ಬಸವಕಲ್ಯಾಣ: ‘ಗಯಾದಲ್ಲಿನ ಮಹಾಬೋಧಿ ಮಹಾವಿಹಾರದ ನಿರ್ವಹಣಾ ಸಮಿತಿಗೆ ಬೌದ್ಧರನ್ನು ನೇಮಿಸಬೇಕು. ಅನ್ಯ ಧರ್ಮೀಯರನ್ನು ಪರಿಗಣಿಸಬಾರದು’ ಎಂದು ಭಾರತೀಯ ಬೌದ್ಧ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಮನೋಹರ ಮೋರೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಭಾರತೀಯ ಬೌದ್ಧ ಮಹಾಸಭಾದಿಂದ ಜನಾಕ್ರೋಶ ಆಂದೋಲನ ನಿಮಿತ್ತ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
‘ಮಹಾವಿಹಾರದಲ್ಲಿ ಹಿಂದೂ ಧರ್ಮೀಯರನ್ನೂ ನೇಮಿಸಬೇಕು ಎಂದು 1949ರಲ್ಲಿ ರೂಪಿಸಿದ ನಿಯಮ ರದ್ದುಗೊಳಿಸಬೇಕು. ದೇಶದಲ್ಲಿನ ಅನ್ಯ ಧರ್ಮೀಯರ ಶ್ರದ್ಧಾ ಕೇಂದ್ರಗಳಲ್ಲಿ ಆಯಾ ಧರ್ಮದವರೇ ಅರ್ಚಕರು, ಆಡಳಿತ ಸಮಿತಿಯವರು ಇರುವಾಗ ಇಲ್ಲೇಕೆ ಈ ರೀತಿಯ ತಾರತಮ್ಯ’ ಎಂದು ಪ್ರಶ್ನಿಸಿದರು.
ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಮನೋಹರ ಮೈಸೆ ಮಾತನಾಡಿ,‘ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ದೀಕ್ಷೆ ಪಡೆದ ನಾಗಪುರದ ದೀಕ್ಷಾ ಭೂಮಿ ಮತ್ತು ಅವರ ಜನ್ಮಸ್ಥಾನವಾದ ಮಹುನಲ್ಲಿರುವ ಸ್ಥಳ ನಿರ್ವಹಣೆಗಾಗಿ ಮಹಾಸಭಾಕ್ಕೆ ಬಿಟ್ಟುಕೊಡಬೇಕು. ದೀಕ್ಷಾ ಭೂಮಿಯ ದಾಖಲೆಗಳು ಮಹಾಸಭಾ ಹೆಸರಲ್ಲಿದ್ದರೂ ಅದಕ್ಕೆ ಮೀನಮೆಷ ಎಣಿಸಲಾಗುತ್ತಿದೆ’ ಎಂದು ದೂರಿದರು.
ಮಹಾಸಭಾದ ಕೇಂದ್ರ ಕಾರ್ಯಕಾರಿಣಿ ಸದಸ್ಯೆ ವೈಶಾಲಿ ಮೋರೆ ಮಾತನಾಡಿ,‘ಬೌದ್ಧ ಧರ್ಮೀಯರನ್ನು ಬೇಕೆಂತಲೇ ಕಡೆಗಣಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ರೀತಿಯ ಭೇದಭಾವದ ವಿರುದ್ಧ ಹೋರಾಟ ತೀವ್ರಗೊಳಿಸಲಾಗುತ್ತದೆ’ ಎಂದರು.
ಮಹಾಸಭಾದ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುರೇಖಾ ಗೋಡಬೋಲೆ, ಲಲಿತಾ ಶಿಂಧೆ, ಮುಖಂಡರಾದ ಪಿಂಟು ಕಾಂಬಳೆ, ಸಿಕಂದರ ಶಿಂಧೆ, ಹತ್ಯಾಳ ಭಂತೆ ಧಮ್ಮನಾಗ, ವಿಜಯಕುಮಾರ ಡಾಂಗೆ, ಗೌತಮ ಜ್ಯಾಂತೆ, ಚೇತನ ಕಾಡೆ ಮಾತನಾಡಿದರು.
ಮಹಾತ್ಮ ಗಾಂಧಿ ಚೌಕ್‌ದಿಂದ ಮುಖ್ಯರಸ್ತೆ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಉಪ ವಿಭಾಗಾಧಿಕಾರಿ ಮುಕುಲ್ ಜೈನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.