ADVERTISEMENT

ಬೀದರ್‌ | ಸಂಭ್ರಮದಿಂದ ಕ್ರಿಸ್ತನ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 14:45 IST
Last Updated 25 ಡಿಸೆಂಬರ್ 2023, 14:45 IST
ಬೀದರ್‌ನ ಸೇಂಟ್‌ ಪಾಲ್‌ ಮೆಥೊಡಿಸ್ಟ್‌ ಚರ್ಚ್‌ ಆವರಣದಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಸೋಮವಾರ ನಿರ್ಮಿಸಲಾಗಿದ್ದ ಸೇಂಟಾ ಕ್ಲಾಸ್‌ ಪ್ರತಿಕೃತಿ ಎದುರು ಚಿಣ್ಣರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು
ಬೀದರ್‌ನ ಸೇಂಟ್‌ ಪಾಲ್‌ ಮೆಥೊಡಿಸ್ಟ್‌ ಚರ್ಚ್‌ ಆವರಣದಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಸೋಮವಾರ ನಿರ್ಮಿಸಲಾಗಿದ್ದ ಸೇಂಟಾ ಕ್ಲಾಸ್‌ ಪ್ರತಿಕೃತಿ ಎದುರು ಚಿಣ್ಣರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು   

ಬೀದರ್‌: ಯೇಸುಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬದ ರೂಪದಲ್ಲಿ ಕ್ರೈಸ್ತ ಧರ್ಮೀಯರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.

ನಗರದ ಅತಿ ದೊಡ್ಡ ಚರ್ಚ್‌ ಹಾಗೂ ದೀರ್ಘಕಾಲದ ಇತಿಹಾಸ ಹೊಂದಿರುವ ಹಿರಿಮೆಯ ಮಂಗಲಪೇಟ್‌ನ ಸೇಂಟ್‌ ಪಾಲ್‌ ಮೆಥೊಡಿಸ್ಟ್‌ ಚರ್ಚ್‌ನಲ್ಲಿ ಸೋಮವಾರ ಜಾತ್ರೆಯ ವಾತಾವರಣ ಸೃಷ್ಟಿಯಾಗಿತ್ತು. ನಗರದ ವಿವಿಧ ಬಡಾವಣೆಗಳಿಂದ ಜನ ಹೊಸ ಬಟ್ಟೆ ಧರಿಸಿ ಚರ್ಚ್‌ಗೆ ಬಂದು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಇಡೀ ಚರ್ಚ್‌ ಆವರಣ ಜನರಿಂದ ಕಿಕ್ಕಿರಿದು ತುಂಬಿತ್ತು.

ಸೇಂಟ್‌ ಪಾಲ್‌ ಮೆಥೊಡಿಸ್ಟ್‌ ಚರ್ಚ್‌ನ ಸೂಪರಿಟೆಂಡೆಂಟ್‌ ರೆವರೆಂಡ್‌ ನೆಲ್ಸನ್‌ ಸುಮಿತ್ರ ಅವರು ಕೇಕ್‌ ಕತ್ತರಿಸಿ, ಮೊಂಬತ್ತಿ ಬೆಳಗಿಸಿ ಕ್ರಿಸ್‌ಮಸ್‌ ಹಬ್ಬಕ್ಕೆ ಚಾಲನೆ ನೀಡಿದರು.

ADVERTISEMENT

‘ಯೇಸುಕ್ರಿಸ್ತ ಈ ಜಗದ ಉದ್ಧಾರಕ್ಕಾಗಿ ಈ ಧರೆಯ ಮೇಲೆ ಜನ್ಮತಾಳಿದ ದೇವರು. ಎಲ್ಲರ ಪಾಪ, ಕರ್ಮಗಳನ್ನು ತಾನು ಸ್ವೀಕರಿಸಿ ಜಗವನ್ನು ಉದ್ಧರಿಸಿದ ಪ್ರವಾದಿ. ಆದ ಕಾರಣ ಈ ಭೂಮಿಯ ಮೇಲೆ ಹುಟ್ಟಿದವರೆಲ್ಲ ಯೇಸುವಿಗೆ ಸದಾ ಚಿರರುಣಿ ಆಗಿರಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆದು ಎಲ್ಲರಿಗೂ ಒಳಿತು ಮಾಡಬೇಕು’ ಎಂದು ಹೇಳಿದರು.

