್ಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಆಗಸ್ಟ್‌ 8ರ ವರೆಗೆ ಆರು ಕಿ.ಮೀ ವ್ಯಾಪ್ತಿಯಲ್ಲಿ ಪಸರಿಸಿಕೊಂಡು ಹುಲ್ಲುಗಾವಲು ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಿದ್ದಾರೆ.

‘ನಿತ್ಯ ಬೆಳಿಗ್ಗೆ 6 ಗಂಟೆ ವೇಳೆಗೆ ಹುಲ್ಲುಗಾವಲು ಪ್ರದೇಶಕ್ಕೆ ಹೋಗಿ ಸೂಕ್ಷ್ಮವಾಗಿ ವೀಕ್ಷಣೆ ಮಾಡುತ್ತಿದ್ದೇವೆ. ಕರಿ ನವಿಲು ಬಹಳ ಸಂವೇದನಾಶೀಲ ಹಕ್ಕಿ. ಸ್ವಲ್ಪ ಶಬ್ದ ಬಂದರೂ ಓಡಿ ಹೋಗುತ್ತದೆ. ಸೂಕ್ಷ್ಮರೀತಿಯಲ್ಲಿ ಸಮೀಕ್ಷೆ ಕಾರ್ಯ ನಡೆದಿದೆ’ ಎಂದು ಪಕ್ಷಿ ವೀಕ್ಷಕರಾದ ವಿವೇಕ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.