
ಬೀದರ್: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿರುವ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಬಿ.ಎಂ. ಅಮರವಾಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕಾರಿ ಮಂಡಳಿ ಸದಸ್ಯರಾದ ಎಂ.ಎಸ್. ಮನೋಹರ ಅವರು ಬಿ.ಎಂ.ಅಮರವಾಡಿಯವರ ಹೆಸರು ಪ್ರಸ್ತಾಪಿಸಿದಾಗ ಜಿಲ್ಲಾ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಮತ್ತು ವಿಜಯಕುಮಾರ ಸೋನಾರೆ ಅವರು ಅನುಮೋದಿಸಿದರು. ಡಿ.30ರಂದು ನಗರದ ಡಾ. ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿ.ಎಂ.ಅಮರವಾಡಿ ಎಂ.ಎ., ಎಂ.ಎಸ್ಸಿ (ಬಿ.ಇಡಿ) ಪದವೀಧರರಾಗಿದ್ದು, ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. 2009ರಲ್ಲಿ ರಾಜ್ಯ ಮಟ್ಟದ ದಾಸ ಸಾಹಿತ್ಯ ಪರಿಷತ್ತು ಬೀದರ್‌ನಲ್ಲಿ ಸ್ಥಾಪಿಸಿ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಘಟಕಗಳನ್ನು ರಚಿಸಿ, ದಾಸ ಸಾಹಿತ್ಯದ ಪ್ರಸಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. 2013, 2014ರಲ್ಲಿ ಕರ್ನಾಟಕ ರಾಜ್ಯ ಮಟ್ಟದ ದಾಸ ಸಾಹಿತ್ಯ ಸಮ್ಮೇಳನ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅನೇಕ ಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಉಪಾಧ್ಯಕ್ಷರಾದ ದಾನಿ ಬಾಬುರಾವ, ಗೌರೆ ವಿಜಯಕುಮಾರ, ವಿಜಯಕುಮಾರ ಸೋನಾರೆ, ಶಿವಕುಮಾರ ಚನ್ನಶೆಟ್ಟಿ, ಶ್ರೀಕಾಂತ ಬಿರಾದಾರ, ಸುನೀಲ ಭಾವಿಕಟ್ಟಿ, ಪರಮೇಶ್ವರ ಬಿರಾದಾರ, ಯೋಗೇಶ ಮಠದ, ರೇಖಾ ಅಪ್ಪರಾವ ಸೌದಿ, ಡಾ. ಸಿ.ಆನಂದರಾವ, ಮಂಜುನಾಥ ಮುದ್ದಾ, ವಿಜಯಕುಮಾರ ಅಷ್ಟೂರೆ, ಸಿದ್ಧಾರೂಢ ಭಾಲ್ಕೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.