ಬಡವ ಬಲ್ಲಿದ, ದೀನ ದುರ್ಬಲ ಎನ್ನದೆ ಎಲ್ಲರ ಕಲ್ಯಾಣಕ್ಕಾಗಿ ಯೇಸು ಸಾಕಷ್ಟು ನೋವು ಅನುಭವಿಸಿ ಜೀವ ಕೊಟ್ಟಿದ್ದಾರೆ. ಅವರ ತ್ಯಾಗ, ಬಲಿದಾನ ವ್ಯರ್ಥ ಆಗಬಾರದು. ಸದಾ ಜಗದ ಹಿತಕ್ಕಾಗಿ ಕೆಲಸ ಮಾಡಬೇಕು. ಬೈಬಲ್‌ ಕೂಡ ಇದೇ ಹೇಳುತ್ತದೆ ಎಂದು ತಿಳಿಸಿದರು.

ಇನ್ನು, ಚರ್ಚ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಪೌರಾಡಳಿತ ಸಚಿವ ರಹೀಂ ಖಾನ್‌, ಮುಖಂಡರಾದ ಬಂಡೆಪ್ಪ ಕಾಶೆಂಪುರ್‌, ಅಬ್ದುಲ್‌ ಮನ್ನಾನ್‌ ಸೇಠ್‌, ಸಂಜಯ ಜಾಹಗೀರದಾರ್‌ ಸೇರಿದಂತೆ ಹಲವರು ಸಾಕ್ಷಿಯಾದರು. ಕ್ರೈಸ್ತ ಧರ್ಮೀಯರಿಗೆ ಹಬ್ಬದ ಶುಭ ಕೋರಿದರು. ಚರ್ಚ್‌ ಆವರಣದಲ್ಲಿದ್ದ ಸೇಂಟಾ ಕ್ಲಾಸ್‌ ಪ್ರತಿಕೃತಿ, ಬೆತ್ಲೆಹ್ಯಾಮ್‌ ಪ್ರತಿಕೃತಿ, ನಕ್ಷತ್ರ ಮಾದರಿ ಎದುರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಶಹಾಪುರ ಗೇಟ್‌ ಸಮೀಪದ ಕ್ಯಾಥೋಲಿಕ್ ಚರ್ಚ್‌, ಗುಂಪಾ, ನಾವದಗೇರಿ ಸಮೀಪದ ಇಮ್ಯಾನ್ಯುವೆಲ್‌ ಚರ್ಚ್‌ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಎಲ್ಲ ಚರ್ಚ್‌ಗಳಿಗೂ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಚರ್ಚ್‌ಗಳಲ್ಲಿ ಭಾನುವಾರ ರಾತ್ರಿಯಿಡೀ ಕ್ರಿಸ್ತನ ಗುಣಗಾನ ನಡೆಯಿತು. ಸೋಮವಾರ ಬೆಳಕು ಹರಿಯುತ್ತಿದ್ದಂತೆ ಕ್ರೈಸ್ತರು ಮನೆಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿಸಿದರು. ಅನಂತರ ಬಂಧು ಬಾಂಧವರು, ನೆರೆ ಹೊರೆಯವರು, ಅನ್ಯ ಧರ್ಮೀಯರನ್ನು ಪ್ರೀತಿಯಿಂದ ಮನೆಗೆ ಆಹ್ವಾನಿಸಿ ಸಿಹಿ ತಿನಿಸಿ ಸೌಹಾರ್ದ ತೋರಿದರು.

