ADVERTISEMENT

ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ನುಗ್ಗಿದ ಕೃಷ್ಣಮೃಗ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 15:16 IST
Last Updated 16 ಡಿಸೆಂಬರ್ 2022, 15:16 IST
ಬಸವಕಲ್ಯಾಣದಲ್ಲಿ ಗುರುವಾರ ಕೃಷ್ಣಮೃಗವನ್ನು ಅರಣ್ಯಕ್ಕೆ ಬಿಟ್ಟು ಬರುವುದಕ್ಕಾಗಿ ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು. ಡಾ.ಸದಾನಂದ ಪಾಟೀಲ ಮತ್ತು ಅರಣ್ಯ ಇಲಾಖೆಯವರು ಇದ್ದಾರೆ
ಬಸವಕಲ್ಯಾಣದಲ್ಲಿ ಗುರುವಾರ ಕೃಷ್ಣಮೃಗವನ್ನು ಅರಣ್ಯಕ್ಕೆ ಬಿಟ್ಟು ಬರುವುದಕ್ಕಾಗಿ ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು. ಡಾ.ಸದಾನಂದ ಪಾಟೀಲ ಮತ್ತು ಅರಣ್ಯ ಇಲಾಖೆಯವರು ಇದ್ದಾರೆ   

ಬಸವಕಲ್ಯಾಣ: ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಕೃಷ್ಣಮೃಗವೊಂದು ನಗರದ ಆಸ್ಪತ್ರೆಯೊಂದಕ್ಕೆ ನುಗ್ಗಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ಕೃಷ್ಣಮೃಗ ನಗರದ ಶಿವಪುರ ರಸ್ತೆಯಲ್ಲಿನ ಪಾಟೀಲ ಆಸ್ಪತ್ರೆಯ ಬಾಗಿಲು ತೆರೆದಿದ್ದರಿಂದ ರಾತ್ರಿ ನೇರವಾಗಿ ಆಸ್ಪತ್ರೆಯ ಒಳಕ್ಕೆ ನುಗ್ಗಿದೆ. ಬಳಿಕ ಅಲ್ಲಿಂದ ನಾಯಿಗಳು ಕಾಲ್ಕಿತ್ತಿವೆ.

ಏಕಾಏಕಿ ಒಳಗೆ ಬಂದ ಕೃಷ್ಣಮೃಗವನ್ನು ಆಸ್ಪತ್ರೆ ಸಿಬ್ಬಂದಿ ರಕ್ಷಿಸಿ ಆಹಾರ, ನೀರು ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಹಾಗೂ ಪಶು ಆಸ್ಪತ್ರೆಯವರಿಗೆ ವಿಷಯ ತಿಳಿಸಿದ್ದಾರೆ.

ADVERTISEMENT

ಗುರುವಾರ ಬೆಳಿಗ್ಗೆ ಆಸ್ಪತ್ರೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ನಾಯಿ ಕಚ್ಚಿ ಗಾಯಗೊಂಡಿದ್ದ ಕೃಷ್ಣಮೃಗಕ್ಕೆ ಚಿಕಿತ್ಸೆ ನೀಡಿ ವಾಹನದಲ್ಲಿ ತೆಗೆದುಕೊಂಡು ಹೋಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಆಸ್ಪತ್ರೆ ವೈದ್ಯ ಡಾ.ಸದಾನಂದ ಪಾಟೀಲ, ಸಹಾಯಕ ಆರಣ್ಯಾಧಿಕಾರಿ ಸೈಯದ್ ಮುರ್ತುಜಾ ಖಾದ್ರಿ ಅವರು ಕೃಷ್ಣಮೃಗಕ್ಕೆ ಚಿಕಿತ್ಸೆ ನೀಡಿ ಸಂರಕ್ಷಿಸಿದ್ದಾರೆ.

`ಬಸವಕಲ್ಯಾಣಕ್ಕೆ ಸಮೀಪವೇ ಇರುವ ಚುಳಕಿನಾಲಾ ಜಲಾಶಯದ ಸಮೀಪದ ಹೊಲಗಳಲ್ಲಿ ನೂರಾರು ಕೃಷ್ಣಮೃಗಗಳಿವೆ. ಅವು ಆಗಾಗ ಗ್ರಾಮಗಳಿಗೆ ಹಾಗೂ ರಸ್ತೆಗಳಿಗೆ ಬಂದು ಗಾಯಗೊಳ್ಳುತ್ತಿವೆ. ಆಸ್ಪತ್ರೆಗೆ ನುಗ್ಗಿದ್ದ ಕೃಷ್ಣಮೃಗ ಅಷ್ಟೇನು ಅಪಾಯದ ಸ್ಥಿತಿಯಲ್ಲಿ ಇರಲಿಲ್ಲ. ಆದರೂ, ಚಿಕಿತ್ಸೆ ನೀಡಿ ಅರಣ್ಯಕ್ಕೆ ಸಾಗಿಸಲಾಯಿತು’ ಎಂದು ಸಹಾಯಕ ಅರಣ್ಯಾಧಿಕಾರಿ ಸೈಯದ್ ಮುರ್ತುಜಾ ಖಾದ್ರಿ ತಿಳಿಸಿದ್ದಾರೆ.

ಹುಲಸೂರಿನಲ್ಲಿ ನಾಯಿಗಳ ದಾಳಿಗೆ ಕೃಷ್ಣಮೃಗ ಸಾವು: ಪಟ್ಟಣದ ಹೊರವಲಯದಲ್ಲಿ ಇರುವ ಎಂಕೆಕೆಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹತ್ತಿರ ರಾಜ್ಯ ಹೆದ್ದಾರಿ ಬಳಿ ನಾಯಿಗಳ ದಾಳಿಗೆ ಕೃಷ್ಣಮೃಗ ಸಾವನ್ನಪ್ಪಿದೆ. ಅರಣ್ಯ ವಲಯ ಅಧಿಕಾರಿ ಸಂತೋಷ ಯಾಚೆ ಘಟನಾ ಸ್ಥಳಕ್ಕೆ ತೆರಳಿ ಕೃಷ್ಣಮೃಗದ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.