
ಬೀದರ್: ‘ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬ್ರಿಮ್ಸ್) ನಡೆದಿರುವ ಅಕ್ರಮದ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿಗೆ ವಹಿಸಲಾಗಿದ್ದು, ಅವರು ಕೊಡುವ ವರದಿ ಆಧರಿಸಿ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಮ್ಸ್‌ನಲ್ಲಿ ನಡೆದಿರುವ ಅಕ್ರಮದ ತನಿಖೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಪತ್ರ ಬರೆದಿದ್ದೆ. ಅವರು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಬೀದರ್ ಜಿಲ್ಲಾಧಿಕಾರಿ ಕೂಡ ವರದಿ ಕೊಟ್ಟಿದ್ದಾರೆ. ನಿವೃತ್ತ ನ್ಯಾಯಾಧೀಶರಿಂದ ಪ್ರಾಥಮಿಕ ಹಂತದ ವರದಿ ಕೂಡ ಬಂದಿದೆ ಎಂದರು.
ಬ್ರಿಮ್ಸ್ ಒಂದಿಲ್ಲೊಂದು ಕಾರಣದಿಂದ ಚರ್ಚೆಯಲ್ಲಿದೆ. ಅದನ್ನು ಸರಿಪಡಿಸಬೇಕೆಂದು ತಾಕೀತು ಮಾಡಿದರೂ ಆ ಕೆಲಸವಾಗಿಲ್ಲ. ಅವರ ಖಾತೆಯಲ್ಲಿಯೇ ₹1 ಕೋಟಿಗೂ ಅಧಿಕ ಹಣವಿದೆ. ಆದರೆ, ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಇಂಜೆಕ್ಷನ್, ಔಷಧ ಸೇರಿದಂತೆ ರೋಗಿಗಳಿಗೆ ಯಾವುದೂ ಸಕಾಲಕ್ಕೆ ಸಿಗುತ್ತಿಲ್ಲ. ಲಭ್ಯವಿದ್ದರೂ ಕೊಡುತ್ತಿಲ್ಲ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
‘ನಿಯಮ ಉಲ್ಲಂಘಿಸಿ ವೈದ್ಯರ ನೇಮಕಾತಿ’
ಬ್ರಿಮ್ಸ್‌ನಲ್ಲಿ 40 ಜನ ತಜ್ಞ ವೈದ್ಯರ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ನಿಯಮ ಅನುಸರಿಸಿಲ್ಲ. ‘ಡಿ‘ ಗ್ರುಪ್ ನೌಕರರಿಗೆ ಸಂಬಳ ಕೊಟ್ಟಿಲ್ಲ. ಕೇವಲ ಕೊಟೇಶನ್ ಮೇಲೆ ಔಷಧಿ ಖರೀದಿಸಿದ್ದಾರೆ. ಟೆಂಡರ್ ಕರೆದಿಲ್ಲ. ಇದೆಲ್ಲ ಸರ್ಕಾರದ ನಿಯಮಗಳ ಸ್ಪಷ್ಟ ಉಲ್ಲಂಘನೆ. ನಿವೃತ್ತ ನ್ಯಾಯಾಧೀಶರಿಂದ ತನಿಖೆ ಪೂರ್ಣಗೊಂಡ ಬಳಿಕ ಕ್ರಮ ಜರುಗಿಸಿ, ಬ್ರಿಮ್ಸ್‌ಗೆ ಕಾಯಕಲ್ಪ ನೀಡಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆ ಆಶ್ವಾಸನೆ ನೀಡಿದರು.
ಕ್ಯಾಥ್‌ಲ್ಯಾಬ್ ಜಯದೇವ ವ್ಯಾಪ್ತಿಗೆ
‘ಬೀದರ್‌ನ ಬ್ರಿಮ್ಸ್‌ನಲ್ಲಿ ಈಗಾಗಲೇ ಕ್ಯಾಥ್‌ಲ್ಯಾಬ್ ಸಿದ್ಧಗೊಂಡಿದೆ. ನರ್ಸಿಂಗ್ ಸ್ಟಾಫ್ ಬಂದಿದ್ದಾರೆ. ಆದರೆ, ಕಾರ್ಡಿಯೊಲಜಿಸ್ಟ್ ಹಾಗೂ ತಂತ್ರಜ್ಞರು ಬಂದಿಲ್ಲ. ಅನೇಕ ಸಲ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೂ ಯಾರೂ ಆಸಕ್ತಿ ತೋರಿಲ್ಲ. ಆದಕಾರಣ ಕಲಬುರಗಿಯ ಜಯದೇವ ಹೃದ್ರೋಗ ಸಂಸ್ಥೆಯ ವ್ಯಾಪ್ತಿಗೆ ಕ್ಯಾಥ್‌ಲ್ಯಾಬ್ ತೆಗೆದುಕೊಳ್ಳಬೇಕು. ಅಲ್ಲಿನ ಇಬ್ಬರು ತಜ್ಞ ವೈದ್ಯರನ್ನು ಇಲ್ಲಿಗೆ ನಿಯೋಜಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಆದಷ್ಟು ಶೀಘ್ರ ಈ ಕೆಲಸ ಆಗುವಂತೆ ಮಾಡಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
‘ಬಿಹಾರ ಚುನಾವಣೆ ನಂತರ ದೇಶದಲ್ಲಿ ಬದಲಾವಣೆ’
‘ಬಿಹಾರ ಚುನಾವಣೆಯ ಫಲಿತಾಂಶದ ನಂತರ ಇಡೀ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಸಲ ಬಿಹಾರದಲ್ಲಿ ಕಾಂಗ್ರೆಸ್–ಆರ್‌ಜೆಡಿ ಹಾಗೂ ಇತರೆ ಪಕ್ಷಗಳ ಮೈತ್ರಿಕೂಟ ಜಯ ಗಳಿಸುವುದು ಖಚಿತ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಬದಲಾವಣೆಯ ಗಾಳಿ ಬೀಸಿದೆ ಎಂದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಮತ ಕಳ್ಳತನ ಮಾಡಿರುವುದು ಪ್ರತಿಯೊಬ್ಬರಿಗೂ ಗೊತ್ತಾಗಿದೆ. ಜನ ಈಗ ಜಾಗೃತರಾಗಿದ್ದಾರೆ. ಬಿಹಾರ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.