ADVERTISEMENT

400ಕ್ಕೂ ಅಧಿಕ ಜನರಿಂದ ರಕ್ತದಾನ

ಭಾಲ್ಕಿಯ ಬಿಕೆಐಟಿಯಲ್ಲಿ ಪುನೀತ್ ಪುಣ್ಯಸ್ಮರಣೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 4:05 IST
Last Updated 30 ಅಕ್ಟೋಬರ್ 2022, 4:05 IST
ಭಾಲ್ಕಿಯ ಬಿಕೆಐಟಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು, ಹಾವಗಿಲಿಂಗೇಶ್ವರ ಶಿವಾಚಾರ್ಯರು, ಮಹಾಲಿಂಗ ಸ್ವಾಮೀಜಿ, ಯುವ ಮುಖಂಡ ಸಾಗರ ಖಂಡ್ರೆ, ಡಾ.ಗೀತಾ ಈಶ್ವರ ಖಂಡ್ರೆ ಇದ್ದರು
ಭಾಲ್ಕಿಯ ಬಿಕೆಐಟಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಡಾ.ಬಸವಲಿಂಗ ಪಟ್ಟದ್ದೇವರು, ಹಾವಗಿಲಿಂಗೇಶ್ವರ ಶಿವಾಚಾರ್ಯರು, ಮಹಾಲಿಂಗ ಸ್ವಾಮೀಜಿ, ಯುವ ಮುಖಂಡ ಸಾಗರ ಖಂಡ್ರೆ, ಡಾ.ಗೀತಾ ಈಶ್ವರ ಖಂಡ್ರೆ ಇದ್ದರು   

ಭಾಲ್ಕಿ: ಇಲ್ಲಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ(ಬಿಕೆಐಟಿ)ದಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ರಕ್ತದಾನ ಶಿಬಿರ ನಡೆಯಿತು.

ಶಾಂತಿವರ್ಧಕ ಶಿಕ್ಷಣ ಸಂಸ್ಥೆ ವತಿಯಿಂದ ಶನಿವಾರ ಏರ್ಪಿಡಿಸಿದ ರಕ್ತದಾನ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು, ಯುವಕ, ಯುವತಿಯರು, ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಪುನೀತ್ ಅವರ ಪ್ರಥಮ ಪುಣ್ಯ ಸ್ಮರಣೆಗೆ ಸಾಕ್ಷಿಯಾದರು.

ಯುವ ಮುಖಂಡ ಸಾಗರ ಖಂಡ್ರೆ ನೇತೃತ್ವದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿದ್ದು, ದಿನವಿಡೀ ಸರತಿ ಸಾಲಿನಲ್ಲಿ ನಿಂತು 400ಕ್ಕೂ ಅಧಿಕ ಮಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ.

ADVERTISEMENT

ಸಾಗರ ಖಂಡ್ರೆ ಮಾತನಾಡಿ, ದಿವಂಗತ ಪುನೀತ್ ರಾಜ್‌ಕುಮಾರ್ ಈ ನಾಡು ಕಂಡ ಶ್ರೇಷ್ಠ ನಟ. ಅವರು ಕೇವಲ ನಟರಾಗಿ ಉಳಿಯದೇ ಅನೇಕ ಸಾಮಾಜಿಕ ಕಾರ್ಯಗಳು ಕೈಗೊಳ್ಳುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಅಂಥವರ ನೆನಪಿಗಾಗಿ ರಕ್ತದಾನ ಶಿಬಿರ ಏರ್ಪಡಿಸಿದ್ದೇವೆ ಎಂದರು.

ಡಿವೈಎಸ್ಪಿ ಪೃಥ್ವಿಕ್ ಶಂಕರ್, ಹಲಬರ್ಗಾ ರಾಚೋಟೇಶ್ವರ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಸಮಾಜದ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.

ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಕ್ಷೇತ್ರದ ಜನತೆಗೆ ಹಿಂದಿನಿಂದಲೂ ಖಂಡ್ರೆ ಪರಿವಾರ ಒಳಿತನ್ನು ಮಾಡುತ್ತಾ ಬರುತ್ತಿದೆ. ಇದೀಗ ರಕ್ತದಾನ ಶಿಬಿರ ಆಯೋಜಿಸಿರುವುದು ಇದೊಂದು ಪುಣ್ಯದ ಕೆಲಸ ಎಂದರು.

ಮಹಾಲಿಂಗ ಸ್ವಾಮೀಜಿ, ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ, ಡಾ.ರಾಜೇಂದ್ರ ಜಾಧವ, ಡಾ.ಜ್ಞಾನೇಶ್ವರ ನಿರಗೂಡೆ ಇದ್ದರು. ಬಸವರಾಜ ಕಾವಡಿ ನಿರೂಪಿಸಿದರು. ಪ್ರಾಚಾರ್ಯ ಡಾ.ನಾಗಶೆಟೆಪ್ಪ ಬಿರಾದಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.