
್ರಾಣಾಂತಿಕ ‘ಮಾಂಜಾ’ ನಿಷೇಧ
ಬೀದರ್: ಮಾಂಜಾ ದಾರದಿಂದ ಯುವಕ ಸೇರಿದಂತೆ ನಾಲ್ವರಿಗೆ ಗಾಯಗಳಾದ ಘಟನೆ ಹೈದರಾಬಾದ್–ಮುಂಬೈ ರಾಷ್ಟ್ರೀಯ ಹೆದ್ದಾರಿ ಮೇಲಿರುವ ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಸಮೀಪ ಗುರುವಾರ ನಡೆದಿದೆ.
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್‌ನಿಂದ ಮನ್ನಾಏಖ್ಖೆಳ್ಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಬೀದರ್ ತಾಲ್ಲೂಕಿನ ರಂಜೋಳಖೇಣಿ ಗ್ರಾಮದ ಯುವಕ ದಿಲೀಪ್ ಅವರ ಕೈಗೆ ಮಾಂಜಾ ಸಿಲುಕಿಕೊಂಡು ಬೆರಳು ಕತ್ತರಿಸಿದ್ದು, ತೀವ್ರ ರಕ್ತಸ್ರಾವವಾಗಿದೆ. ಅವರ ಬೆರಳಿಗೆ ಒಂಬತ್ತು ಹೊಲಿಗೆಗಳು ಬಿದ್ದಿದ್ದು, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಅದೇ ಮಾರ್ಗದಿಂದ ಹೋಗುತ್ತಿದ್ದ ಮೂವರು ಹೆಣ್ಣು ಮಕ್ಕಳ ಕಾಲಿಗೆ ಮಾಂಜಾ ಸಿಕ್ಕಿ, ಗಾಯಗಳಾಗಿವೆ.
‘ನಾನು ನನ್ನ ಕೆಲಸದ ನಿಮಿತ್ತ ಬೈಕ್‌ನಲ್ಲಿ ಹೋಗುತ್ತಿದ್ದೆ. ಮಂಗಲಗಿ ಟೋಲ್‌ಗೇಟ್ ಬಳಿ ಎಲ್ಲಿಂದಲೋ ಕತ್ತರಿಸಿದ ಗಾಳಿಪಟ ಬಂತು, ಅದೇ ವೇಳೆ ಅಲ್ಲಿಂದ ಲಾರಿಯೊಂದು ಹಾದು ಹೋಯಿತು. ಇದರಿಂದ ಅದು ಬಹಳ ವೇಗವಾಗಿ ಬಂದು ನನ್ನ ಕೈಗೆ ಸಿಕ್ಕಿಕೊಂಡು, ಬೆರಳು ಕತ್ತರಿಸಿತು. ಅಲ್ಲಿಯೇ ಇದ್ದ ಮೂವರು ಹೆಣ್ಣು ಮಕ್ಕಳ ಕಾಲುಗಳಿಗೂ ಗಾಯಗಳಾಗಿವೆ’ ಎಂದು ದಿಲೀಪ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಸೇತುವೆ ಬಳಿ ಬುಧವಾರ ಮಾಂಜಾ ಕತ್ತಿಗೆಗೆ ಸಿಲುಕಿ ಛೇದಿಸಿದ್ದರಿಂದ ಸಂಜುಕುಮಾರ್ ಗುಂಡಪ್ಪ ಹೊಸಮನಿ ಮೃತಪಟ್ಟಿದ್ದರು. ಬಳಿಕ ಜಿಲ್ಲಾಡಳಿತವು ಮಾಂಜಾ ನಿಷೇಧಿಸಿತ್ತು. ಆದರೂ ಅವ್ಯಾಹತವಾಗಿ ಅದರ ಬಳಕೆ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.