ಚರ್ಚ್‌ಗಳಿಗೆ ದೀಪಾಲಂಕಾರ

ಔರಾದ್: ತಾಲ್ಲೂಕಿನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಸಡಗರ–ಸಂಭ್ರಮದಿಂದ ಆಚರಿಸಲಾಯಿತು.

ಔರಾದ್, ಸಂತಪುರ, ಎಕಂಬಾ ಚರ್ಚ್‌ಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ. ಬೆಳಿಗ್ಗೆಯಿಂದಲೇ ವಿಶೇಷ ಪ್ರಾರ್ಥನೆ ನಡೆಯಿತು.

ಕೊಳ್ಳೂರ್: ಚರ್ಚ್‌ನಲ್ಲಿ ಕ್ರೈಸ್ತರು ಪ್ರಾರ್ಥನೆ

ಕೊಳ್ಳೂರ್ :ಇಲ್ಲಿನ ಚರ್ಚ್‌ನಲ್ಲಿ ಕೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಫಾಸ್ಟರ್ ಸಂಜುಕುಮಾರ್ ಕ್ರಿಸ್‌ಮಸ್ ಸಂದೇಶ ಸಾರಿದರು.

ಯುವ ನಾಯಕ ಸುಧಾಕರ್ ಕೊಳ್ಳೂರ್ ಮಾತನಾಡಿ,‘ಎಲ್ಲರೂ ಪ್ರೀತಿ ವಿಶ್ವಾಸದಿಂದ ಬಾಳಬೇಕು’ ಎಂದರು.

ಮುಖಂಡರಾದ ಸಾಗರ ಪಾಟೀಲ ಮಾತನಾಡಿ,‘ಕ್ರಿಸ್‌ಮಸ್ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲರನ್ನೂ ಸೇರಿಸಿ ಸಂಭ್ರಮದಿಂದ ಆಚರಿಸುತ್ತಿರುವುದು ಸಮಾಜಕ್ಕೆ ಒಂದು ಒಳ್ಳೆ ಸಂದೇಶ’ ಎಂದು ಹೇಳಿದರು.

ಸೂರ್ಯಕಾಂತ ಖಳಗೆ, ರಾಜಕುಮಾರ, ಮೌಲಾನಸಾಬ್, ವಿಜಯಕುಮಾರ, ಗ್ರಾಮ ಪಂಚಾಯಿತಿ ಸದಸ್ಯ ದತ್ತಾತ್ರಿ, ನಾಗನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

‘ಯೇಸು ಮಾರ್ಗದಲ್ಲಿ ನಡೆಯಿರಿ’

ಕಮಲನಗರ: ತಾಲ್ಲೂಕಿನಾದ್ಯಂತ ಕ್ರಿಸ್‌ಮಸ್ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಮೆಥೊಡಿಸ್ಟ್ ಚರ್ಚ್‌ನಲ್ಲಿ ಫಾಸ್ಟರ್ ಜಿ.ಜಿ.ಜಾಧವ ನೇತೃತ್ವದಲ್ಲಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್‍ಮಸ್ ಆಚರಿಸಲಾಯಿತು.

ಯೇಸು ಮಹಿಮೆ ಅಪಾರ. ಪ್ರತಿಯೊಬ್ಬರೂ ಯೇಸು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಜಿ.ಜಿ.ಜಾಧವ ತಿಳಿಸಿದರು.

ಸುಶೀಲ ಘಾಗರೆ, ನಿಲೇಶ ಘಾಗರೆ, ಲಕ್ಷ್ಮಣ ಘಾಗರೆ, ಶ್ರಾವಣ ಘಾಗರೆ, ಮನೋಹರ ಸೂರ್ಯವಂಶಿ, ಶಿವಾ ಚವಾಣ್, ಜೀವನ ಸೂರ್ಯವಂಶಿ, ಶಾಮ್ಯುವೆಲ್, ಅವಿನಾಶ ಚವಾಣ್ ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.

