ADVERTISEMENT

ಔರಾದ್: ಇಬ್ಬರು ಬಾಲಕಾರ್ಮಿಕರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 2:31 IST
Last Updated 17 ಜುಲೈ 2025, 2:31 IST
ತಹಶೀಲ್ದಾರ್ ಮಹೇಶ ಪಾಟೀಲ ನೇತೃತ್ವದ ತಂಡ ಔರಾದ್ ಪಟ್ಟಣದ ಅಂಗಡಿಗಳಿಗೆ ಭೇಟಿ ನೀಡಿ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳದಂತೆ ಜಾಗೃತಿ ಮೂಡಿಸಿದರು
ತಹಶೀಲ್ದಾರ್ ಮಹೇಶ ಪಾಟೀಲ ನೇತೃತ್ವದ ತಂಡ ಔರಾದ್ ಪಟ್ಟಣದ ಅಂಗಡಿಗಳಿಗೆ ಭೇಟಿ ನೀಡಿ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳದಂತೆ ಜಾಗೃತಿ ಮೂಡಿಸಿದರು   

ಔರಾದ್: ತಹಶೀಲ್ದಾರ್ ಮಹೇಶ ಪಾಟೀಲ ನೇತೃತ್ವದಲ್ಲಿ ಅಧಿಕಾರಿಗಳು ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಬಾಲ ಕಾರ್ಮಿಕರನ್ನು ಪತ್ತೆ ಮಾಡಿದರು.

ಫುಟ್‌ವೇರ್ ಹಾಗೂ ಹೂವಿನ ಅಂಗಡಿಯಲ್ಲಿ ಕೆಲಸ ಮಾಡು‌ವ ಇಬ್ಬರು ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದರು.

‘18 ವರ್ಷದ ಒಳಗಿನ ಮಕ್ಕಳು ಯಾವುದೇ ಕಾರಣಕ್ಕೂ ಕೆಲಸ ಮಾಡುವಂತಿಲ್ಲ. ಕೆಲಸ ಮಾಡಿಸಿಕೊಳ್ಳುವಂತಿಲ್ಲ. ಶಿಕ್ಷಣ ಪ್ರತಿ ಮಗುವಿನ ಹಕ್ಕು. ಬಡ ಪಾಲಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗದಿದ್ದರೆ ಅಂಥ ಮಕ್ಕಳಿಗೆ ಸರ್ಕಾರದ ವತಿಯಿಂದ ಅಗತ್ಯ ವ್ಯವಸ್ಥೆ ಮಾಡಲಾಗುವುದು’ ಎಂದು ತಹಶೀಲ್ದಾರ್ ಜನರಿಗೆ ಮಾಹಿತಿ ನೀಡಿದರು.

ADVERTISEMENT

‘ಅಂಗಡಿ ಮಾಲೀಕರು ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಅಪರಾಧ. ಇಂಥ ಪ್ರಕರಣಗಳು ಪತ್ತೆಯಾದರೆ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಹೇಳಿದರು.

ಪಿಎಸ್‌ಐ ರೇಣುಕಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರ ಮೇತ್ರೆ, ಕಾರ್ಮಿಕ ನಿರೀಕ್ಷಕ ರಾಹುಲ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಗೀತಾ ಹಾಗೂ ಇತರರು ಇದ್ದರು.

ಕಮಲನಗರ ಪಟ್ಟಣದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಬಾಲಕಾರ್ಮಿಕ ಕಿಶೋರ ಕಾರ್ಮಿಕರನ್ನು ರಕ್ಷಿಸಿದರು

ಬಾಲಕಾರ್ಮಿಕ ಕಿಶೋರ ಕಾರ್ಮಿಕರ ರಕ್ಷಣೆ

ಕಮಲನಗರ: ಪಟ್ಟಣದ ರೈಲು ನಿಲ್ದಾಣ ಬಸ್ ನಿಲ್ದಾಣ ಹೋಟೆಲ್‌ ಮತ್ತು ಅಂಗಡಿಗಳ ಮೇಲೆ ಮಕ್ಕಳ ಕಾವಲು ಸಮಿತಿ ಮಕ್ಕಳ ರಕ್ಷಣಾ ಸಮಿತಿ ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ಕಾವಲು ಸಮಿತಿಗಳ ನೇತೃತ್ವದ ತಂಡ ದಾಳಿ ನಡೆಸಿ ಒಬ್ಬ ಬಾಲಕಾರ್ಮಿಕ ಹಾಗೂ ಮೂವರು ಕಿಶೋರ ಕಾರ್ಮಿಕರನ್ನು ರಕ್ಷಿಸಿದೆ. ನಾಲ್ವರನ್ನು ತಹಶೀಲ್ದಾರ್ ಅಮೀತಕುಮಾರ ಕುಲಕರ್ಣಿ ಅವರ ಮುಂದೆ ಹಾಜರು ಪಡಿಸಿ ದಾಖಲೆ ಪರಿಶೀಲಿಸಲಾಯಿತು.

ಮೂವರು ಕಿಶೋರ ಕಾರ್ಮಿಕರ ತಂದೆ–ತಾಯಿಗಳನ್ನು ಕರೆಸಿ ಅವರನ್ನು ಪಾಲಕರಿಗೆ ಒಪ್ಪಿಸಲಾಯಿತು. ಕಾರ್ಮಿಕ ಇಲಾಖೆ ತಾಲ್ಲೂಕು ನಿರೀಕ್ಷಕ ರಾಹುಲ್ ಮಾತನಾಡಿ‘ಯಾವುದೇ ಅಂಗಡಿ ಸಂಘ-ಸಂಸ್ಥೆಗಳ ಮಾಲೀಕರು ಬಾಲ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಲಪ್ಪ.ಡಿ ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ ಸಿಬ್ಬಂದಿ ಮಹೇಶ ಅಶ್ವಿನಿ ಮಕ್ಕಳ ಸಹಾಯವಾಣಿ ಸಿಬ್ಬಂದಿ ಸುನೀಲ ಸಂಗೀತಾ ಕರ್ನಾಟಕ ಪಬ್ಲಿಕ ಶಾಲೆಯ ಮುಖ್ಯಗುರು ಸಂಜೀವಕುಮಾರ ಡೊಂಗರೆ ಮತ್ತು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.