ADVERTISEMENT

ಸಂತಪೂರ: ಪ್ರಯಾಣಿಕರಿಗೆ ರಸ್ತೆಯೇ ತಂಗುದಾಣ

ಬೀದರ್‌ ಜಿಲ್ಲೆಯ ಅತಿ ದೊಡ್ಡ ಹೋಬಳಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 6:00 IST
Last Updated 17 ನವೆಂಬರ್ 2025, 6:00 IST
ಔರಾದ್ ತಾಲ್ಲೂಕಿನ ಸಂತಪೂರನಲ್ಲಿ ವಿದ್ಯಾರ್ಥಿಗಳು ಬಸ್ ತಂಗುದಾಣ ವ್ಯವಸ್ಥೆ ಮಾಡುವಂತೆ ಪ್ರತಿಭಟನೆ ನಡೆಸಿದರು
ಔರಾದ್ ತಾಲ್ಲೂಕಿನ ಸಂತಪೂರನಲ್ಲಿ ವಿದ್ಯಾರ್ಥಿಗಳು ಬಸ್ ತಂಗುದಾಣ ವ್ಯವಸ್ಥೆ ಮಾಡುವಂತೆ ಪ್ರತಿಭಟನೆ ನಡೆಸಿದರು   

ಔರಾದ್: ಬೀದರ್‌ ಜಿಲ್ಲೆಯ ಅತಿ ದೊಡ್ಡ ಹೋಬಳಿ ಕೇಂದ್ರ ಎನಿಸಿಕೊಂಡ ಸಂತಪೂರದಲ್ಲಿ ಬಸ್‌ ತಂಗುದಾಣದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡಬೇಕಾಗಿದೆ.

ಸಂತಪೂರ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರ ಸ್ಥಾನ. ಸುಮಾರು 40 ಹಳ್ಳಿ ಹಾಗೂ ತಾಂಡಾ ಹೊಂದಿರುವ ದೊಡ್ಡ ಹೋಬಳಿ ಕೇಂದ್ರ. ಆದರೆ ಇಲ್ಲಿ ಒಂದು ತಂಗುದಾಣದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಮಳೆ, ಬಿಸಿಲಲ್ಲಿ ರಸ್ತೆ ಮೇಲೆ ಬಸ್‌ಗಾಗಿ ಕಾಯಬೇಕಾದ ಅನಿವಾರ್ಯತೆ ಇದೆ.

ಸಂತಪೂರಗೆ ಬರುವ ಪ್ರಯಾಣಿಕರು ಬಸವೇಶ್ವರ ವೃತ್ತದ ಪಕ್ಕದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿ ಆಶ್ರಯ ಪಡೆಯುತ್ತಿದ್ದರು. ಆದರೆ ಈಚೆಗೆ ಕಚೇರಿಗೆ ಗೇಟ್ ಹಾಕಿ ಪ್ರಯಾಣಿಕರು ಬಾರದಂತೆ ತಡೆದಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಇದು ನಮ್ಮ ಜಾಗ ಇಲ್ಲಿ ಪ್ರಯಾಣಿಕರಿಗೆ ಕೂಡಲು ಅವಕಾಶವಿಲ್ಲ ಹೇಳುತ್ತಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಸ್ಥಳೀಯ ಮುಖಂಡ ಸಾಯಿಕುಮಾರ ಘೋಡ್ಕೆ ತಿಳಿಸಿದ್ದಾರೆ.

ADVERTISEMENT

ಪ್ರಯಾಣಿಕರ ಸಮಸ್ಯೆ ನಮಗೆ ನೋಡಲು ಆಗುತ್ತಿಲ್ಲ. ಹೆದ್ದಾರಿ ಪ್ರಾಧಿಕಾರದವರು ಇಲ್ಲವೇ ಸರ್ಕಾರದವರು ತಂಗುದಾಣದ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲವಾದಲ್ಲಿ ನಾವು ಪ್ರಯಾಣಿಕರ ಜತೆ ಸೇರಿ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಸಂತಪೂರನಲ್ಲಿ ಕಳೆದ ಕೆಲ ವರ್ಷಗಳ ಹಿಂದೆ ಊರು ಹೊರಗೆ ಬಸ್ ನಿಲ್ದಾಣ ಕಟ್ಟಿದ್ದಾರೆ. ಆದರೆ ಅದು ಉಪಯೋಗಕ್ಕೆ ಬಾರದೆ ಹಾಳು ಬಿದ್ದಿದೆ. ಪ್ರಯಾಣಿಕರಿಗೆ ಉಪಯೋಗವಾಗುವ ಸ್ಥಳದಲ್ಲಿ ಬಸ್ ತಂಗುದಾಣದ ವ್ಯವಸ್ಥೆ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಪೂರ ಹೇಳಿದ್ದಾರೆ.

ಬಸ್ ತಂಗುದಾಣದ ಸಮಸ್ಯೆ ಜತೆಗೆ ಅನೇಕ ಕಡೆ ಬಸ್ಗಳ ಕೊರತೆ ಇದೆ. ವಿಶೇಷವಾಗಿ ಬೀದರ್-ಔರಾದ್ ಮಾರ್ಗದಲ್ಲಿ ಸಾಮಾನ್ಯ ಬಸ್‌ಳ ಓಡಾಟ ಸಂಖ್ಯೆ ಕಡಿಮೆ ಇದೆ. ಜತೆಗೆ ಬೆಳಿಗ್ಗೆ ಹಾಗೂ ಸಂಜೆ ಪ್ರಯಾಣಿಕರ ದಟ್ಟಣೆ ಅನುಸಾರ ಬಸ್ ಓಡಿಸುತ್ತಿಲ್ಲ ಎಂದು ಅವರು ಸಾರಿಗೆ ಸಂಸ್ಥೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರ ಸಮಸ್ಯೆ ನಮಗೆ ನೋಡಲು ಆಗುತ್ತಿಲ್ಲ. ಸಂಬಂಧಿತರು ಬಸ್ ತಂಗುದಾಣದ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲವಾದರೆ ನಾವು ಪ್ರಯಾಣಿಕರ ಜೊತೆ ಸೇರಿ ಹೋರಾಟ ಮಾಡುತ್ತೇವೆ 
-ಸಾಯಿಕುಮಾರ ಘೋಡ್ಕೆ, ಮುಖಂಡರು ಸಂತಪೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.