ತಾಲ್ಲೂಕಿನ ಡಿಗ್ಗಿ, ಮದನೂರ, ಖತಗಾಂವ್, ಸೋನಾಳ, ಡೋಣಗಾಂವ (ಎಂ), ಮುರ್ಕಿ, ಮುಧೋಳ, ಹೊಳಸಮುದ್ರ, ಠಾಣಾಕುಶನೂರ, ಹಂದಿಕೇರಾ, ದಾಬಕಾ ಸೇರಿ ವಿವಿಧ ಗ್ರಾಮಗಳಲ್ಲಿ ಕ್ರೈಸ್ತರು ಕ್ರಿಸ್‌ಮಸ್ ಆಚರಿಸಿದರು.

ಆಣದೂರುವಾಡಿ: ಕ್ರಿಸ್‍ಮಸ್, ವಾಜಪೇಯಿ ಜನ್ಮದಿನ ಆಚರಣೆ

ಜನವಾಡ: ಬೀದರ್ ತಾಲ್ಲೂಕಿನ ಆಣದೂರುವಾಡಿಯ ಔದುಂಬರಲಿಂಗ ಆಶ್ರಮದಲ್ಲಿ ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿ ವತಿಯಿಂದ ಸೋಮವಾರ ಕೇಕ್ ಕತ್ತರಿಸಿ ಕ್ರಿಸ್‍ಮಸ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಜನ್ಮದಿನ ಆಚರಿಸಲಾಯಿತು.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ,‘ಹವಾ ಮಲ್ಲಿನಾಥ ಮಹಾರಾಜರು ಎಲ್ಲೆಡೆ ಸಹೋದರತ್ವ, ಐಕ್ಯತೆಯ ಸಂದೇಶ ನೀಡುತ್ತಿದ್ದಾರೆ. ದೇಶ ಪ್ರೇಮ, ದೇಶಾಭಿಮಾನ ಮೂಡಿಸುತ್ತಿದ್ದಾರೆ. ಮಹಾ ಪುರುಷರ ಜಯಂತಿ ಆಚರಿಸಿ ಯುವಕರಿಗೆ ಸಾಧನೆಗೆ ಪ್ರೇರಣೆ ನೀಡುತ್ತಿದ್ದಾರೆ’ ಎಂದು ಹೇಳಿದರು.

ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬುರಾವ್ ಮದಕಟ್ಟಿ, ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ, ಮುಖಂಡರಾದ ವೈಜಿನಾಥ ಸಿಕೇನಪುರ, ರಾಜಕುಮಾರ ಜಮಾದಾರ, ಆತ್ಮಾರಾವ್ ಪಾಟೀಲ, ದತ್ತಾತ್ರಿ ನಿಟ್ಟೂರೆ, ಪ್ರಕಾಶ ಹಡಪದ ಹಾಗೂ ರಾಜಕುಮಾರ ಜಮಾದಾರ ಉಪಸ್ಥಿತರಿದ್ದರು.

‘ಸಹಬಾಳ್ವೆಯಿಂದ ಬದುಕಿ’

ಭಾಲ್ಕಿ: ‘ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆಯಿಂದ ಜೀವನ ನಡೆಸಲು ಪ್ರತಿಯೊಬ್ಬರೂ ಯೇಸುವಿನ ಸಂದೇಶ ಪಾಲಿಸಬೇಕು’ ಎಂದು ಹೈದರಾಬಾದ್‌ನ ಫಾಸ್ಟರ್ ಅಶೋಕ ಹೇಳಿದರು.

ಪಟ್ಟಣದ ಫೇತ್ ಎಜಿ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೇಸುವಿನ ಕರುಣೆ, ದಯೆ, ಕ್ಷಮಾಗುಣವನ್ನು ನಾವೆಲ್ಲರೂ ಅಳವಡಿಸಿಕೊಂಡು ಉತ್ತಮ ಬದುಕು ಸಾಗಿಸಬೇಕು ಎಂದು ತಿಳಿಸಿದರು.

ಯುವ ಮುಖಂಡ ಸಾಗರ ಈಶ್ವರ ಖಂಡ್ರೆ ಮಾತನಾಡಿದರು.

