ಕಟ್ಟಿತೂಗಾಂವ್ (ಬೀದರ್ ಜಿಲ್ಲೆ): ಮೃತ ಯುವ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಳ್ ಅವರ ಇಲ್ಲಿನ ಮನೆಗೆ ಪರಿಸರ–ಅರಣ್ಯ ಖಾತೆ ಸಚಿವ ಈಶ್ವರ ಬಿ. ಖಂಡ್ರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಮುಖಂಡರು ಭಾನುವಾರ ಪ್ರತ್ಯೇಕವಾಗಿ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಮಧ್ಯಾಹ್ನ ಈಶ್ವರ ಬಿ. ಖಂಡ್ರೆ ಅವರು ಸಚಿನ್ ಅವರ ಮನೆಗೆ ಬರುತ್ತಿದ್ದಂತೆ ಅವರ ಸಹೋದರಿಯರು ಪೊಲೀಸ್ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಠಾಣೆಗೆ ಹೋದಾಗ ಪೊಲೀಸರು ಸರಿಯಾಗಿ ನಡೆದುಕೊಳ್ಳಲಿಲ್ಲ. ನಮ್ಮ ದೂರು ಸ್ವೀಕರಿಸಲಿಲ್ಲ. ಒಂದು ವೇಳೆ ನಾವು ಕೊಟ್ಟಿದ್ದ ದೂರು ಸ್ವೀಕರಿಸಿ, ತನಿಖೆ ನಡೆಸಿದ್ದರೆ ಸಚಿನ್ ಬದುಕುಳಿಯುತ್ತಿದ್ದ. ಈಗೇಕೆ ಇಲ್ಲಿಗೆ ಬಂದಿದ್ದೀರಿ. ನೀವು ಮೊದಲು ಇಲ್ಲಿಂದ ಹೊರನಡೆಯಬೇಕು’ ಎಂದು ಸಚಿವರ ಸಮ್ಮುಖದಲ್ಲೇ ಏರಿದ ದನಿಯಲ್ಲಿ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮೆಗೌಡ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಮನೆಯಿಂದ ನಿರ್ಗಮಿಸಿದರು.
‘ನಮ್ಮ ಸಹೋದರನ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಘಟನೆ ನಡೆದು ನಾಲ್ಕು ದಿನಗಳಾದರೂ ಮರಣ ಪತ್ರದಲ್ಲಿ ಉಲ್ಲೇಖಿಸಿರುವ ಹೆಸರುಗಳ ವ್ಯಕ್ತಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿಲ್ಲ. ಪೊಲೀಸರ ಮೇಲೆ ನಂಬಿಕೆ ಇಲ್ಲದಂತಾಗಿದೆ’ ಎಂದು ಸಚಿನ್ ಸಹೋದರಿಯರಾದ ಸವಿತಾ, ಸಂಗೀತಾ, ಸುಜಾತಾ ಗೋಳು ತೋಡಿಕೊಂಡರು.
‘ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬೀದರ್ ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ವತಂತ್ರ ತನಿಖಾ ಸಂಸ್ಥೆಯಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಈಗಾಗಲೇ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೇನೆ. ತನಿಖೆಯಿಂದ ಸತ್ಯಾಂಶ ಹೊರಬಂದ ನಂತರ ಸಚಿನ್ ಸಾವಿಗೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಈಶ್ವರ ಖಂಡ್ರೆ ಭರವಸೆ ನೀಡಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ‘ಸಚಿನ್ ಪಾಂಚಾಳ್ ಅವರ ಕುಟುಂಬಕ್ಕೆ ವೈಯಕ್ತಿಕ ಹಾಗೂ ಸರ್ಕಾರದಿಂದ ಜಂಟಿಯಾಗಿ ₹ 10 ಲಕ್ಷ ಪರಿಹಾರ ನೀಡಲಾಗುವುದು. ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ಕೊಡಿಸುವ ಬಗ್ಗೆ ಸಿಎಂ ಜತೆ ಚರ್ಚಿಸುತ್ತೇನೆ’ ಎಂದರು.
ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇತರೆ ಮುಖಂಡರು ಸಂಜೆ ಭೇಟಿ ಕೊಟ್ಟರು. ಮುಚ್ಚಿದ ಲಕೋಟೆಯಲ್ಲಿ ಸಚಿನ್ ಅವರ ಸಹೋದರಿಯರಿಗೆ ನಗದು ಪರಿಹಾರ ಕೊಡಲು ಮುಂದಾದರು. ಆದರೆ, ಅವರ ಸಹೋದರಿಯರು ಅದನ್ನು ತಿರಸ್ಕರಿಸಿದರು.
ಬಳಿಕ ವಿಜಯೇಂದ್ರ ಮಾತನಾಡಿ, ಸಚಿನ್ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ಕೊಡಬೇಕು. ₹ 1 ಕೋಟಿ ಪರಿಹಾರ ನೀಡಬೇಕು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಸಚಿವ ಪ್ರಿಯಾಂಕ್ ಖರ್ಗೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ಮುಖ್ಯಮಂತ್ರಿಯವರು ಖರ್ಗೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.