
ಚಿಟಗುಪ್ಪ(ಹುಮನಾಬಾದ್): ಪಟ್ಟಣದಲ್ಲಿ ಶನಿವಾರ (ಫೆ.22) ನಡೆಯುವ 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಪೂರ್ಣಗೊಂಡಿದ್ದು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕನ್ನಡದ ಬಾವುಟಗಳು ರಾಜಾಜಿಸುತ್ತಿವೆ
ಪಟ್ಟಣದ ಜೈ ಭವಾನಿ ಕಲ್ಯಾಣ ಮಂಟಪದಲ್ಲಿ ನಿರ್ಮಿಸಲಾದ ವೇದಿಕೆಗೆ ಸುಭಾಷ ಐನಾಪೂರೆ ಹೆಸರು ಇಡಲಾಗಿದೆ. ಮಂಟಪಕ್ಕೆ ಬಸವರಾಜ ಮಂಗಲಗಿ, ಮಹಾದ್ವಾರಕ್ಕೆ ವೀರಶೆಟ್ಟಿ ಮಲ್ಲಾ ಬಗದಲ ಹೆಸರಿಡಲಾಗಿದೆ. ಸಮ್ಮೇಳನ ಉದ್ಘಾಟನೆಗೂ ಮುನ್ನ ಬೆಳಿಗ್ಗೆ 8ಗಂಟೆಗೆ ಧ್ವಜಾರೋಹಣ, 9 ಗಂಟೆಗೆ ಸರ್ಕಾರಿ ಹಿರಿಯ ಪ್ರಾಥಮಿಕ (ಸಿ.ಪಿ.ಎಸ್) ಶಾಲೆಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ನೆಹರೂ ಚೌಕ್, ಗಾಂಧಿ ವೃತ್ತದ ಮಾರ್ಗವಾಗಿ ವೇದಿಕೆಗೆ ಭುವನೇಶ್ವರಿ ಭಾವಚಿತ್ರ ಹಾಗೂ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಜಾನಪದ, ಡೊಳ್ಳು ಕುಣಿತ ಸೇರಿದಂತೆ ಇತರ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.
ತಹಶೀಲ್ದಾರ್ ಮಂಜುನಾಥ್ ಪಂಚಾಳ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಚಾಂಗಲೇರಾ ಹಾಗೂ ಚಿಟಗುಪ್ಪ ಹಿರೇಮಠ ಸಂಸ್ಥಾನದ ಗುರುಲಿಂಗ ಶಿವಾಚಾರ್ಯರು ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ಸಾಹಿತಿ ಸಿದ್ದು ಯಾಪಲಪರವಿ ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಅಧ್ಯಕ್ಷತೆವಹಿಸಲಿದ್ದಾರೆ. ಆಶೆಯ ನುಡಿ ಕಸಾಪ ಜಿಲ್ಲಾಧ್ಯಕ್ಷ ಸುರೇಶ್ ಚನ್ನಶೆಟ್ಟಿ , ಧ್ವಜ ಹಸ್ತಾಂತರ ಮಹಾರುದ್ರಪ್ಪ ಆಣದುರೆ ನೆರವೇರಿಸುವವರು.
ಮುಖ್ಯ ಅತಿಥಿಗಳಾಗಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಡಾ.ಭೀಮರಾವ್ ಪಾಟೀಲ, ಶಶೀಲ ಜಿ. ನಮೋಶಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡಾಭಿಮಾನಿಗಳಿಗೆ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಅವರು ಅನ್ನ, ಹುಂಗಿ, ಸಾಂಬಾರ್ ವ್ಯವಸ್ಥೆ ಕಲ್ಪಿಸಲಿಸಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಜನರು ಸೇರುವ ನೀರಿಕ್ಷೆ ಇದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅನೀಲ ಕುಮಾರ ಸಿಂಧೆ ತಿಳಿಸಿದರು.
ಸರ್ವಾಧ್ಯಕ್ಷ ಮಾಣಿಕ ನೇಳಗಿ ಅವರು ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿ 1970ರಲ್ಲಿ ಜನಿಸಿದರು. ಔರಾದ್ ತಾಲ್ಲೂಕಿನಲ್ಲಿ ಖಜಾನೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬದಲಾಗೋಣ, ಭರವಸೆ, ದಾಂಪತ್ಯ ಸವಿ, ಹರಿತವಾಗಲಿ, ಧ್ವನಿಯಾಗಿ ಮಾತನಾಡು ಎಂಬ ಕವನಗಳು ಅವರು ಪ್ರಕಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.