ಚರ್ಚ್‌ನ ಸಭಾ ಪಾಲಕ, ಘನ ಬೋಧಕ ರಾಜಕುಮಾರ, ಫಾಸ್ಟರ್ ದಯಾನಂದ ವಿಶೇಷ ಪ್ರಾರ್ಥನೆ ನಡೆಸಿಕೊಟ್ಟರು.

ಪುರಸಭೆ ಉಪಾಧ್ಯಕ್ಷ ಅಶೋಕ ಗಾಯಕವಾಡ, ಡಾ.ವಸಂತ ಪವಾರ, ಸಜ್ಜನ್ ಬಳತೆ, ಮುಖಂಡರಾದ ಸಚಿನ್ ಅಂಬೆಸಾಂಗವಿ, ಎಂ.ಪಿ.ರಾಜಕುಮಾರ, ದೇವಿದಾಸ ರೇಷ್ಮೆ, ಲಾಲಪ್ಪ ಸಿಂಧೆ, ಈಶಪ್ಪ ಸಿಂಧೆ, ಸತೀಶ ಮಾಳಿಗೆ, ರತ್ನಪ್ಪ ಸಿಂಧೆ, ಹನಕ್, ಮೊಜೇಸ್, ದೀಪಕ, ಡ್ಯಾನಿಯಲ್, ವಿನೋದ ಹಾಗೂ ಜೀವನ ಬೇದ್ರೆ ಇದ್ದರು.

ಗಮನಸೆಳೆದ ಗೋದಲಿ

ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ್ ಬಿ. ಪಟ್ಟಣದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸ್ತರು ಸಂಭ್ರಮದಿಂದ ಆಚರಿಸಿದರು. ಬೆಳಿಗ್ಗೆ ವಿಶೇಷ ಉಡುಪುಗಳನ್ನು ತೊಟ್ಟು ಚರ್ಚ್‌ಗೆ ಭೇಟಿ ನೀಡಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ಮನೆ ಮನೆಗಳಲ್ಲಿ ಕ್ರಿಸ್‌ಮಸ್ ಮರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಆಕಾಶ ಬುಟ್ಟಿಗಳನ್ನು ಹಾಕಲಾಗಿತ್ತು. ಯೇಸುವಿನ ಹುಟ್ಟು ಹಾಗೂ ಇತಿಹಾಸ ನೆನಪಿಸುವ ಕಲಾಕೃತಿಗಳ ಮೂಲಕ ನಿರ್ಮಿಸಿದ್ದ ಗೋದಲಿ ಗಮನ ಸೆಳೆಯಿತು. ‘ಮನುಷ್ಯನ ತಪ್ಪುಗಳನ್ನು ಕ್ಷಮಿಸುವ ಮೂಲಕ ಆತನನ್ನು ಉತ್ತಮ ದಾರಿಯೆಡೆಗೆ ಕರೆದೊಯ್ಯುವ ಮಹಾನ್ ಗುಣಗಳನ್ನು ಬೆಳೆಸಿಕೊಳ್ಳುವ ಕುರಿತು ಬೋಧಿಸಿದ ಯೇಸುವಿನ ಜನ್ಮದಿನ ಅತ್ಯಂತ ವಿಶೇಷವಾಗಿದೆ’ ಎಂದು ಫಾದರ್ ದೇವದಾಸ ಅನಿಲಕುಮಾರ ಬೆಳ್ಳಿ ಹೇಳಿದರು. ಚರ್ಚ್ ಕಾರ್ಯದರ್ಶಿ ವಿಜಯಕುಮಾರ ಶಾಪೂರಕರ ಖಜಾಂಚಿ ರಾಜು ಹೊರದೊಡ್ಡಿ ವಿಜಯಕುಮಾರ ಚಿಟ್ಟೆ ಸುನಿಲ್ ಚಿಟ್ಟೆ ಸೇರಿದಂತೆ ಇತರರು ಭಾಗವಹಿಸಿದ್ದರು.

ಚರ್ಚ್‌ಗಳ ಮುಂದೆ ಗೋದಲಿ ನಿರ್ಮಾಣ

ಹುಮನಾಬಾದ್: ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಪಟ್ಟಣ ಹೊರವಲಯದ ಆರ್ಬಿಟ್ ಸಂಸ್ಥೆಯಲ್ಲಿ ಗೋದಲಿ ನಿರ್ಮಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಎಲ್ಲಾ ಚರ್ಚ್‌ಗಳ ಮುಂಭಾಗ ಗೋದಲಿಗಳನ್ನು ನಿರ್ಮಿಸಿ ಅದರ ಮುಂಭಾಗದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಬೀದರ್‌ನ ಸೇಂಟ್‌ ಪಾಲ್‌ ಮೆಥೊಡಿಸ್ಟ್‌ ಚರ್ಚ್‌ನಲ್ಲಿ ನಡೆದ ಕ್ರಿಸ್‌ಮಸ್‌ ಕಾರ್ಯಕ್ರಮದಲ್ಲಿ ಕ್ರೈಸ್ತ ಪಾದ್ರಿಗಳು ಕೇಕ್‌ ಕತ್ತರಿಸಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಹಬ್ಬದ ಶುಭ ಕೋರಿದರು
ಕ್ರಿಸ್‌ಮಸ್‌ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್‌ ನಗರಸಭೆ ಅಧ್ಯಕ್ಷ ಮಹಮ್ಮದ್‌ ಗೌಸ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು
ಬೀದರ್‌ನ ಸೇಂಟ್‌ ಪಾಲ್‌ ಮೆಥೊಡಿಸ್ಟ್‌ ಚರ್ಚ್‌ನಲ್ಲಿ ನಿಹಾಲ್‌ ಹಾಗೂ ಅವರ ತಂಡದ 20 ಜನ ಸೇರಿ ಸೃಷ್ಟಿಸಿದ ಬೆತ್ಲೆಹ್ಯಾಮ್‌ ಪ್ರತಿಕೃತಿ
ಔರಾದ್ ತಾಲ್ಲೂಕಿನ ಎಕಂಬಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸ್ಕೃತಿ ಕಾರ್ಯಕ್ರಮ ನಡೆಸಿಕೊಟ್ಟರು
ಕಮಲನಗರದ ಮೆಥೊಡಿಸ್ಟ್‌ ಚರ್ಚ್‌ನಲ್ಲಿ ಕ್ರಿಸ್‌ಮಸ್ ಆಚರಣೆಯಲ್ಲಿ ಭಾಗವಹಿಸಿದ್ದ ಕ್ರೈಸ್ತರು
ಬೀದರ್ ತಾಲ್ಲೂಕಿನ ಆಣದೂರುವಾಡಿಯ ಔದುಂಬರಲಿಂಗ ಆಶ್ರಮದಲ್ಲಿ ಕೇಕ್ ಕತ್ತರಿಸಿ ಕ್ರಿಸ್‍ಮಸ್ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ ಜನ್ಮದಿನ ಆಚರಿಸಲಾಯಿತು
ಭಾಲ್ಕಿಯ ಫೇತ್ ಎಜಿ ಚರ್ಚ್‌ನಲ್ಲಿ ಕೇಕ್ ಕತ್ತರಿಸಿ ಕ್ರಿಸ್‌ಮಸ್ ಆಚರಿಸಲಾಯಿತು
ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ ಬಿ. ಪಟ್ಟಣದ ಮೆಥೊಡಿಸ್ಟ್ ಚರ್ಚ್‌ನಲ್ಲಿ ಕೇಕ್‌ ಕತ್ತರಿಸಲಾಯಿತು
ಹುಮನಾಬಾದ್ ಪಟ್ಟಣ ಹೊರವಲಯದ ಆರ್ಬಿಟ್ ಸಂಸ್ಥೆಯಲ್ಲಿ ಗೋದಲಿ ನಿರ್ಮಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.